ದಲಿತರನ್ನೇ ಗುರಿಯಾಗಿಸಿರುವ ಮತಾಂತರ ನಿಷೇಧ ಕಾಯ್ದೆ

Update: 2021-12-24 06:03 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನ, ಲಾಕ್‌ಡೌನ್ ಅನಾಹುತಗಳನ್ನೇ ಮುಂದಿಟ್ಟು ಚರ್ಚೆ ನಡೆಯಬೇಕಾದ ಅಧಿವೇಶವನ್ನು, ಮತಾಂತರ ಕಾಯ್ದೆಯ ಕಡೆಗೆ ಎಳೆಯುವಲ್ಲಿ ಬಿಜೆಪಿ ಸರಕಾರ ಕೊನೆಗೂ ಯಶಸ್ವಿಯಾಗಿದೆ. ಈ ನಾಡಿನ ಅಭಿವೃದ್ಧಿಯಲ್ಲಿ ಯಾವ ರೀತಿಯಲ್ಲೂ ಪ್ರಯೋಜನಕ್ಕೆ ಬೀಳದ, ಜನರನ್ನು ಕಿರುಕುಳಕ್ಕೊಳಪಡಿಸುವ ಒಂದೇ ಉದ್ದೇಶದಿಂದ ಜಾರಿಗೊಂಡಿರುವ ಮತಾಂತರ ನಿಷೇಧ ಸರಕಾರ ಜನರಿಗೆ ಎಸಗಿರುವ ಇನ್ನೊಂದು ಮಹಾದ್ರೋಹ. ಗೋಹತ್ಯಾಕಾಯ್ದೆಯನ್ನು ಜಾರಿಗೊಳಿಸಿ, ರೈತರ ಕೈಯಿಂದ ಜಾನುವಾರು ಮಾರಾಟದ ಹಕ್ಕನ್ನೇ ಕಿತ್ತುಕೊಂಡು ಅವರಿಗೆ ಕಿರುಕುಳ ನೀಡುವಲ್ಲಿ ಕೊನೆಗೂ ಯಶಸ್ವಿಯಾಯಿತು. ಇದರಿಂದಾಗಿ, ರೈತರು ತಮ್ಮ ಅನುಪಯುಕ್ತ ಜಾನುವಾರುಗಳ ಮಾರಾಟ ಸಾಧ್ಯವಾಗದೆ ನಷ್ಟಕ್ಕೀಡಾದರು. ಅನುಪಯುಕ್ತ ಗೋವುಗಳನ್ನು ಸಾಕುವ ಭಾರವನ್ನು ಸರಕಾರ ತನ್ನ ಕೊರಳಿಗೆ ಸುತ್ತಿಕೊಂಡಿತು. ಜನರ ತೆರಿಗೆಯ ಹಣ ಅನಗತ್ಯ ವಿಷಯಕ್ಕೆ ಪೋಲಾಗತೊಡಗಿತು. ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಒದಗಿಸಲಾಗದೆ ಇಂದು ಗೋಶಾಲೆಗಳಲ್ಲಿ ಗೋವುಗಳು ಹಸಿವಿನಿಂದ ಸಾಯುತ್ತಿವೆ. ರೈತರ ಅನುಪಯುಕ್ತ ಹಸುಗಳು ಇಂದು ನಕಲಿ ಗೋರಕ್ಷಕರ ಮೂಲಕವೇ ಕಸಾಯಿ ಖಾನೆ ಸೇರುತ್ತಿವೆ. ರೈತರಿಗೆ ಸಿಗಬೇಕಾದ ದುಡ್ಡು ನಕಲಿ ರೈತರ ಕಿಸೆಯನ್ನು ತುಂಬುತ್ತಿವೆ. ಸಾಕುವುದಕ್ಕೂ ಗೋವುಗಳನ್ನು ಸಾಗಾಟ ಮಾಡುವುದು ಕಷ್ಟ ಎನ್ನಿಸುವ ಸ್ಥಿತಿ ನಿರ್ಮಾಣವಾಗಿದ್ದು, ನೂರಾರು ರೈತರು ಗೋಸಾಕಣೆಯಿಂದ ಹಿಂದೆ ಸರಿಯುತ್ತಿದ್ದಾರೆ. ಲಾಕ್‌ಡೌನ್‌ನಿಂದ ತತ್ತರಿಸಿರುವ ಗ್ರಾಮೀಣ ಪ್ರದೇಶದ ರೈತರಿಗೆ ಗೋ ಹತ್ಯಾ ಕಾನೂನು ಭಾರೀ ದುಷ್ಪರಿಣಾಮ ಬೀರಿದೆ. ಆದರೆ ಸಂಘಪರಿವಾರ ಈ ಕಾನೂನಿಂದ ‘ಗೋ ಮಾಂಸಾಹಾರಿಗಳಿಗೆ’ ತೊಂದರೆಯಾಗಿದೆ ಎಂದು ಪ್ರಚಾರ ಮಾಡುತ್ತಿದೆ. ಆದರೆ ಕಾನೂನು ರೈತರನ್ನು ನಿಯಂತ್ರಿಸಲು ಜಾರಿಗೊಳಿಸಲಾಗಿದೆಯೇ ಹೊರತು, ಗೋಮಾಂಸಾಹಾರಿಗಳಿಗಾಗಿ ಅಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳುವಲ್ಲಿ ರೈತರು ಸಂಪೂರ್ಣ ಸೋತಿದ್ದಾರೆ.

ಇದೀಗ ಎರಡನೇ ಮೋಸ, ಮತಾಂತರ ಕಾಯ್ದೆಯಾಗಿದೆ. ದಲಿತರ ರಕ್ಷಣೆಗಾಗಿ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ದಲಿತರ ಕಿವಿಗೆ ಹೂವಲ್ಲ, ಬೆಂಗಳೂರಿನ ‘ಲಾಲ್‌ಬಾಗ್’ ಇಡಲು ಮುಂದಾಗಿದ್ದಾರೆ ಮುಖ್ಯಮಂತ್ರಿ ಬೊಮ್ಮಾಯಿ. ಕ್ರಿಶ್ಚಿಯನ್ನರು, ಮುಸ್ಲಿಮರಿಗೆ ಆಳದಲ್ಲಿ ಇದು ಯಾವ ರೀತಿಯಲ್ಲೂ ಹಾನಿ ಮಾಡುವುದಿಲ್ಲ. ಅಂತರ್ಧರ್ಮೀಯ ಪ್ರೇಮಿಗಳಿಗೆ, ಜಾತಿ ಶೋಷಣೆಯಿಂದ ತತ್ತರಿಸಿದ ಶೋಷಿತರಿಗೆ ಈ ಕಾಯ್ದೆ ಬಹುದೊಡ್ಡ ಬೆದರಿಕೆಯಾಗಿದೆ. ವಿಪರ್ಯಾಸವೆಂದರೆ, ದಲಿತರು, ಅಪ್ರಾಪ್ತರು ಹಾಗೂ ಬುದ್ಧಿಮಾಂದ್ಯರನ್ನು ಮತಾಂತರಗೊಳಿಸಿದರೆ ಹೆಚ್ಚು ಶಿಕ್ಷೆಯನ್ನು ಈ ಕಾಯ್ದೆ ವಿಧಿಸುತ್ತದೆ. ಉಳಿದ ಸಮುದಾಯವನ್ನು ಮತಾಂತರ ಮಾಡಿದರೆ ಅರ್ಧಕ್ಕರ್ಧ ಕಡಿಮೆ ಶಿಕ್ಷೆ. ಅಂದರೆ ಇಡೀ ಕಾಯ್ದೆಯನ್ನು ಯಾರಿಗಾಗಿ ತರಲಾಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ಊಹಿಸಬೇಕಾಗಿಲ್ಲ. ಈ ನಾಡಿನ ದಲಿತರು ಚಿಂತನೆ, ಆಲೋಚನೆ ಮತ್ತು ಪ್ರತಿರೋಧಗಳಿಗೆ ಲಗಾಮು ಹಾಕುವುದಕ್ಕಾಗಿಯೇ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ದಲಿತರನ್ನು ಬುದ್ಧಿಮಾಂದ್ಯರನ್ನೂ ಸಮಾನವಾಗಿ ನೋಡುವ ಸರಕಾರದ ಮನಸ್ಥಿತಿಯೇ ಪ್ರತಿಭಟನೆಗೆ ಅರ್ಹವಾದುದು. ಈ ದೇಶದ ದಲಿತರು ಮತಾಂತರಗೊಂಡಿರುವುದು ಹಿಂದೂ ಧರ್ಮದಲ್ಲಿರುವ ಅಸ್ಪಶ್ಯತೆ ಮತ್ತು ಜಾತಿ ಶೋಷಣೆಯ ಕಾರಣದಿಂದ.

ಇಂದು ಸರಕಾರ ಕಠಿಣ ಕಾಯ್ದೆ ಜಾರಿಗೊಳಿಸಬೇಕಾಗಿರುವುದು ಅಸ್ಪಶ್ಯತೆ, ಜಾತಿ ಶೋಷಣೆಯ ವಿರುದ್ಧ. ಆ ಮೂಲಕ ದಲಿತರನ್ನು ಹಿಂದೂ ಧರ್ಮದೊಳಗೆ ಉಳಿಸಿಕೊಳ್ಳುವ ಬಗ್ಗೆ ಯೋಚಿಸಬೇಕು. ಇದರಿಂದ ಹಿಂದೂ ಧರ್ಮಕ್ಕೂ, ದಲಿತರಿಗೂ ಜೊತೆಯಾಗಿ ಒಳಿತಾಗುತ್ತದೆ. ಆದರೆ ಸರಕಾರ ಅಂತಹ ಕಾನೂನಿನ ಬಗ್ಗೆ ಯೋಚಿಸದೆ, ಮತಾಂತರದ ಕುರಿತಂತೆ ಯೋಚಿಸುವ ದಲಿತರಿಗೆ ಕಾನೂನಿನ ಮೂಲಕ ಬೆದರಿಸಲು ಹೊರಟಿದೆ. ಹಲವು ಸಾಧು ಸಂತರು ಓಡಾಡಿ ಬೆಳೆಸಿದ ಹಿಂದೂ ಧರ್ಮವನ್ನು ಇದೀಗ ಬಿಜೆಪಿ ಕಾನೂನಿನ ಮೂಲಕ ಉಳಿಸಲು ಹೊರಟಿರುವುದೇ ಹಿಂದೂ ಧರ್ಮಕ್ಕೆ ಮಾಡುವ ಅತಿ ದೊಡ್ಡ ಅವಮಾನವಾಗಿದೆ. ಇದೇ ಸಂದರ್ಭದಲ್ಲಿ, ಈ ಕಾನೂನು ಇತರ ಧರ್ಮೀಯರ ಮೇಲೆ ದುರ್ಬಳಕೆಯಾಗುವ ಎಲ್ಲ ಸಾಧ್ಯತೆಗಳಿವೆ. ಇತ್ತೀಚೆಗೆ ಚರ್ಚುಗಳ ಮೇಲೆ, ಪಾದ್ರಿಗಳ ಮೇಲೆ ನಕಲಿ ಸಂಸ್ಕೃತಿ ರಕ್ಷಕರು ನಡೆಸುತ್ತಿರುವ ದಾಳಿಗಳು ಹೆಚ್ಚಾಗುತ್ತಿವೆ. ನಕಲಿ ಧರ್ಮ ರಕ್ಷಕರ ಕೈಗೆ ಈ ಕಾನೂನಿನ ಅಸ್ತ್ರವೂ ಸಿಕ್ಕಿದರೆ ಇನ್ನೇನಾಗಬಹುದು ? ಯಾರಾದರೂ ಬೈಬಲ್ ಪುಸ್ತಕಗಳನ್ನು ಹಂಚಿದರೆ ಅವರನ್ನು ಹಿಡಿದು ಜೈಲಿಗೆ ತಳ್ಳುವ ಸಾಧ್ಯತೆಗಳು ಕಾಣುತ್ತವೆ.

ಆಮಿಷ ಎನ್ನುವ ಪದಕ್ಕೆ ಕಾನೂನು ನೀಡಿರುವ ವ್ಯಾಖ್ಯಾನಗಳೇ ತಮಾಷೆಯಾಗಿವೆ. ಉತ್ತಮ ಜೀವನ ಶೈಲಿಗಾಗಿ ಮತಾಂತರವಾದರೂ ಅದು ಆಮಿಷದ ಮತಾಂತರವಾಗುತ್ತದೆಯಂತೆ. ಹಾಗೆಯೇ ನಾಳೆ, ದಲಿತರ ಮೇಲಿನ ಶೋಷಣೆಯನ್ನು ಎತ್ತಿ ತೋರಿಸಿದರೂ, ಅದು ಮತಾಂತರಕ್ಕೆ ನಡೆದ ಪ್ರಯತ್ನವಾಗಿ ಅವರ ಮೇಲೆ ದೂರು ದಾಖಲಾಗಬಹುದು. ಈ ಕಾಯ್ದೆಯನ್ನು ಬಳಸಿ ಒಬ್ಬನಿಗೆ ಮಾನಸಿಕವಾಗಿ ಕಿರುಕುಳವನ್ನಂತೂ ಧಾರಾಳವಾಗಿ ನೀಡಬಹುದಾಗಿದೆ. ಒಂದೆಡೆ ದಲಿತರ ಮೇಲಿನ ದೌರ್ಜನ್ಯ ಕಾಯ್ದೆಗಳನ್ನು ದುರ್ಬಲಗೊಳಿಸುತ್ತಾ, ಇನ್ನೊಂದೆಡೆ ದಲಿತರು ಮತಾಂತರವಾಗುವ ಅಥವಾ ತಮಗೆ ಬೇಕಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರವನ್ನು ಕಿತ್ತುಕೊಳ್ಳುವ ಈ ಕಾಯ್ದೆಯ ವಿರುದ್ಧ ದಲಿತ ಸಂಘಟನೆಗಳು ಜಾಗೃತಿಯಾಗದೇ ಇದ್ದರೆ, ಮುಂದಿನ ದಿನಗಳಲ್ಲಿ ಅಸ್ಪಶ್ಯತೆಯನ್ನು ಅಧಿಕೃತವಾಗಿ ಮಾನ್ಯ ಮಾಡುವ ಕಾನೂನನ್ನು ಸರಕಾರವೇ ಜಾರಿಗೆ ತರಲಿದೆ. ಮತ್ತು ‘ಇದನ್ನು ದಲಿತರ ಯೋಗ ಕ್ಷೇಮಕ್ಕಾಗಿ, ದಲಿತರು ಮತ್ತು ಇತರ ಹಿಂದೂಗಳ ನಡುವೆ ಸಾಮರಸ್ಯಕ್ಕಾಗಿ ಜಾರಿಗೆ ತಂದಿದ್ದೇವೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಪತ್ರಿಕಾ ಹೇಳಿಕೆ ನೀಡಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News