"ಚರ್ಮಕ್ಕೆ ಚರ್ಮ ಸ್ಪರ್ಶವಾಗದಿದ್ದರೆ ಲೈಂಗಿಕ ದೌರ್ಜನ್ಯವಾಗುವುದಿಲ್ಲ" ಎಂದು ತೀರ್ಪು ನೀಡಿದ್ದ ನ್ಯಾಯಾಧೀಶೆಗೆ ಸಂಕಷ್ಟ

Update: 2021-12-16 14:44 GMT

ಹೊಸದಿಲ್ಲಿ,ಡಿ.16: ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ಹಲ್ಲೆ ಪ್ರಕರಣವೊಂದರಲ್ಲಿ ‘‘ಚರ್ಮದಿಂದ ಚರ್ಮಕ್ಕೆ ಸಂಪರ್ಕವಾಗದೆ ಇದ್ದಲ್ಲಿ ಅದು ಲೈಂಗಿಕ ದೌರ್ಜನ್ಯವಲ್ಲ’’ ಎಂಬ ವಿವಾದಾತ್ಮಕ ತೀರ್ಪು ಪ್ರಕಟಿಸಿದ್ದ ಬಾಂಬೆ ಹೈಕೋರ್ಟ್ ನ್ಯಾಯಾಧೀಶೆ ಪುಷ್ಪಾ ವಿ. ಗನೆಡಿವಾಲಾ ಅವರ ನೇಮಕಾತಿಯನ್ನು ಖಾಯಂಗೊಳಿಸಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ನ ಮೂಲಗಳು ತಿಳಿಸಿವೆ. ಹೈಕೋರ್ಟ್ ನ್ಯಾಯಾಧೀಶೆಯಾಗಿ ಪುಷ್ಪಾ ವಿ.ಗನೆಡಿವಾಲಾ ಅವರ ಭಡ್ತಿಯನ್ನು ಸುಪ್ರೀಂಕೋರ್ಟ್ ಕೊಲೇಜಿಯಂ ತಿರಸ್ಕರಿಸಿರುವುದು ಇದು ಎರಡನೆ ಸಲವಾಗಿದೆ.

ಪ್ರಸಕ್ತ ಬಾಂಬೆ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿ ಪುಷ್ಪಾ ಗನೆಡಿವಾಲಾ ಅವರ ಅಧಿಕಾರಾವಧಿಯನ್ನು ಕೇಂದ್ರಸರಕಾರವು ಈ ವರ್ಷ ಆರಂಭದಲ್ಲಿ ವಿಸ್ತರಿಸಿತ್ತು. ಆದರೆ ಅಧಿಕಾರದ ಅವಧಿಯನ್ನು ಸಾಮಾನ್ಯವಾಗಿ ಇರುವ ಎರಡು ವರ್ಷಗಳ ಬದಲಿಗೆ ಒಂದು ವರ್ಷಕ್ಕೆ ಇಳಿಸಿತ್ತು.
  
ಅಪರೂಪದ ವಿದ್ಯಮಾನವೊಂದರಲ್ಲಿ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪುಷ್ಪಾ ಗನೆಡಿವಾಲಾ ಅವರ ನೇಮಕಾತಿಯನ್ನು ಖಾಯಂಗೊಳಿಸಲು ತಾನು ಕೇಂದ್ರ ಸರಕಾರಕ್ಕೆ ಮಾಡಿದ್ದ ಶಿಫಾರಸನ್ನು ಸುಪ್ರೀಂಕೋರ್ಟ್ ಸಮಿತಿಯು ಹಿಂತೆಗೆದುಕೊಂಡಿತ್ತು. ಇದಾದ ಬೆನ್ನಲ್ಲೇ ಕೇಂದ್ರ ಸರಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಅಪ್ರಾಪ್ತ ಬಾಲಕಿಯ ಅತ್ಯಾಚಾರದಂತಹ ಪ್ರಕರಣಗಳ ವಿಚಾರಣೆಯಲ್ಲಿ ಪುಷ್ಪಾ ಗನೆಡಿವಾಲಾ ಅವರು ಇನ್ನೂ ಹೆಚ್ಚು ಪರಿಣತಿಯನ್ನು ಪಡೆಯಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಮೂಲಗಳು ಎನ್ಡಿಟಿವಿಗೆ ತಿಳಿಸಿದೆ.
 
‘‘ಪುಷ್ಪಾ ಗನೆಡಿವಾಲಾ ವಿರುದ್ಧ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ. ನ್ಯಾಯವಾದಿಯಾಗಿ ಆಕೆ ಇಂತಹ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಹೆಚ್ಚು ಪರಿಣತಿ ಹಾಗೂ ತರಬೇತಿಯನ್ನು ಪಡೆಯಬೇಕಾದ ಅಗತ್ಯವಿದೆ’’ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.
  
ಜನವರಿ 19ರಂದು ನ್ಯಾಯಮೂರ್ತಿ ಪುಷ್ಪಾ ಗನೆಡಿವಾಲಾ ಅವರು ಲೈಂಗಿಕ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿ ನೀಡಿದ ತೀರ್ಪಿನಲ್ಲಿ ಆರೋಪಿಯು ಅಪ್ರಾಪ್ತ ಬಾಲಕಿಯ ಎದೆಯನ್ನು ಬಟ್ಟೆಯ ಮೇಲಿನಿಂದ ಮುಟ್ಟಿದ್ದುದರಿಂದ, ಚರ್ಮದಿಂದ ಚರ್ಮಕ್ಕೆ ಸಂಪರ್ಕ ನಡೆದಿಲ್ಲ. ಹೀಗಾಗಿ ಈ ಪ್ರಕರಣವನ್ನ್ನು ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೊ) ಕಾಯ್ದೆಯಡಿ ಲೈಂಗಿಕ ದೌರ್ಜನ್ಯವೆಂದು ವ್ಯಾಖ್ಯಾನಿಸಲು ಬರುವುದಿಲ್ಲವೆಂದು ಹೇಳಿದ್ದರು.
   
   ನ್ಯಾಯಮೂರ್ತಿ ಗನೆಡಿವಾಲಾ ಅವರು ಇನ್ನೊಂದು ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಅಪ್ರಾಪ್ತ ಬಾಲಕಿಯ ಕೈಗಳನ್ನು ಹಿಡಿದುಕೊಳ್ಳುವುದು ಅಥವಾ ಆಕೆಯಿಂದ ಪ್ಯಾಂಟ್‌ನ ಜಿಪ್ ಬಿಚ್ಚಿಸಿಕೊಳ್ಳುವುದನ್ನು ಲೈಂಗಿಕ ದೌರ್ಜನ್ಯದ ವ್ಯಾಖ್ಯಾನಕ್ಕೆ ಒಳಪಡಿಸಲು ಸಾಧ್ಯವಿಲ್ಲವೆಂದು ಹೇಳಿದ್ದರು ಹಾಗೂ ಆರೋಪಿಯನ್ನು ಪೋಸ್ಕೊ ಕಾಯ್ದೆಯಡಿಯ ಆರೋಪಗಳಿಂದ ದೋಷಮುಕ್ತಗೊಳಿಸಿದ್ದರು. ಈ ಪ್ರಕರಣದಲ್ಲಿ ಐದು ವರ್ಷದ ಬಾಲಕಿಯು ಸಂತ್ರಸ್ತೆಯಾಗಿದ್ದಳು. 

ಈ ಎರಡು ವಿವಾದಾತ್ಮಕ ತೀರ್ಪುಗಳ ಬಳಿಕ ನ್ಯಾಯಮೂರ್ತಿ ಗನೆಡಿವಾಲಾ ಅವರನ್ನು ಖಾಯಂ ನ್ಯಾಯಾಧೀಶೆಯಾಗಿ ಶಿಫಾರಸು ಮಾಡುವ ತನ್ನ ನಿರ್ಧಾರವನ್ನು ಕೊಲೇಜಿಯಂ ಹಿಂಪಡೆದುಕೊಂಡಿದೆ. ಸುಪ್ರೀಂಕೋರ್ಟ್ ಸಾಮಾನ್ಯವಾಗಿ ನ್ಯಾಯಮೂರ್ತಿಗಳ ನೇಮಕಕ್ಕೆ ತಾನು ಮಾಡಿದ ಶಿಫಾರಸುಗಳನ್ನು ಹಿಂಪಡೆದುಕೊಳ್ಳುವುದು ತೀರಾ ಅಪರೂಪವಾಗಿದೆ. ವಿವಿಧ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ತ್ರಿಸದಸ್ಯ ಕೊಲೇಜಿಯಂನಲ್ಲಿ ಸಿಜೆಐ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಯು.ವಿ.ಲಲಿತ್ ಹಾಗೂ ಎ.ಎಂ. ಖಾನ್ವಿಲ್ಕರ್ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News