ಮತಾಂತರ ನಿಷೇಧ ಕಾಯ್ದೆ: ಕ್ರೈಸ್ತ ಸಮುದಾಯದ ಜನರಿಗೆ ಆತಂಕ ಬೇಡ; ಸಿಎಂ ಬಸವರಾಜ ಬೊಮ್ಮಾಯಿ

Update: 2021-12-12 17:15 GMT

ಹುಬ್ಬಳ್ಳಿ, ಡಿ. 12: `ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಕ್ರೈಸ್ತ ಸಮುದಾಯದವರು ಸೇರಿದಂತೆ ಇತರೆ ವರ್ಗದ ಜನರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಾದ ಅಗತ್ಯವಿಲ್ಲ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಯ ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಹಿಂದೂ, ಕ್ರಿಶ್ಚಿಯನ್, ಇಸ್ಲಾಂ ಹಾಗೂ ಸಿಖ್ ಧರ್ಮಗಳು ಸಂವಿಧಾನದಲ್ಲಿ ಗುರುತಿಸಲಾಗಿರುವ ಧರ್ಮಗಳಾಗಿದ್ದು, ಅವರ ಪ್ರಾರ್ಥನೆ, ಆಚರಣೆಗಳಿಗೆ ಯಾವುದೇ ತೊಂದರೆ ಇಲ್ಲ. ಆದರೆ, ಬಡತನದ ದುರುಪಯೋಗ ಪಡೆದು, ಆಸೆ, ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವುದಕ್ಕೆ ಅವಕಾಶವಿಲ್ಲ' ಎಂದು ಸ್ಪಷ್ಟಪಡಿಸಿದರು. 

`ಮತಾಂತರದ ವಿಷಯ ಇಂದಿನದಲ್ಲ, ಈ ಬಗ್ಗೆ ಸ್ವತಂತ್ರದ ನಂತರದಲ್ಲಿ ಬಹಳ ದೊಡ್ಡ ಚರ್ಚೆಯಾಗಿದೆ. ವಿವಿಧ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇವುಗಳನ್ನು ಅವಲೋಕಿಸಿ, ಕಾನೂನು ಜಾರಿಗೆ ತರಬೇಕೆನ್ನುವುದು ಕರ್ನಾಟಕದ ಬಹುತೇಕ ಜನರ ಅಪೇಕ್ಷೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಇಲಾಖೆ ಪರಿಶೀಲನೆ ಮಾಡುತ್ತಿದೆ' ಎಂದು ಬೊಮ್ಮಾಯಿ ವಿವರಣೆ ನೀಡಿದರು. 

ಕಾನೂನು ಇಲಾಖೆ ಪರಿಶೀಲನೆಯ ನಂತರ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಮಂಡನೆಯಾಗಲಿದೆ. ಬೆಳಗಾವಿ ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಬಹುತೇಕವಾಗಿ ಕಾನೂನು ಇಲಾಖೆ ಕರಡು ಕಾಯ್ದೆಗೆ ಒಪ್ಪಿಗೆ ನೀಡಿದಲ್ಲಿ ಇದೇ ಅಧಿವೇಶನದಲ್ಲಿ ಈ ವಿಷಯ ಚರ್ಚೆಗೆ ಬರಲಿದೆ ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. 

ಮತಾಂತರ ಒಳ್ಳೆಯದಲ್ಲ: `ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ. ಬಡವರು, ದೀನದಲಿತರು ಅದಕ್ಕೆ ಒಳಗಾಗಬಾರದು. ಅವರ ಮನೆತನ, ಕುಟುಂಬದಲ್ಲಿ ಬಹಳಷ್ಟು ತೊಂದರೆಯಾಗುವುದರಿಂದ ಮತಾಂತರ ನಿಷೇಧ ಕಾಯ್ದೆಯನ್ನು ತರುವ ಪ್ರಯತ್ನವನ್ನು ನಮ್ಮ ಸರಕಾರ ಮಾಡಲಿದೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News