ಮತಾಂತರ ನಿಷೇಧ ಕಾಯ್ದೆ ಜಾರಿ ಆಗಲೇಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Update: 2021-12-12 11:48 GMT
 ಶೋಭಾ ಕರಂದ್ಲಾಜೆ

ಬಾಗಲಕೋಟೆ, ಡಿ. 12: `ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಾಳೆ(ಡಿ.13)ಯಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ `ಮತಾಂತರ ನಿಷೇಧ ಕಾಯ್ದೆ' ಜಾರಿಗೆ ತರಲೇಬೇಕು' ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಇಂದಿಲ್ಲಿ ಪ್ರತಿಪಾದಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಮತಾಂತರ ಕಾಯ್ದೆ ವಿಚಾರದಲ್ಲಿ ಸರಕಾರ ಒಂದು ನಿರ್ಧಾರ ತೆಗೆದುಕೊಳ್ಳಲೇಬೇಕು. ಮಂಗಳೂರು ಆತ್ಮಹತ್ಯೆ, ಲವ್ ಜಿಹಾದ್ ಪ್ರಕರಣಗಳ ನಂತರ, ದೇಶದಲ್ಲಿ ಮತಾಂತರ ಕಾಯ್ದೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಎಲ್ಲ ಜಾತಿ, ವರ್ಗದ ಜನರನ್ನು ಅವರ ಬಡತನ, ಅನಾರೋಗ್ಯವನ್ನು ಮುಂದಿಟ್ಟುಕೊಂಡು ಮತಾಂತರಗೊಳಿಸುವುದು ನಡೆಯುತ್ತಿದೆ ಎಂದು ದೂರಿದರು.

ಮತಾಂತರ ವಿಷಯದ ಬಗ್ಗೆ ಸರಕಾರ ಗಂಭೀರವಾಗಿ ಯೋಚನೆ ಮಾಡಬೇಕು. ಸಾಮಾಜಿಕ ಅಸಮತೋಲನ ನಿರ್ಮಾಣ ಆಗಬಾರದು. ನಮ್ಮ ಬಡತನ, ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳಲು ಯಾರಿಗೂ ಅವಕಾಶ ಕೊಡಬಾರದು. ನಾವು ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು. ಯಾವ ಕಾರಣಕ್ಕೆ ಧರ್ಮವನ್ನು ಬಿಟ್ಟು ಹೋಗುತ್ತಿದ್ದಾರೆ? ಇದಕ್ಕೆ ಜಾತಿ ಕಾರಣವೋ ಅಥವಾ ಆರೋಗ್ಯ, ಆರ್ಥಿಕ ಪರಿಸ್ಥಿತಿ ಕಾರಣವೋ ಎಂಬುದು ತಿಳಿಯಬೇಕಾಗಿದೆ ಎಂದು ಅವರು ತಿಳಿಸಿದರು.

ಮತಾಂತರ ನಿಷೇಧ ಕಾಯ್ದೆ ಜಾರಿಗೆ ಕಾಂಗ್ರೆಸ್ ವಿರೋಧದ ಬಗ್ಗೆ ನಾನು ಹೆಚ್ಚಾಗಿ ಮಾತನಾಡುವುದಿಲ್ಲ. ಚುನಾವಣೆ ನೀತಿ ಸಂಹಿತೆ ಮತ್ತು ನಾನು ಕೇಂದ್ರ ಸಚಿವೆ ಆಗಿದ್ದೇನೆ. ವಿವಾದಾತ್ಮಕ ಹೇಳಿಕೆ ನೀಡುವುದಿಲ್ಲ. ನಾನೇ ಕೆಲವು ಕೇಸ್‍ಗಳಿಗೆ ಅಟೆಂಡ್ ಆಗಿದ್ದೇನೆ. ಪಶ್ಚಿಮ ಬಂಗಾಳ, ಅಸ್ಸಾಂ, ಬಾಂಗ್ಲಾದೇಶದಿಂದ ಬರುವಂತ ಒಂದು ಸಮಾಜದ ಮಕ್ಕಳನ್ನು ಹೇಗೆ ಇಲ್ಲಿ ರಕ್ಷಣೆ ಮಾಡಲಾಗುತ್ತದೆ. ಅವರಿಗೆ ವೋಟರ್ ಐಡಿ ಕೊಟ್ಟು ಮುಂದೆ ಅವರನ್ನು ಮತದಾರನಾಗಿ ಮಾಡಲಾಗುತ್ತದೆ. ಈ ಬಗ್ಗೆ ನಾವು ತನಿಖೆ ಮಾಡಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News