ದಾವಣಗೆರೆ: ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಪ್ರತಿಭಟನೆ

Update: 2021-12-09 12:12 GMT

ದಾವಣಗೆರೆ: ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಶಿಕ್ಷಕ ವರ್ಗ, ವಿದ್ಯಾರ್ಥಿಗಳ ವ್ಯಾಪಕ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಅಪ್ರಜಾತಾಂತ್ರಿಕ ಹಾಗೂ ತರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಎಐಡಿಎಸ್‍ಓ ಪ್ರತಿಭಟನೆ ನಡೆಸಿತು.

ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಜೇಷನ್ ಪದಾಧಿಕಾರಿಗಳು, ಮುಂಬರುವ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ-2020ಅನ್ನು ಅನುಷ್ಠಾನಗೊಳಿಸಿದೆ. ಜನತೆಯ, ಶಿಕ್ಷಕ ವರ್ಗದ ಮತ್ತು ವಿದ್ಯಾರ್ಥಿಗಳ ವ್ಯಾಪಕ ವಿರೋಧ, ಸರ್ಕಾರದ ಆತುರದ ಹೇರಿಕೆಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ ತರಲಿದೆ ಎಂದು ಕಿಡಿಕಾರಿದರು.

ಇದಲ್ಲದೇ ನಾಲ್ಕು ವರ್ಷದ ಪದವಿ ಕೋರ್ಸಿನಲ್ಲಿ ಉಂಟಾಗಿರುವ ಗೊಂದಲಗಳು ಇದಕ್ಕೆ ಸಾಕ್ಷಿಯಾಗಿದೆ. ಈಗಾಗಲೆ ಪ್ರಥಮ ವರ್ಷದ ಪದವಿ ತರಗತಿಗಳು ಆರಂಭಗೊಂಡಿದ್ದು, ಶೀಘ್ರದಲ್ಲೇ ಆಂತರಿಕ ಪರೀಕ್ಷೆಗಳು ನಡೆಯಲಿವೆ. ಆದರೆ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಇಲ್ಲದೇ ಹೇಗೆ ಪರೀಕ್ಷೆಗಳನ್ನು ಎದುರಿಸಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು. 

ಹೊಸ ನೀತಿಯಿಂದಾಗಿ ವಿಜ್ಞಾನ ಮೂಲ ವಿಷಯ ಇರುವ ವಿದ್ಯಾರ್ಥಿ ತನಗೆ ಸಂಬಂಧವೇ ಇರದ ವಾಣಿಜ್ಯ ಇಲ್ಲವೇ ಕಲಾ ವಿಭಾಗದ ಒಂದು ವಿಷಯ ಕಡ್ಡಾಯವಾಗಿ ಓದಲೇಬೇಕು. ಅದೇ ರೀತಿ ವಾಣಿಜ್ಯ, ಕಲಾ ವಿಭಾಗದ ವಿದ್ಯಾರ್ಥಿಗಳು ವಿಜ್ಞಾನ ವಿಭಾಗದ ಒಂದು ವಿಷಯ ಓದಲೇಬೇಕೆಂಬ ಹೇರಿಕೆಯನ್ನು ಖಂಡಿಸುತ್ತೇವೆ. ಅಲ್ಲದೇ ಓದುವ, ಅಭ್ಯಸಿಸುವ ಪ್ರಕ್ರಿಯೆಯು ಆಯ್ಕೆಯ ಬದಲಾಗಿ ಹೇರಿಕೆಯಾಗಿ ಮಾರ್ಪಟ್ಟಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಯಾವುದೇ ನೂತನ ಶಿಕ್ಷಣ ನೀತಿ ಜಾರಿ ಆದಾಗ, ಅದರ ಆಧಾರದ ಮೇಲೆ ಶಿಕ್ಷಣ ತಜ್ಞರು, ಉಪನ್ಯಾಸಕರೊಂದಿಗೆ ಸಮಾಲೋಚನೆ ನಡೆಸಿ, ಪಠ್ಯಕ್ರಮ ತಯಾರಿಸುವ ಪ್ರಕ್ರಿಯೆಗೆ ಕನಿಷ್ಟ ಒಂದೆರಡು ವರ್ಷ ಬೇಕಾಗುತ್ತದೆ. ಆದರೆ, ಎನ್‍ಇಪಿ-2020 ಜಾರಿ ಮಾಡಬೇಕು ಎನ್ನುವ ಕೇಂದ್ರ ಸರ್ಕಾರದ ನಿರ್ದೇಶನವನ್ನು ರಾಜ್ಯವೇ ಮೊದಲು ಅನುಷ್ಠಾನಕ್ಕೆ ತಂದಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ರಾಜ್ಯ ಸರ್ಕಾರವು, ಕೇವಲ 15-20 ದಿನಗಳ ತಯಾರಿಯಲ್ಲಿ ನೀತಿಯನ್ನು ಜಾರಿ ಮಾಡಿದೆ. ಪೂರ್ವ ತಯಾರಿ ಇಲ್ಲದೆ, ಸರ್ಕಾರದ ಇಂತಹ ಅಡ್ಡಾದಿಡ್ಡಿ ಕ್ರಮವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮತ್ತು ಶಿಕ್ಷಣದ ಗುಣಮಟ್ಟಕ್ಕೆ ಹಾನಿಯಾಗುತ್ತದೆ ಎಂದು ಹೇಳಿದರು. 

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಂ.ಕಿರಣ್, ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ, ಪುಷ್ಪಾ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News