ನೂರಾರು ಜನರಿಂದ ಜನರಲ್ ಬಿಪಿನ್ ರಾವತ್ ಅವರಿಗೆ ಅಂತಿಮ ನಮನ, ಅಂತಿಮಯಾತ್ರೆ ಆರಂಭ

Update: 2021-12-10 09:04 GMT

ಹೊಸದಿಲ್ಲಿ: ರಕ್ಷಣಾ ಪಡೆಗಳ  ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ನಿವಾಸದ ಹೊರಗೆ ನೂರಾರು ಜನರು ಜಮಾಯಿಸಿ ಅಂತಿಮ ನಮನ ಸಲ್ಲಿಸಿದರು.

ಸಿಡಿಎಸ್ ರಾವತ್ ನಿವಾಸದಿಂದ ಬ್ರಾರ್ ಸ್ಕೇರ್  ತನಕ ರಾವತ್, ಪತ್ನಿ ಮಧುಲಿಕಾ ಅವರ ಪಾರ್ಥಿವ ಶರೀರವನ್ನು ಸೇನಾ ವಾಹನದಲ್ಲಿಟ್ಟು ಅಂತಿಮ ಯಾತ್ರೆ ನಡೆಸಲಾಗುತ್ತಿದೆ. ಮೆರವಣಿಗೆ ಸುಮಾರು ಒಂದೂವರೆ ಗಂಟೆ ನಡೆಯಲಿದೆ. ರಸ್ತೆ ಇಕ್ಕೆಲಗಳಲ್ಲಿ 'ವಂದೇ ಮಾತರಂ' ಘೋಷಣೆ ಕೇಳಿಬಂದಿದೆ.

ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ  ಆದಿತ್ಯನಾಥ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಮತ್ತು ಡಿಎಂಕೆ ನಾಯಕರಾದ ಎ.ರಾಜಾ ಮತ್ತು ಕನಿಮೋಳಿ ಸೇರಿದಂತೆ ಹಲವಾರು ರಾಜಕೀಯ ಮುಖಂಡರು, ರೈತ ಮುಖಂಡ ರಾಕೇಶ್ ಟಿಕಾಯತ್ ಶುಕ್ರವಾರ ಸಿಡಿಎಸ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ತಮಿಳುನಾಡಿನ ಕುನೂರ್ ಬಳಿ ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್ ಅಪಘಾತದಲ್ಲಿ ರಾಷ್ಟ್ರದ ಅತ್ಯಂತ ಹಿರಿಯ ಮಿಲಿಟರಿ ಅಧಿಕಾರಿ ಜನರಲ್ ರಾವತ್ ಅವರು ತಮ್ಮ ಪತ್ನಿ ಹಾಗೂ  11 ಸಶಸ್ತ್ರ ಪಡೆಗಳ ಸಿಬ್ಬಂದಿಯೊಂದಿಗೆ ಸಾವನ್ನಪ್ಪಿದರು.

ಇಂದು ಮಧ್ಯಾಹ್ನ ದಿಲ್ಲಿ ಕಂಟೋನ್ಮೆಂಟ್‌ನ ಬ್ರಾರ್ ಸ್ಕ್ವೇರ್‌ನಲ್ಲಿ ಸಕಲ ಸೇನಾ ಗೌರವಗಳೊಂದಿಗೆ ರಾವತ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಸಿಡಿಎಸ್‌ನ ಸೇನಾ ಅಂತ್ಯಕ್ರಿಯೆಯಲ್ಲಿ ಒಟ್ಟು 800 ಸೇವಾ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಈ ಸಮಯದಲ್ಲಿ ಶಿಷ್ಟಾಚಾರಗಳ ಪ್ರಕಾರ ರಾವತ್ ಅವರಿಗೆ 17 ಗನ್ ಸೆಲ್ಯೂಟ್ ಅನ್ನು ನೀಡಲಾಗುತ್ತದೆ.

ಶ್ರೀಲಂಕಾ, ಭೂತಾನ್, ನೇಪಾಳ ಹಾಗೂ  ಬಾಂಗ್ಲಾದೇಶದ ಹಿರಿಯ ಸೇನಾ ಕಮಾಂಡರ್‌ಗಳು ಜನರಲ್ ರಾವತ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೊಸದಿಲ್ಲಿಗೆ ಆಗಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News