ಡಿಕೆಶಿ ಆಯೋಜಿಸುವ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗುವ ಸಾಧ್ಯತೆಯಿದೆಯೇ?: ಬಿಜೆಪಿ ಪ್ರಶ್ನೆ

Update: 2021-12-07 17:30 GMT

ಬೆಂಗಳೂರು, ಡಿ.7: ಮೇಕೆದಾಟು ಯೋಜನೆ ನಿರಂತರ ಪ್ರಕ್ರಿಯೆ. ಅದರ ಅನುಷ್ಠಾನ ರಾಜ್ಯ ಸರಕಾರದ ಬದ್ಧತೆಯೂ ಹೌದು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಿನಾಕಾರಣ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಡಿಕೆಶಿ ಅವರೇ, ನೀವು ಆಯೋಜಿಸಿರುವ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಅವರು ಭಾಗಿಯಾಗುವ ಸಾಧ್ಯತೆಯಿದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಮೇಕೆದಾಟು ಯೋಜನೆ ಜಾರಿಗಾಗಿ ಆಯೋಜಿಸಿರುವ ಪಾದಯಾತ್ರೆಯನ್ನು ಡಿ.ಕೆ.ಶಿವಕುಮಾರ್ ಸ್ವಾತಂತ್ರ‍್ಯ ಚಳವಳಿಗೆ ಹೋಲಿಸಿಕೊಂಡಿದ್ದಾರೆ. ಈ ಹೋರಾಟದಲ್ಲಿ ಭಾಗಿಯಾಗುವ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಮಾಣಪತ್ರ ನೀಡಲಿದ್ದಾರಂತೆ. ಇತಿಹಾಸ ಹಾಗೂ ಅಧ್ಯಯನದ ಕೊರತೆ ಮನುಷ್ಯನನ್ನು ಯಾವ ಹಂತಕ್ಕೂ ಕರೆದೊಯ್ಯಬಹುದೆಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ? ಎಂದು ಪ್ರಶ್ನಿಸಿದೆ.

'ಸಿದ್ದರಾಮಯ್ಯ ಮತ್ತೊಮ್ಮೆ ವಲಸೆಗೆ ಸಿದ್ಧರಾಗುವುದು ನಿಶ್ಚಿತ'
ಬಾದಾಮಿ ಕ್ಷೇತ್ರದ ಮಾಜಿ ಶಾಸಕ ಚಿಮ್ಮನಕಟ್ಟಿ ಅವರ ಹೇಳಿಕೆ ನೋಡಿದರೆ ಸಿದ್ದರಾಮಯ್ಯ ಅವರು ಮತ್ತೊಮ್ಮೆ ವಲಸೆಗೆ ಸಿದ್ಧರಾಗುವುದು ನಿಶ್ಚಿತ. ನೀವು ಇಲ್ಲಿಗೇಕೆ ಬಂದಿರಿ ಎಂದು ಸ್ಥಳೀಯ ನಾಯಕರಿಂದ ಪ್ರಶ್ನೆ ಎದುರಾಗಿದೆ. ಇದರರ್ಥ ನೀವು ಬಾದಾಮಿ ಕ್ಷೇತ್ರಕ್ಕೆ ನ್ಯಾಯ ಒದಗಿಸಿಲ್ಲ ಎಂದಲ್ಲವೇ ಸಿದ್ದರಾಮಯ್ಯ? ಎಂದು ಬಿಜೆಪಿ ಪ್ರಶ್ನಿಸಿದೆ.

ಜನರು ಪ್ರೀತಿಸುವ ಕಡೆ ಚುನಾವಣೆಗೆ ನಿಲ್ಲುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೆ ಜಾರಿಕೊಂಡಿದ್ದಾರೆ. ಸಿದ್ದರಾಮಯ್ಯನವರೇ, ಚಾಮರಾಜಪೇಟೆಯಲ್ಲೂ ನನ್ನನ್ನು ಪ್ರೀತಿಸುವ ಜನರಿದ್ದಾರೆ ಎಂದು ನೇರವಾಗಿ ಹೇಳಿ. ಹೇಗಿದ್ದರೂ ಮುಂದೆ ಚುನಾವಣೆಗೆ ನಿಲ್ಲುವುದು ಅಲ್ಲೇ ಅಲ್ಲವೇ? ಎಂದು ಟ್ವೀಟ್ ಮಾಡಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News