ಬಿಜೆಪಿಯವರಿಗೆ ಸಂವಿಧಾನ ಎಂದರೇನು ಎಂದು ಇನ್ನೂ ಅರ್ಥವಾಗಿಲ್ಲ: ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ

Update: 2021-12-07 16:30 GMT
ಡಾ.ಎಚ್.ಸಿ. ಮಹದೇವಪ್ಪ

ಮೈಸೂರು: ಮತಾಂತರ ಎಂಬುದು ಸಂವಿಧಾನವು ವ್ಯಕ್ತಿಯೊಬ್ಬನಿಗೆ ನೀಡಿದ ಆಯ್ಕೆ. ಇಂತಹ ಸಂವಿಧಾನಿಕ ಆಯ್ಕೆಯನ್ನೇ ನಿಷೇಧಿಸಲು ಹೊರಟಿರುವ ಬಿಜೆಪಿಗರಿಗೆ ಸಂವಿಧಾನ ಎಂದರೇನು ಎಂದು ಇನ್ನೂ ಅರ್ಥವಾದಂತೆ ತೋರುತ್ತಿಲ್ಲ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಿಡಿಕಾರಿದ್ದಾರೆ. 

ಈ ಸಂಬಂಧ ಮಂಗಳವಾರ  ಮಾಧ್ಯಮ ಹೇಳಿಕೆ ನೀಡಿರುವ ಅವರು, ಕೇವಲ ಆರೆಸ್ಸೆಸ್ ನ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ರಾಜ್ಯವನ್ನು ಕಲಹದ ಕೇಂದ್ರವಾಗಿ ಮಾರ್ಪಡಿಸಲು ಹೊರಟಿರುವ ಮತ್ತು ಸಂವಿಧಾನದ ಮೂಲ ಆಶಯವನ್ನೇ ಅರಿಯದೇ ಅಜ್ಞಾನದಿಂದ ವರ್ತಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಸಂವಿಧಾನಿಕವಾಗಿ ವರ್ತಿಸುತ್ತಿದ್ದು ತಾವು ಮುಖ್ಯಮಂತ್ರಿ ಆಗಿರುವುದು ಸಂವಿಧಾನದ ಬಲದಿಂದ ಎಂಬುದನ್ನು ಮರೆತು ವರ್ತಿಸುತ್ತಿರುವುದು ದುರಂತ ಎಂದು ಹೇಳಿದ್ದಾರೆ. 

ಸಂವಿಧಾನಿಕ ವ್ಯವಸ್ಥೆಯಲ್ಲಿ ಜನ ಸಾಮಾನ್ಯರ ಸೇವೆಗಾಗಿ ಆಯ್ಕೆಯಾಗಿರುವ ಬಿಜೆಪಿಯ ಜನ ಪ್ರತಿನಿಧಿಗಳು ಧರ್ಮದ ಹೆಸರಲ್ಲಿ ಜನ ಸಾಮಾನ್ಯರ ಹಿತಕ್ಕೆ ವಿರುದ್ಧವಾದ ಮೌಢ್ಯದ  ಪ್ರತಿಪಾದಕರಾಗಿ ಬದಲಾಗಿರುವುದು ಅವರ ದುರ್ಬಲ ಮನಸ್ಥಿತಿಯ ಮತ್ತು ಅತಿ ಅಜ್ಞಾನದ ಪ್ರತೀಕವಾಗಿದೆ. ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರ ಆಗುವುದು ಹಿಂದೂ ಧರ್ಮದ ಉಳಿವಿಗೆ ಉಂಟಾಗುವ ಅಪಾಯವಾಗಿರುವುದರಿಂದ ಅದನ್ನು ತಡೆಯಲು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿರುವ ಬಿಜೆಪಿಗರು ತಮ್ಮದು ಜಾತಿ ಅಸಮಾನತೆ, ಅಸ್ಪೃಶ್ಯತೆ ಹಾಗೂ ಶೋಷಣೆಯನ್ನು ವಿಜೃಂಭಿಸುವ ಧರ್ಮ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು.

ಈ ಹೊತ್ತಿಗೂ ಹಿಂದೂ ಧರ್ಮದ ಪರಿಧಿಯ ಒಳಗೆ ಜಾತಿಯ ಅಸಮಾನತೆಯ ಕಾರಣಕ್ಕೆ ದೌರ್ಜನ್ಯ ಅನುಭವಿಸುತ್ತಿರುವ ಮತ್ತು ಅನಗತ್ಯವಾಗಿ ಕೀಳರಿಮೆಯನ್ನು ಅನುಭವಿಸುತ್ತಿರುವ ಜನ ಸಮುದಾಯಕ್ಕೆ ಎಂದಿಗೂ ಕೂಡಾ ಹಿಂದೂ ಧರ್ಮ ಪ್ರೀತಿ ತೋರಿಸುವ ಮತ್ತು ಘನತೆಯಿಂದ ನಿಯಂತ್ರಿಸುವ ಪ್ರಯತ್ನವನ್ನು ಮಾಡಿಲ್ಲ. ಯಾವಾಗಲೋ ಒಮ್ಮೆ ಸಾರ್ವಜನಿಕವಾಗಿ ನೆನಪಾದಾಗ ಬರೀ ಬಾಯಿ ಮಾತಲ್ಲಿ ಆದರ್ಶ ಸಮಾಜದ ಬಗ್ಗೆ ಪ್ರವಚನ ನೀಡುವ ಮಂದಿ, ಅಂತರಂಗದಲ್ಲಿ ಅಸಮಾನತೆಯನ್ನು ಆರಾಧಿಸುವವರಾಗಿದ್ದಾರೆ. ದುರ್ದೈವ ಎಂದರೆ ಇದೇ ನೀಚ ಮನಸ್ಥಿತಿಗಳೇ ಸಾಮಾಜಿಕ ನ್ಯಾಯಕ್ಕಾಗಿ ಜಾರಿಗೊಳಿಸಿರುವ ಮೀಸಲಾತಿ ಹಾಗೂ ಇನ್ನಿತರೆ ಜನಪರ ಯೋಜನೆಗಳ ಜಾರಿಯ ವಿರೋಧಿಗಳಾಗಿದ್ದಾರೆ. ಇವರ ಬಾಯಿಂದ ಯಾವತ್ತೂ ಕೂಡಾ ಶೋಷಣೆಯ ವಿರುದ್ಧ ಪ್ರತಿರೋಧದ ದನಿ ಹೊರಡುವುದಿಲ್ಲ, ಸಮಾನತೆಗಾಗಿ ಹೋರಾಟವಂತೂ ಇಲ್ಲವೇ ಇಲ್ಲ. ದಿನ ಬೆಳಗಾದರೆ ಶೋಷಣೆಯನ್ನೇ ಅಸ್ತ್ರ ಮಾಡಿಕೊಂಡು ನಮ್ಮ ಧರ್ಮ ಬಿಟ್ಟು ಹೋಗಬೇಡಿ ಎಂದರೆ ಅದಕ್ಕೆ ನಗದೆ ಇನ್ನೇನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. 

ಹಿಂದೂ ಧರ್ಮದ ಒಳಗೆ ಪ್ರಜ್ಞಾ ಪೂರ್ವಕವಾಗಿಯೇ ಆಚರಿಸುತ್ತಿರುವ ಜಾತಿ ಶ್ರೇಷ್ಠತೆ, ಅಸ್ಪೃಶ್ಯತೆ ಹಾಗೂ ಸಾಮಾಜಿಕ ಅಸಮಾನತೆಯಂತಹ ಅಮೇದ್ಯದ ವಿರುದ್ಧ ನಿರಂತರ ಹೋರಾಟ ನಡೆಸಿ, ಸಮಾಜದಲ್ಲಿ ಸಮಾನತೆ ಎಂಬುದು ಒಂದು ದೇಶದ ಆರೋಗ್ಯಕರ ಅಭಿವೃದ್ಧಿ ಹಾಗೂ ಮಾನವೀಯ ಮೌಲ್ಯಗಳ ದೃಷ್ಟಿಯಿಂದ ಎಷ್ಟು ಮುಖ್ಯ ಎಂಬ ಸಂಗತಿಯನ್ನು ಮನ ಮುಟ್ಟುವಂತೆ ಪ್ರತಿಪಾದಿಸಿದರೂ ಹಿಂದೂ ಧರ್ಮ ಸುಧಾರಣೆ ಮಾಡುವಲ್ಲಿ ಬಾಬಾ ಸಾಹೇಬರು ಯಶಸ್ಸು ಕಾಣಲಿಲ್ಲ. ಹೀಗಾಗಿಯೇ ಬೇಸರಗೊಂಡ ಅವರು ಹಿಂದೂ ಧರ್ಮವನ್ನು ತೊರೆಯುವಂತಹ ಪರಿಸ್ಥಿತಿ ಉಂಟಾಯಿತು. ತನ್ನ ಸಹಜೀವಿಗಳೆಲ್ಲಾ ಘನತೆಯಿಂದ ಇರಬೇಕೆಂದು ಬಯಸಿದ ಸಂವಿಧಾನ ಶಿಲ್ಪಿ  ಬಾಬಾ ಸಾಹೇಬರಂತಹ ಮಹಾನ್ ವ್ಯಕ್ತಿಯನ್ನೇ ಸಂಕಟದಲ್ಲಿ ಮುಳುಗಿಸಿದ ಇವರ ಧರ್ಮದ ಕಲ್ಪನೆಯಲ್ಲಿ ಯಾವುದೇ ಪ್ರಾಮಾಣಿಕತೆ ಉಳಿದಿಲ್ಲ ಎಂಬುದನ್ನು ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಅರ್ಥ ಮಾಡಿಕೊಳ್ಳಬೇಕು. ಬಾಬಾ ಸಾಹೇಬರ ವಿಷಯದಲ್ಲಿ ಮತಾಂತರ ಎಂಬುದು ಬೇರೊಂದು ಧರ್ಮದ ಆಕರ್ಷಣೆಗೆ ಒಳಗಾಗಿ ಹೋದ ಸಂಗತಿಯಾಗಿರಲಿಲ್ಲ, ಬದಲಿಗೆ ಹಿಂದೂ ಧರ್ಮದ ಒಳಗೇ ಘನತೆ ಮತ್ತು ಮಾನಸಿಕ ನೆಮ್ಮದಿಯಿಂದ ಬದುಕಲು ಸಾಧ್ಯವಾಗದೇ ಮಾಡಿಕೊಂಡ ಅನಿವಾರ್ಯವಾದ ಆಯ್ಕೆಯಾಗಿತ್ತು. ಹೀಗಾಗಿ ಮೂಲಭೂತ ಸಮಸ್ಯೆಗಳನ್ನು ಪರಿಹರಿಸದೇ ಹಿಂದೂ ಧರ್ಮದಿಂದ ಉಂಟಾಗುವ ಮತಾಂತರದ ಬಗ್ಗೆ ಮಾತನಾಡುವ ಹಕ್ಕು ಬಿಜೆಪಿಗರಿಗೆ ಇಲ್ಲ ಎಂದು ಅವರು ಹೇಳಿದರು.

1935 ರಲ್ಲಿ ಹಿಂದೂ ಧರ್ಮ ತೊರೆಯುವಾಗ ಬಾಬಾ ಸಾಹೇಬರು “ಧಾರ್ಮಿಕ ಮತ್ತು ಸಾಮಾಜಿಕ ಘನತೆಯನ್ನು ಬಯಸಿ ಆಗುವ ಮತಾಂತರವನ್ನು ಯಾರಾದರೂ ಕೂಡಾ ಅಣಕಿಸಿದರೆ ಅಂತಹ ಮೂರ್ಖರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುನ್ನಡೆಯಿರಿ” ಎಂದು ಹೇಳುತ್ತಾರೆ. ಈ ನಿಟ್ಟಿನಲ್ಲಿ ಧಾರ್ಮಿಕತೆ ಎಂಬುದು ಸಂವಿಧಾನಿಕವಾದ ಸ್ವತಂತ್ರ ಆಯ್ಕೆಯೇ ವಿನಃ ಯಾರದ್ದೋ ಮತಿಗೆಟ್ಟ ಮೌಢ್ಯದ ಜನರ ಆಜ್ಞೆಗೆ ತಲೆ ಬಾಗಿ ಮಾಡುವ ಆಚರಣೆ ಅಲ್ಲ. ಈ ಸಂಗತಿಯನ್ನು ನಾವು ಅರ್ಥ ಮಾಡಿಕೊಳ್ಳಲೇಬೇಕು. ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಬಿಜೆಪಿಯ ಕೋಮು ಶಕ್ತಿಗಳು ಸನಾತನ ಧರ್ಮ, ಹಿಂದುತ್ವ, ವರ್ಣಾಶ್ರಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಸಮಾಜದಲ್ಲಿ ಅಸ್ಪೃಶ್ಯತೆ, ಅಸಮಾನತೆ ಹಾಗೂ ಶೋಷಣೆಯ ವಾತಾವರಣವನ್ನೇ ಮುಂದುವರೆಸುತ್ತಾ ಸಾಗಿದರೆ ಈ ದೇಶದ ಎಲ್ಲಾ ಶೋಷಿತ ಜನರೂ ಕೂಡಾ ಬಾಬಾ ಸಾಹೇಬರಂತೆಯೇ ಮತ್ತೊಮ್ಮೆ ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ ಬೌದ್ಧ ಧರ್ಮದ ಮಾನವೀಯ ತತ್ವಗಳ ಆಧಾರದ ಮೇಲೆ ಸಾಮಾಜಿಕತೆಯನ್ನು ಅಧಿಕೃತವಾಗಿ ರೂಪಿಸಿಕೊಂಡು ಅದರ ಆಧಾರದ ಮೇಲೆಯೇ ರಾಜಕೀಯ ಮಾಡಬೇಕಾಗುತ್ತದೆ ಎಂಬುದನ್ನು ನೆನಪಿಸಲು ಬಯಸುತ್ತೇನೆ ಎಂದು ಮಹದೇವಪ್ಪ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News