ದಿಲ್ಲಿ ದಂಗೆಗಳಲ್ಲಿ ಮೊದಲ ದೋಷನಿರ್ಣಯ: ವ್ಯಕ್ತಿಯನ್ನು ತಪ್ಪಿತಸ್ಥನೆಂದು ಘೋಷಿಸಿದ ನ್ಯಾಯಾಲಯ

Update: 2021-12-07 16:53 GMT

ಹೊಸದಿಲ್ಲಿ,ಡಿ.7: ಕಳೆದ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ದಂಗೆಗಳ ಸಂದರ್ಭದಲ್ಲಿ ಮನೆಗೆ ಬೆಂಕಿ ಹಚ್ಚಿದ್ದ ಗುಂಪೊಂದರ ಸದಸ್ಯನಾಗಿದ್ದ ದಿನೇಶ ಯಾದವ್ ಎಂಬಾತ ದೋಷಿಯೆಂದು ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಘೋಷಿಸಿದೆ. ಇದು ದಿಲ್ಲಿ ದಂಗೆ ಪ್ರಕರಣಗಳಲ್ಲಿ ಮೊದಲ ದೋಷನಿರ್ಣಯವಾಗಿದೆ.

ಐಪಿಸಿಯ ಕಲಂ 143( ಅಕ್ರಮ ಕೂಟ), 147(ದಂಗೆ),148(ಸಶಸ್ತ್ರ ದಂಗೆ),457(ಮನೆಗೆ ಅತಿಕ್ರಮ ಪ್ರವೇಶ),392(ಲೂಟಿ) ಮತ್ತು 436 (ಬೆಂಕಿ ಹಚ್ಚುವಿಕೆ) ಅಡಿ ಯಾದವನನ್ನು ತಪ್ಪಿತಸ್ಥನೆಂದು ತೀರ್ಪು ನೀಡಿದ ನ್ಯಾಯಾಧೀಶ ವಿರೇಂದ್ರ ಭಟ್ ಅವರು ಡಿ.22ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದ್ದಾರೆ. ಈ ಕಲಮ್‌ಗಳಡಿ 10 ವರ್ಷಗಳವರೆಗೆ ಗರಿಷ್ಠ ಜೈಲುಶಿಕ್ಷೆಯನ್ನು ವಿಧಿಸಬಹುದು.

ಯಾದವ್ 2020,ಫೆ.25ರಂದು 73ರ ಹರೆಯದ ಮಹಿಳೆಯೋರ್ವಳ ಮನೆಗೆ ಅಕ್ರಮವಾಗಿ ನುಗ್ಗಿ,ಲೂಟಿಗೈದು ಬೆಂಕಿ ಹಚ್ಚಿದ್ದ ಸುಮಾರು 200 ಜನರ ಗುಂಪಿನ ಭಾಗವಾಗಿದ್ದ. ಮಾ.4ರಂದು ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದ್ದು,ಕಳೆದ ವರ್ಷದ ಜೂ.8ರಂದು ಯಾದವನನ್ನು ಬಂಧಿಸಲಾಗಿತ್ತು.

ಇದು ದಿಲ್ಲಿ ದಂಗೆಗಳ ಪ್ರಕರಣದಲ್ಲಿ ಮೊದಲ ದೋಷನಿರ್ಣಯವಾಗಿದ್ದರೆ,ಮೊದಲ ತೀರ್ಪು ಜುಲೈನಲ್ಲಿ ಹೊರಬಿದ್ದಿತ್ತು. ಆ ಪ್ರಕರಣದಲ್ಲಿ ನ್ಯಾಯಾಲಯವು ದಂಗೆ ಮತ್ತು ಲೂಟಿ ಆರೋಪಿಯನ್ನು ಖುಲಾಸೆಗೊಳಿಸಿತ್ತು.
 
2020,ಫೆ.23 ಮತ್ತು 26ರ ನಡುವೆ ಸಿಎಎ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ನಡೆದಿದ್ದ ಘರ್ಷಣೆಗಳಲ್ಲಿ ಹೆಚ್ಚಿನವರು ಮುಸ್ಲಿಮರು ಸೇರಿದಂತೆ ಕನಿಷ್ಠ 53 ಜನರು ಕೊಲ್ಲಲ್ಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News