ಜಾನುವಾರು ಕಳ್ಳತನದ ಶಂಕೆ; ಗುಂಪಿನಿಂದ 50 ವರ್ಷದ ವ್ಯಕ್ತಿಯ ಥಳಿಸಿ ಹತ್ಯೆ

Update: 2021-12-10 17:43 GMT
ಸಾಂದರ್ಭಿಕ ಚಿತ್ರ:PTI

ಹೊಸದಿಲ್ಲಿ,ಡಿ.10: ಜಾನುವಾರುಗಳನ್ನು ಕದಿಯುತ್ತಿದ್ದಾನೆಂಬ ಶಂಕೆಯಲ್ಲಿ 50 ವರ್ಷ ವಯಸ್ಸಿನ ಸಿದ್ದೀಕಿ ಎಂಬಾತನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಆಘಾತಕಾರಿ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಶುಕ್ರವಾರ ವರದಿಯಾಗಿದೆ.

ಭವಾನಿಪುರ ಗ್ರಾಮದಲ್ಲಿ ಈ ಘಟನೆಯು ಬುಧವಾರ ನಡೆದಿದ್ದು, ಇಂದು ಬೆಳಗ್ಗೆಯಷ್ಟೇ ಬೆಳಕಿಗೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗ್ರಾಮಸ್ಥನೊಬ್ಬನಿಗೆ ಸೇರಿದ ಎತ್ತುಗಳು ಹಾಗೂ ಕೋಣಗಳನ್ನು ಕಳವು ಮಾಡುತ್ತಿದ್ದಾರೆಂದು ಶಂಕಿಸಿ ಗ್ರಾಮದ ನಿವಾಸಿಯೊಬ್ಬ ಜನರನ್ನು ಎಚ್ಚರಿಸಿದನೆನ್ನಲಾಗಿದೆ. ಆಗ ಧಾವಿಸಿ ಬಂದ ಗ್ರಾಮಸ್ಥರು ಗುಂಪನ್ನು ಬೆನ್ನಟ್ಟಿದ್ದರು. ಆಗ ಗುಂಪಿನಲ್ಲಿದ್ದವನೊಬ್ಬ ಗ್ರಾಮಸ್ಥರನ್ನು ಹಿಮ್ಮೆಟ್ಟಿಸಲು ಗಾಳಿಯಲ್ಲಿ ಗುಂಡು ಹಾರಿಸಿದನೆನ್ನಲಾಗಿದೆ. ದಟ್ಟವಾದ ಮಂಜು ಕವಿದಿದ್ದರಿಂದ ಅದರ ಪ್ರಯೋಜನ ಪಡೆದು ಗುಂಪಿನಲ್ಲಿದ್ದವರು ತಪ್ಪಿಸಿಕೊಂಡಿದ್ದರು. ಆದರೆ ಸಿದ್ದೀಕಿ ಎಂಬಾತನನ್ನು ಹಿಡಿದ ಜನರು, ಆತನನ್ನು ದೊಣ್ಣೆಗಳಿಂದ ಥಳಿಸಿದರು ಹಾಗೂ ಹಿಗ್ಗಾಮಗ್ಗಾ ಬಡಿದರು. ತೀವ್ರವಾಗಿ ಗಾಯಗೊಂಡ ಸಿದ್ದೀಕಿ ಸ್ಥಳದಲ್ಲೇ ಕೊನೆಯುಸಿರೆಳೆದನೆಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆ ನಡೆಸಿದ ಗುಂಪಿನಲ್ಲಿ 100ಕ್ಕೂ ಅಧಿಕ ಮಂದಿಯಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲವೆಂದು ತಿಳಿದುಬಂದಿದೆ. ಅರಾರಿಯಾ ಜಿಲ್ಲೆಯಲ್ಲಿ ಗುಂಪು ಥಳಿತಕ್ಕೆ ವ್ಯಕ್ತಿ ಬಲಿಯಾದ ಎರಡನೆ ಘಟನೆ ಇದಾಗಿದೆ.

ಈ ವರ್ಷದ ಜೂನ್‌ನಲ್ಲಿ  ಅರಾರಿಯಾ ಜಿಲ್ಲೆಯಲ್ಲಿ ಕಳ್ಳತನದ ಶಂಕೆಯಲ್ಲಿ 30 ವರ್ಷದ ಇಸ್ಮಾಯೀಲ್ ಎಂಬಾತನನ್ನು ಗುಂಪೊಂದು ಬರ್ಬರವಾಗಿ ಥಳಿಸಿ ಹತ್ಯೆಗೈದಿತ್ತು. ನೆರೆಯ ಚಾಕಾಯ್ ಗ್ರಾಮದ ನಿವಾಸಿಯಾದ ಇಸ್ಮಾಯೀಲ್ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದಾನೆಂಬ ಆರೋಪವನ್ನು ಆತನ ಕುಟುಂಬಿಕರು ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News