ವಿರಾಜಪೇಟೆ: ಲಂಚ ಸ್ವೀಕರಿಸುತ್ತಿದ್ದ ವೈದ್ಯಾಧಿಕಾರಿ ಎಸಿಬಿ ಬಲೆಗೆ

Update: 2021-12-09 12:25 GMT
ವೈದ್ಯಾಧಿಕಾರಿ ಡಾ.ವಿಶ್ವನಾಥ ಸಿಂಪಿ

ಮಡಿಕೇರಿ ಡಿ.9 : ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರಿಂದ ಚಿಕಿತ್ಸೆಗೆಂದು ಲಂಚ ಸ್ವೀಕರಿಸುತ್ತಿದ್ದ ವಿರಾಜಪೇಟೆಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ವಿಶ್ವನಾಥ ಸಿಂಪಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

ತಾಲೂಕು ಕೇಂದ್ರ ವಿರಾಜಪೇಟೆ ಸಮೀಪದ ಪೂಮಾಲೆ ಮಂದ್ ಬಳಿಯ ನಿವಾಸಿ ಕಾರ್ಮಿಕ ಸೂರ್ಯ ಎಂಬವರು ಅನಾರೋಗ್ಯ ಹಿನ್ನೆಲೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಂತದಲ್ಲಿ ಸೂರ್ಯ ಅವರಿಗೆ ನಡೆಸಬೇಕಿದ್ದ ಶಸ್ತ್ರಚಿಕಿತ್ಸೆಗಾಗಿ ಡಾ. ವಿಶ್ವನಾಥ ಸಿಂಪಿ ಹಣದ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಸೂರ್ಯ ಅವರ ಪತ್ನಿ ಎಸಿಬಿಗೆ ದೂರು ಸಲ್ಲಿಸಿದ್ದರು.

ಇಂದು ವೈದ್ಯಾಧಿಕಾರಿ ಡಾ.ವಿಶ್ವನಾಥ ಸಿಂಪಿ ಅವರು ಸೂರ್ಯ ಅವರ ಸಂಬಂಧಿಗಳಿಂದ 2 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಅವರನ್ನು ಎಸಿಬಿ ತಂಡ ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್‍ಪಿ ಕೃಷ್ಣ ಮೂರ್ತಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News