ಬೆಂಬಲ ಕೊಡುವ ರೀತಿ ನಾಟಕವಾಡಿ ಕುತ್ತಿಗೆ ಕುಯ್ಯುವುದೇ ಕಾಂಗ್ರೆಸ್ ಕೆಲಸ: ಕುಮಾರಸ್ವಾಮಿ ವಾಗ್ದಾಳಿ

Update: 2021-12-10 13:30 GMT

ಚನ್ನಪಟ್ಟಣ, ಡಿ.10: ಸರಕಾರ ರಚನೆಯ ಸಂದರ್ಭದಲ್ಲಿ ಬೆಂಬಲ ಕೊಡುವ ರೀತಿ ನಾಟಕವಾಡಿ ಕುತ್ತಿಗೆ ಕುಯ್ಯುವುದೇ ಕಾಂಗ್ರೆಸ್ ಕೆಲಸ. ಇದು ಆ ಪಕ್ಷದ ಸಂಸ್ಕೃತಿಯಾಗಿಬಿಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಶುಕ್ರವಾರ ಮತ ಚಲಾಯಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಹಂಕಾರದಿಂದ ವರ್ತಿಸುತ್ತಿದೆ. ಕೃತಜ್ಞತೆ-ಔದಾರ್ಯ ಗುಣಗಳಿಲ್ಲದ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ ಎಂದು ಟೀಕಿಸಿದರು.

ಜೆಡಿಎಸ್-ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, 2023ರ ವಿಧಾನಸಭೆ ಚುನಾವಣೆ ಹಾಗೂ 123 ಸೀಟು ಗೆಲ್ಲುವ ಗುರಿಯೊಂದಿಗೆ ಸ್ಥಳೀಯ ಮಟ್ಟದಲ್ಲೇ ಪಕ್ಷಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವಂತೆ ಪಕ್ಷ ಸೂಚನೆ ನೀಡಿದೆ ಎಂದರು.

ಕೆಲವು ಕಡೆ ಬಿಜೆಪಿಗೆ, ಇನ್ನು ಕೆಲವು ಕಡೆ ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳಿಗೆ ನಮ್ಮ ಮತದಾರರು ಬೆಂಬಲ ನೀಡಿದ್ದಾರೆ. ಈ ಮಾಹಿತಿ ಕಾಂಗ್ರೆಸ್ ಅಧ್ಯಕ್ಷರಿಗೆ ಗೊತ್ತಿಲ್ಲವೇ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.

ಯಡಿಯೂರಪ್ಪ ದೊಡ್ಡತನ ತೋರಿದ್ದರು: ಅಭ್ಯರ್ಥಿಗಳು ಇಲ್ಲದ ಕಡೆ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೇಳಿದ್ದರು. ಅವರು ಬಹಿರಂಗವಾಗಿಯೇ ಯಾವುದೇ ಮುಚ್ಚುಮರೆ ಇಲ್ಲದೇ ಈ ಹೇಳಿಕೆ ನೀಡಿದ್ದರು. ಅವರು ತಮ್ಮ ರಾಜಕೀಯ ಹಿರಿತನಕ್ಕೆ ತಕ್ಕಂತೆ ವರ್ತಿಸಿದ್ದರು ಹಾಗೂ ಅದು ಅವರ ದೊಡ್ಡತನವನ್ನು ತೋರಿಸುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಹಾಗೆ ನೋಡಿದರೆ ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಹಿರಂಗವಾಗಿಯೇ ಬೆಂಬಲ ನೀಡಿದೆ ನಮ್ಮ ಪಕ್ಷ. ಕಾಂಗ್ರೆಸ್ ನಡೆಸಿದ ಪ್ರಚಾರ ಸಭೆಗಳಲ್ಲೂ ನಮ್ಮ ನಾಯಕರು ಪಾಲ್ಗೊಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಬಿಜೆಪಿ ಸೋಲಿನ ಹತಾಶೆಯಿಂದ ಜೆಡಿಎಸ್ ಬೆಂಬಲ ಪಡೆದಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರಲ್ಲ ಎಂದು ಸುದ್ದಿಗಾರರು ಗಮನ ಸೆಳೆದಾಗ, ಸಾರ್ವತ್ರಿಕ ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಆಗ ಯಾರು ಹತಾಶರಾಗಿದ್ದಾರೆಂದು ತಿಳಿಯಲಿದೆ. ಮುಂದಿನ ಬೆಳವಣಿಗೆಯನ್ನು ಈಗಲೇ ಯಾರು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೂ ಕಾಂಗ್ರೆಸ್ ನಾಯಕರಿಗೆ ನಿರಾಶೆ-ಹತಾಶೆ ಕಟ್ಟಿಟ್ಟ ಬುತ್ತಿ ಎಂದು ಅವರು ಹೇಳಿದರು.

ನಮ್ಮ ಪಕ್ಷದ ಅಭ್ಯರ್ಥಿಗಳು ಕಣದಲ್ಲಿ ಇರಲಿಲ್ಲ. ಹಾಗಾಗಿ ಯಡಿಯೂರಪ್ಪ ವೈಯಕ್ತಿಕವಾಗಿ ಮನವಿ ಮಾಡಿದ್ದರು. ನಮಗೆ ಬೆಂಬಲ ನೀಡಿ ಎಂದು ಅವರು ಮನವಿ ಮಾಡಿದ್ದರು. ನಮ್ಮ ನಿರ್ಧಾರವನ್ನು ಯಡಿಯೂರಪ್ಪ ಸ್ವಾಗತಿಸಿದರು. ಆದರೆ ಕಾಂಗ್ರೆಸ್ ನಾಯಕರು ದುರಹಂಕಾರದಿಂದ ವರ್ತಿಸಿದರು ಎಂದು ಅವರು ವಾಗ್ದಾಳಿ ನಡೆಸಿದರು.

ವಿವಿಧೆಡೆ ಜೆಡಿಎಸ್ ನೀಡಿರುವ ಬೆಂಬಲವನ್ನು ಗೌರವಿಸುವ ಔದಾರ್ಯವನ್ನೂ ಕೂಡ ತೋರಲಿಲ್ಲ. ಕೃತಜ್ಞತೆ ಸಲ್ಲಿಸುವ ಸಂಸ್ಕೃತಿ ಇಲ್ಲದಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ಮಾಜಿ ಮುಖ್ಯಮಂತ್ರಿ ಟೀಕಾ ಪ್ರಹಾರ ನಡೆಸಿದರು.

ಎಚ್.ಡಿ.ದೇವೇಗೌಡರು ಪ್ರಧಾನಿಯಾಗಲು ಕಾಂಗ್ರೆಸ್ ಬಳಿ ಅರ್ಜಿ ಹಿಡಿದುಕೊಂಡು ಹೋಗಿರಲಿಲ್ಲ. ಹಾಗೆಯೇ, ನಾನು ಕೂಡ ಮುಖ್ಯಮಂತ್ರಿಯಾಗಲು ಅರ್ಜಿ ಹಿಡ್ಕೊಂಡು ಹೋಗಿರಲಿಲ್ಲ. 2018ರಲ್ಲಿ ಸರಕಾರ ಮಾಡೋಣ ಬನ್ನಿ ಎಂದು ಅವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಬೆಂಬಲ ಕೊಡುವ ರೀತಿ ಕೊಟ್ಟು ಕುತ್ತಿಗೆ ಕುಯ್ದರು. ಇದು ಕಾಂಗ್ರೆಸ್ ಕೆಲಸ. ಆ ಪಕ್ಷದ ಹೀನ ಸಂಸ್ಕೃತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

2023 ಕ್ಕೆ ಜೆಡಿಎಸ್ ಸ್ವತಂತ್ರ ಪಕ್ಷವಾಗಿ ಅಧಿಕಾರಕ್ಕೆ ಬರಲಿದೆ: ನಮ್ಮ ಪಕ್ಷ ಬಲಿಷ್ಠವಾಗಿದೆ ಎನ್ನುವ ಕಾರಣಕ್ಕೆ ಅವರು ಎಲ್ಲ ಷಡ್ಯಂತ್ರಗಳನ್ನು ಹೂಡುತ್ತಿದ್ದಾರೆ. ನಮ್ಮನ್ನು ದುರ್ಬಲಗೊಳಿಸಬೇಕು ಎನ್ನುವ ಕಾರಣಕ್ಕೆ ಬಹಳ ಜನ ರಾಮನಗರದಲ್ಲಿ ಜೆಡಿಎಸ್‍ನಲ್ಲಿ ಬೆಳೆದವರು ಕಾಂಗ್ರೆಸ್‍ಗೆ ಹೋಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಬಹಳ ದಿನದ ಹಿಂದೆಯೇ ಅನೇಕರನ್ನು ಹೈಜಾಕ್ ಮಾಡಿದ್ದಾರೆ ಅವರು. ಇದಕ್ಕೆಲ್ಲ ನಾನು ಆತಂಕಕ್ಕೆ ಒಳಗಾಗಲ್ಲ. ರಾಮನಗರ ಜಿಲ್ಲೆಯಾದ್ಯಂತ ನಿಷ್ಠಾವಂತ ಕಾರ್ಯಕರ್ತರು ಜೆಡಿಎಸ್‍ನಲ್ಲೇ ಇದ್ದಾರೆ. ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್  ತೊಳಿತಾರೋ ಅಥವಾ ಕನಕಪುರವೂ ಸೇರಿದಂತೆ ಕಾಂಗ್ರೆಸ್ ಪಕ್ಷವನ್ನೇ ತೊಳಿತಾರೋ  ನೋಡೋಣ. ಅದನ್ನು ಜಿಲ್ಲೆಯ ಜನರೇ ನಿರ್ಧಾರ ಮಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News