ಅಕ್ರಮ ವಿದ್ಯುತ್ ಬೇಲಿಗೆ ಸಿಲುಕಿ ಕಾಡಾನೆ ಸಾವು: ಜಮೀನು ಮಾಲಕರ ವಿರುದ್ಧ ದೂರು ದಾಖಲು

Update: 2021-12-07 18:43 GMT

ಚಿಕ್ಕಮಗಳೂರು: ತಮ್ಮ ಜಮೀನಿನಲ್ಲಿ ಬೆಳೆಯಲಾದ ಕೃಷಿ ಬೆಳೆಯನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಜಮೀನು ಸುತ್ತಲು ಅಕ್ರಮವಾಗಿ ನಿರ್ಮಿಸಿದ್ದ ವಿದ್ಯುತ್ ಬೇಲಿಗೆ ಸಿಲುಕಿ ಒಂಟಿ ಸಲಗವೊಂದು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಸೋಮವಾರ ಸಂಜೆ ತರೀಕೆರೆ ತಾಲೂಕಿನ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ವರದಿಯಾಗಿದ್ದು, ಘಟನೆ ಸಂಬಂಧ ತಾಯಿ ಹಾಗೂ ಮಗನ ವಿರುದ್ಧ ಅರಣ್ಯ ಇಲಾಖೆ ದೂರು ದಾಖಲಿಸಿದೆ.

ತರೀಕೆರೆ ತಾಲೂಕಿನ ಮಲ್ಲಿಗೆನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿರುವ ತ್ಯಾಗದಬಾವಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಕುಟುಂಬವೊಂದು ಜೋಳದ ಬೆಳೆಯನ್ನು ಬೆಳೆದಿತ್ತು. ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಜಮೀನು ಸುತ್ತಲು ಅಕ್ರಮವಾಗಿ ವಿದ್ಯುತ್ ಬೇಲಿಯನ್ನು ನಿರ್ಮಿಸಲಾಗಿದ್ದು, ಸೋಮವಾರ ರಾತ್ರಿ 35 ವರ್ಷದ ಒಂಟಿ ಸಲಗವೊಂದು ಜಮೀನಿನತ್ತ ಬಂದು ವಿದ್ಯುತ್ ಬೇಲಿಗೆ ಸಿಲುಕೊಂಡಿದೆ. ಪರಿಣಾಮ ವಿದ್ಯುತ್ ಸ್ಪರ್ಶಿಸಿ ಕಾಡಾನೆ  ಸ್ಥಳದಲ್ಲೇ ಮೃತಪಟ್ಟಿದೆ.

ಅಕ್ರಮವಾಗಿ ವಿದ್ಯುತ್ ಬೇಲಿ ನಿರ್ಮಿಸಿ ಕಾಡಾನೆ ಸಾವಿಗೆ ಕಾರಣವಾಗಿದ್ದಾರೆನ್ನಲಾದ ಕೃಷಿಕ ರಘು ಹಾಗೂ ಆತನ ತಾಯಿ ವಿರುದ್ಧ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣೆ ಹಾಗೂ ಅರಣ್ಯ ಇಲಾಖಾಧಿಕಾರಿಗಳು ಪ್ರತ್ಯೇಕ ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ಬಳಿಕ ತಾಯಿ ಹಾಗೂ ಮಗ ತಲೆಮರೆಸಿಕೊಂಡಿದ್ದಾರೆಂದು ತಿಳಿದು ಬಂದಿದೆ. ಸ್ಥಳಕ್ಕೆ ಶಿವಮೊಗ್ಗ ವನ್ಯಜೀವಿ ವಿಭಾಗದ ಪಶು ವೈದ್ಯಾಧಿಕಾರಿ ವಿನಯ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಘಮ್ಮನಗಟ್ಟಿ, ತರೀಕೆರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಆರ್‌ಎಫ್‌ಒ ಸತೀಶ್ ವನ್ಯಜೀವಿ ಪರಿಪಾಲಕ ಜಿ.ವೀರೇಶ್, ಲಿಂಗದಹಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್ ರವಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News