ಮಾಜಿ ಕಾಂಗ್ರೆಸ್ ಸಂಸದ ಸಜ್ಜನಕುಮಾರ್ ವಿರುದ್ಧ ಕೊಲೆ, ದಂಗೆ ಆರೋಪ ರೂಪಿಸಿದ ನ್ಯಾಯಾಲಯ

Update: 2021-12-07 15:44 GMT
PTI file picture

ಹೊಸದಿಲ್ಲಿ,ಡಿ.7: 1984ರ ಸಿಖ್ ವಿರೋಧಿ ಹಿಂಸಾಚಾರ ಪ್ರಕರಣವೊಂದರಲ್ಲಿ ಮಾಜಿ ಕಾಂಗ್ರೆಸ್ ಸಂಸದ ಸಜ್ಜನಕುಮಾರ್ ವಿರುದ್ಧ ಕೊಲೆ ಮತ್ತು ದಂಗೆ ಆರೋಪಗಳನ್ನು ಹೊರಿಸಲಾಗಿದೆ.

1984,ಅ.31ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಅವರ ಸಿಖ್ ಅಂಗರಕ್ಷಕರು ಹತ್ಯೆ ಮಾಡಿದ ನಂತರ ದಿಲ್ಲಿಯಲ್ಲಿ ಭಾರೀ ಪ್ರಮಾಣದಲ್ಲಿ ನಡೆದಿದ್ದ ದಂಗೆಗಳಲ್ಲಿ ಗುಂಪುಗಳು ಸಿಕ್ಖರ ಮೇಲೆ ದಾಳಿಗಳನ್ನು ನಡೆಸಿ ಅವರ ಮನೆಗಳಿಗೆ ಬೆಂಕಿ ಹಚ್ಚಿದ್ದವು. ದಿಲ್ಲಿಯೊಂದರಲ್ಲೇ ಸುಮಾರು 3,000 ಸಿಕ್ಖರು ಕೊಲ್ಲಲ್ಪಟ್ಟಿದ್ದರು.
  
ಕುಮಾರ್ ಗುಂಪಿನಲ್ಲಿ ಭಾಗಿಯಾಗಿದ್ದು ಮಾತ್ರವಲ್ಲ,ಸರಸ್ವತಿ ವಿಹಾರ ಪ್ರದೇಶದಲ್ಲಿ ಜಸ್ವಂತ್ ಸಿಂಗ್ ಮತ್ತು ತರುಣ ದಿಲೀಪ ಸಿಂಗ್ ಹತ್ಯೆ ವೇಳೆಯಲ್ಲಿ ಗುಂಪಿನ ನಾಯಕತ್ವವನ್ನೂ ವಹಿಸಿದ್ದರು ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ. ಡಿ.3ರಂದು ಹೊರಡಿಸಲಾಗಿದ್ದ ಈ ಆದೇಶವನ್ನು ಸೋಮವಾರ ಸಾರ್ವಜನಿಕವಾಗಿ ಲಭ್ಯವಾಗಿಸಲಾಗಿದೆ.
 
1984ರ ನ.1ರಂದು ಕುಮಾರ್ ನೇತೃತ್ವದ ಗುಂಪು ಸಿಂಗ್ ದ್ವಯರನ್ನು ಸಜೀವ ದಹನಗೊಳಿಸಿತ್ತು ಎಂದು ಮೃತರ ಕುಟುಂಬಿಕರು ಆರೋಪಿಸಿದ್ದರು. ತಮ್ಮ ಮನೆಗೆ ಬೆಂಕಿ ಹಚ್ಚಿದ್ದ ಗುಂಪಿಗೆ ಕುಮಾರ್ ಪ್ರಚೋದನೆ ನೀಡಿದ್ದರು ಎಂದೂ ಅವರು ಅಪಾದಿಸಿದ್ದಾರೆ.
ನ್ಯಾಯಾಲಯವು ಕುಮಾರ್ ವಿರುದ್ಧ ಲೂಟಿ,ಬೆಂಕಿ ಹಚ್ಚುವಿಕೆ,ಅಕ್ರಮ ಕೂಟ,ಶಿಕ್ಷಾರ್ಹ ನರಹತ್ಯೆ,ಡಕಾಯಿತಿ ಇತ್ಯಾದಿ ಆರೋಪಗಳನ್ನೂ ಹೊರಿಸಿದೆ.

ನ್ಯಾಯಾಲಯವು ಡಿ.16ರಂದು ಆರೋಪ ರೂಪಿಸುವಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ. ಪೊಲೀಸರು ಪ್ರಕರಣದಲ್ಲಿ ಮೊದಲ ಎಫ್ಐಆರ್ ಅನ್ನು 1985,ಸೆ.9ರಂದು ದಾಖಲಿಸಿದ್ದರು. ಸಂಗ್ರಹಿಸಲಾಗಿರುವ ಸಾಕ್ಷಾಧಾರಗಳು ಯಾರ ವಿರುದ್ಧವೂ ಕ್ರಮ ಜರುಗಿಸಲು ಸಾಲದು ಎಂದು 1994ರಲ್ಲಿ ಹೇಳಿದ್ದ ನ್ಯಾಯಾಲಯವು ಪ್ರಕರಣವನ್ನು ಮುಚ್ಚಿತ್ತು.

 ಸಿಖ್ ವಿರೋಧಿ ಹಿಂಸಾಚಾರ ಪ್ರಕರಣಗಳ ಮರು ತನಿಖೆಗಾಗಿ ರಚಿಸಲಾಗಿದ್ದ ಮೂವರು ಸದಸ್ಯರ ವಿಶೇಷ ತನಿಖಾ ತಂಡವು 2015ರಲ್ಲಿ ಪ್ರಕರಣಕ್ಕೆ ಮರುಜೀವ ನೀಡಿತ್ತು. ಇನ್ನೊಂದು ಸಿಖ್ ವಿರೋಧಿ ಹಿಂಸಾಚಾರ ಪ್ರಕರಣದಲ್ಲಿ ಕುಮಾರ್ ಈಗಾಗಲೇ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News