ವಿಧಾನಪರಿಷತ್: ಸೋತವರಾರು?

Update: 2021-12-16 06:40 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ವಿಧಾನ ಪರಿಷತ್ ಚುನಾವಣೆ ಮುಗಿದಿದೆ. ಆಡಳಿತ ಪಕ್ಷದಲ್ಲಿರುವ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲವಾಗಿದೆ. ಜೆಡಿಎಸ್ ತನ್ನ ಸಮಯ ಸಾಧಕ ರಾಜಕಾರಣಕ್ಕೆ ಸರಿಯಾಗಿಯೇ ಬೆಲೆ ತೆತ್ತಿದೆ. ಆದರೆ ಕುಟುಂಬದ ಇನ್ನೊಬ್ಬ ಕಿರಿಯ ಸದಸ್ಯನನ್ನು ವಿಧಾನ ಪರಿಷತ್‌ಗೆ ಕಳುಹಿಸುವಲ್ಲಿ ಅದು ಯಶಸ್ವಿಯಾಗಿರುವುದರಿಂದ, ಗೌಡರ ಕುಟುಂಬಕ್ಕೆ ಯಾವ ನಷ್ಟವೂ ಇಲ್ಲ. ನಷ್ಟವೇನಿದ್ದರೂ ಜೆಡಿಎಸ್‌ನ್ನು ನಂಬಿ ಅದರ ಹಿಂದೆ ಹೋದ ಕಾರ್ಯಕರ್ತರಿಗೆ ಮಾತ್ರ. ವಿಧಾನ ಪರಿಷತ್ ಟಿಕೆಟ್‌ಗಳನ್ನು ಮಾರಾಟ ಮಾಡುವುದು ಸರ್ವೇಸಾಮಾನ್ಯವಾಗಿರುವುದರಿಂದ ಜೆಡಿಎಸ್‌ಗೆ ಆರ್ಥಿಕವಾಗಿ ಯಾವ ನಷ್ಟವೂ ಆಗಿರಲಿಕ್ಕಿಲ್ಲ. ವಿಧಾನ ಪರಿಷತ್ ಚುನಾವಣೆಯ ದೆಸೆಯಿಂದ ಮೋದಿಯ ದರ್ಶನ ಭಾಗ್ಯ ದೇವೇಗೌಡರಿಗೆ ಸಿಕ್ಕಿರುವುದು ಇನ್ನೊಂದು ಲಾಭ. ಒಟ್ಟಿನಲ್ಲಿ ಜೆಡಿಎಸ್ ಪಾಲಿಗೆ ಸಿಕ್ಕಿದ್ದು ಸೀರುಂಡೆ. ಇದೇ ಸಂದರ್ಭದಲ್ಲಿ, ಬಿಜೆಪಿಯೊಂದಿಗೆ ಸಮ ಬಲ ಸಾಧಿಸಿರುವುದೇ ಕಾಂಗ್ರೆಸ್‌ನ ಅತಿ ದೊಡ್ಡ ಸಾಧನೆ. ದುಡ್ಡಿನಿಂದ ಒಂದು ಸರಕಾರವನ್ನೇ ಖರೀದಿಸಿದ ಬಿಜೆಪಿಗೆ ಅಧಿಕಾರ ಬಲ, ಹಣಬಲ ಎರಡೂ ಇವೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನೊಳಗೆ ಮಾರಾಟವಾಗಲು ಕಾದಿರುವ ಸರಕುಗಳು ಕಡಿಮೆಯೇನೂ ಇಲ್ಲ. ಹೀಗಿದ್ದರೂ ಬಿಜೆಪಿಗೆ ಕಾಂಗ್ರೆಸ್ ಜೊತೆಗೆ ಸಮಬಲ ಸಾಧಿಸುವುದಕ್ಕಷ್ಟೇ ಸಾಧ್ಯವಾಯಿತು ಎನ್ನುವುದು ಗಮನಾರ್ಹ. ಜಾರಕಿಹೊಳಿ ಕುಟುಂಬದ ಇನ್ನೊಬ್ಬ ಸದಸ್ಯ ವಿಧಾನ ಪರಿಷತ್‌ಗೆ ಕಾಲಿಟ್ಟಂತಾಗಿದೆ. ಒಟ್ಟಿನಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ‘ನಾವೇ ಗೆದ್ದಿದ್ದೇವೆ’ ಎಂದು ಮೀಸೆ ತಿರುವಿಕೊಳ್ಳುತ್ತಿವೆ. ನಿಜ, ರಾಜಕಾರಣಿಗಳು ಗೆದ್ದಿದ್ದಾರೆ. ಆದರೆ ಜನಸಾಮಾನ್ಯರು ಮಾತ್ರ ಎಂದಿನಂತೆಯೇ ಸೋತಿದ್ದಾರೆ.

ವಿಧಾನ ಪರಿಷತ್‌ನ್ನು ಮೇಲ್ಮನೆ ಎಂದು ಕರೆಯುತ್ತೇವೆ. ದೇಶಕ್ಕೆ ರಾಜ್ಯ ಸಭೆ ಇದ್ದಂತೆಯೇ ರಾಜ್ಯಗಳಿಗೆ ವಿಧಾನಪರಿಷತ್‌ಗಳಿರುತ್ತವೆ. ಹಾಗೆಯೇ ವಿಧಾನಪರಿಷತ್‌ಗಳಿಲ್ಲದ ರಾಜ್ಯಗಳೂ ಇವೆ. ವಿಧಾನ ಪರಿಷತ್‌ನ್ನು ಮೇಲ್ಮನೆ ಎಂದು ಕರೆಯುವುದಕ್ಕೆ ಕಾರಣಗಳಿವೆ. ವಿಧಾನ ಪರಿಷತ್‌ನ್ನು ಪ್ರತಿನಿಧಿಸುವವರು ವಿಧಾನಸಭೆಯಲ್ಲಿರುವವರಿಗಿಂತ ಹೆಚ್ಚು ಮುತ್ಸದ್ದಿಗಳು, ಹಿರಿಯರು, ಮಾರ್ಗದರ್ಶಕರು ಆಗಿರುತ್ತಾರೆ. ವಿಧಾನಸಭೆ ದಾರಿ ತಪ್ಪಿದಾಗ ಅದನ್ನು ಸರಿದಾರಿಗೆ ತರುವ ಹೊಣೆಗಾರಿಕೆ ವಿಧಾನಪರಿಷತ್‌ನಲ್ಲಿರುವ ಮುತ್ಸದ್ದಿಗಳಿಗೆ ಇರುತ್ತದೆ. ಆದರೆ ಈ ಬಾರಿ ಆಯ್ಕೆಯಾದ ವಿಧಾನಪರಿಷತ್ ಸದಸ್ಯರಲ್ಲಿ ಅದೆಷ್ಟು ರಾಜಕೀಯ ಮುತ್ಸದ್ದಿಗಳಿದ್ದಾರೆ, ಅನುಭವಿಗಳಿದ್ದಾರೆ ಎಂದು ಕಣ್ಣಾಯಿಸಿದರೆ ನಿರಾಸೆ ಕಟ್ಟಿಟ್ಟ ಬುತ್ತಿ. ವಿಧಾನ ಪರಿಷತ್‌ನ್ನು ಹಿಂಬಾಗಿಲು ಎಂದು ಕರೆದಿರುವುದು ಅರ್ಥಪೂರ್ಣವಾಗಿದೆ. ವಿಧಾನಸಭೆ ಎನ್ನುವ ಮುಂಬಾಗಿಲಲ್ಲಿ ರಾಜಕೀಯ ಪ್ರವೇಶಿಸಲು ಸಾಧ್ಯವಿಲ್ಲದೇ ಇರುವವರಿಗೆ ವಿಧಾನ ಪರಿಷತ್ ಎನ್ನುವ ಹಿಂಬಾಗಿಲನ್ನು ಇಡಲಾಗಿದೆ. ಇಂದು ವಿಧಾನ ಪರಿಷತ್ ಎನ್ನುವುದು ರಾಜಕಾರಣಿಗಳ ಅಗತ್ಯವಾಗಿ ಉಳಿದಿದೆಯೇ ಹೊರತು, ನಾಡು ನುಡಿಯ ಅಭಿವೃದ್ಧಿಯಲ್ಲಿ ಅದರ ಪಾತ್ರ ಬಹಳ ಕಡಿಮೆ. ಹಿಂದೆಲ್ಲ, ಎಂ.ಸಿ.ನಾಣಯ್ಯ, ಎ.ಕೆ. ಸುಬ್ಬಯ್ಯರಂತಹ ಹಿರಿಯ ರಾಜಕೀಯ ಧುರೀಣರಿಗೆ ವಿಧಾನ ಪರಿಷತ್ ಆಶ್ರಯ ನೀಡಿತ್ತು. ಅವರು ಅಪಾರ ಅಧ್ಯಯನಗಳ ಜೊತೆಗೆ ಸದನವನ್ನು ಪ್ರವೇಶಿಸುತ್ತಿದ್ದರು. ಅಂಕಿ ಅಂಶಗಳ ಜೊತೆಗೆ ಆಡಳಿತ ಪಕ್ಷವನ್ನು ಬೆವರಿಳಿಸುವ ತಿಳಿವು ಅವರಿಗಿರುತ್ತಿತ್ತು. ಅಧಿಕಾರಿಗಳು ಇವರ ಮುಂದೆ ಎದ್ದು ನಿಂತು ಮಾತನಾಡುವುದಕ್ಕೂ ಅಂಜುತ್ತಿದ್ದರು. ಆದರೆ, ಈಗ ವಿಧಾನಪರಿಷತ್ ಪ್ರವೇಶಿಸುವ ರಾಜಕಾರಣಿಗಳಿಗೆ ಆಡಳಿತದ ಕುರಿತಂತೆ ಪ್ರಾಥಮಿಕ ಅರಿವೂ ಇಲ್ಲ. ಯಾವುದೇ ಹೋಮ್‌ವರ್ಕ್‌ಗಳಿಲ್ಲದೆ ಸದನವನ್ನು ಪ್ರವೇಶಿಸುತ್ತಾರೆ. ಅವರೊಂದಿಗೆ ಯಾವ ಅಂಕಿಅಂಶಗಳೂ ಇಲ್ಲ. ಬರಿ ಅಧಿಕಾರಿಗಳು ಅಥವಾ ತನ್ನ ಸಹಾಯಕರು ಕೊಟ್ಟ ಪ್ರಶ್ನೆಗಳನ್ನು ಸದನದಲ್ಲಿಡುತ್ತಾರೆ. ಅವರೇ ಕೊಟ್ಟ ಉತ್ತರವನ್ನು ಸದನಕ್ಕೆ ಒಪ್ಪಿಸುತ್ತಾರೆ. ಉಳಿದಂತೆ ಒಂದಿಷ್ಟು ಗದ್ದಲಗಳು. ನಾಡಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಏನು ಮಾತನಾಡಬೇಕು ಎನ್ನುವ ಅರಿವೇ ಅವರಿಗಿಲ್ಲ. ಕನಿಷ್ಠ ಹಿಂದಿನ ರಾಜಕೀಯ ಮುತ್ಸದ್ದಿಗಳನ್ನು ಮಾದರಿಯಾಗಿಸಿಕೊಳ್ಳಲು ಅವರ ಬಗ್ಗೆ ಅಧ್ಯಯನ ನಡೆಸುವ ಕುತೂಹಲವೂ ಇಲ್ಲ. ಒಟ್ಟಿನಲ್ಲಿ ವಿಧಾನ ಸೌಧವನ್ನು ಪ್ರವೇಶಿಸಬೇಕು, ಆ ಮೂಲಕ ಸಚಿವನಾಗಬೇಕು ಎನ್ನುವ ಎರಡು ಉದ್ದೇಶ ಬಿಟ್ಟರೆ, ಉಳಿದಂತೆ ವಿಧಾನ ಪರಿಷತ್‌ನ ಹಿರಿಮೆಯ ಬಗ್ಗೆ ಇವರಲ್ಲಿ ಯಾವ ಪ್ರಜ್ಞೆಯೂ ಇಲ್ಲ.

 ಮುಂಬಾಗಿಲಲ್ಲಿ ವಿಧಾನಸಭೆ ಪ್ರವೇಶಿಸಲು ವಿಫಲರಾದವರು ವಿಧಾನಪರಿಷತ್ ಮೂಲಕ ಆಯ್ಕೆಯಾಗುತ್ತಾರೆ ಎನ್ನುವುದಾದರೆ, ವಿಧಾನ ಪರಿಷತ್‌ನ್ನು ಮೇಲ್ಮನೆ ಎಂದು ಯಾವ ಮಾನದಂಡದಲ್ಲಿ ಕರೆಯುವುದು? ಕೇರಳ, ತಮಿಳುನಾಡು ಮೊದಲಾದ ರಾಜ್ಯಗಳಲ್ಲಿ ವಿಧಾನ ಪರಿಷತ್ ಅಸ್ತಿತ್ವದಲ್ಲೇ ಇಲ್ಲ. ಹೀಗಿದ್ದರೂ ಆ ರಾಜ್ಯಗಳ ಅಭಿವೃದ್ಧಿಗೆ ಯಾವ ತೊಡಕು ಆಗಿಲ್ಲ. ವಿಧಾನಸಭೆಗೆ ನಾವು ಯೋಗ್ಯರನ್ನು ಆಯ್ಕೆ ಮಾಡಿದರೆ, ಇನ್ನೊಂದು ವಿಧಾನಪರಿಷತ್‌ನ ಅಗತ್ಯವೂ ಬೀಳುವುದಿಲ್ಲ. ಇದೇ ಸಂದರ್ಭದಲ್ಲಿ ವಿಧಾನಪರಿಷತ್‌ನ ಸ್ಥಾನಕ್ಕಾಗಿ ಸಾಹಿತಿಗಳು, ಚಿಂತಕರು, ಶಿಕ್ಷಕರು ಭ್ರಷ್ಟ ರಾಜಕಾರಣಿಗಳ ಓಲೈಕೆ ಮಾಡುವ ವಾತಾವರಣ ನಿರ್ಮಾಣವಾಗಿದೆ. ಸಮಾಜವನ್ನು ಎಚ್ಚರಿಸಿ, ವಿಮರ್ಶಿಸಿ ಮುನ್ನಡೆಸಬೇಕಾದವರು ಅಧಿಕಾರಕ್ಕಾಗಿ ತಮ್ಮನ್ನು ಮಾರಿಕೊಳ್ಳುವ ಸ್ಥಿತಿಗೆ ತಲುಪುತ್ತಿದ್ದಾರೆ. ವಿಧಾನಪರಿಷತ್ ಸ್ಥಾನವನ್ನು ರಾಜಕಾರಣಿಗಳು ಬಿಸ್ಕೆಟ್ ರೂಪದಲ್ಲಿ ಎಸೆದು ಕವಿಗಳನ್ನು, ಚಿಂತಕರನ್ನು ಕೊಂಡುಕೊಳ್ಳುವ ಮಟ್ಟಕ್ಕೆ ರಾಜಕೀಯ ತಲುಪಿದೆ. ಹೀಗೆ ಮೇಲ್ಮನೆ ಪ್ರವೇಶಿಸಿದ ಸಮಾಜದ ಗಣ್ಯರಿಂದ ಈ ನಾಡು ಏನನ್ನು ನಿರೀಕ್ಷಿಸ ಬಹುದು ? ವಿಧಾನಪರಿಷತ್‌ಗೆ ಆಯ್ಕೆಯಾಗುವ ಅಭ್ಯರ್ಥಿಗಳು ವಿಧಾನಸಭೆಗೆ ಆಯ್ಕೆಯಾಗುವವರಿಗಿಂತಲೂ ಕಳಪೆಯೆಂದಾದರೆ ಈ ಮೇಲ್ಮನೆ ಅಸ್ತಿತ್ವದಿಂದ ರಾಜ್ಯದ ಆಡಳಿತಕ್ಕೆ ಲಾಭವಾದರೂ ಏನು ? ಅನಗತ್ಯವಾಗಿ ಈ ಮೇಲ್ಮನೆಯ ಸದಸ್ಯರನ್ನು ಸಾಕಲು ಜನಸಾಮಾನ್ಯರು ದುಬಾರಿ ವೆಚ್ಚವನ್ನು ಯಾಕೆ ಭರಿಸಬೇಕು ? ಈ ಪ್ರಶ್ನೆಗಳನ್ನು ಮುನ್ನೆಲೆಗೆ ತರುವ ಸಮಯ ಬಂದಿದೆ. ರಾಜಕೀಯ ಮುಖಂಡರು ವಿಧಾನಪರಿಷತ್‌ನ್ನು ‘ದಡ್ಡರ ಮನೆ’ಯಾಗಿ ಪರಿವರ್ತಿಸುತ್ತಾರಾದರೆ, ಆ ದಡ್ಡರನ್ನು ಸಾಕುವುದಕ್ಕೆ ನಾವು ಸಿದ್ಧರಿಲ್ಲ ಎಂದು ಜನರು ದೊಡ್ಡ ಧ್ವನಿಯಲ್ಲಿ ಸ್ಪಷ್ಟಪಡಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News