ತಾಜ್‌ ಮಹಲ್‌ ಕಟ್ಟಿದ ಕಾರ್ಮಿಕರ ಕೈಯನ್ನು ಶಾಜಹಾನ್‌ ಕಡಿದಿದ್ದನೇ?: ಸತ್ಯಾಂಶವೇನು?

Update: 2021-12-25 09:18 GMT

ಹೊಸದಿಲ್ಲಿ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ್ ಧಾಮ್ ಯೋಜನೆ ಉದ್ಘಾಟನೆ ಸಂದರ್ಭ ಯೋಜನೆ ಕಾಮಗಾರಿ ನಿರ್ವಹಿಸಿದ್ದ ಕಾರ್ಮಿಕರಿಗೆ ಪುಷ್ಪಾರ್ಚನೆ ಮಾಡಿದ್ದರು. ಇದೇ ವಿಚಾರದ ಬಗ್ಗೆ  ಮಾತನಾಡುವ ವೇಳೆ ನ್ಯೂಸ್ 19 ಆಂಕರ್ ಅಮೀಶ್ ದೇವಗನ್, ಮುಘಲ್ ದೊರೆ ಶಾಹ್ ಜಹಾನ್ ಕುರಿತು ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಕಾರ್ಮಿಕರ ಮೇಲೆ ಪುಷ್ಟಾರ್ಚನೆ ಮಾಡಿದ್ದರೆ ಶಾಹ್ ಜಹಾನ್ ತಾಜಮಹಲ್ ಕಟ್ಟಿದ್ದ ಕಾರ್ಮಿಕರ ಕೈಕತ್ತರಿಸಿದ್ದ ಎಂದಿದ್ದರು. ಆದರೆ ಈ ಉಲ್ಲೇಖ ಸುಳ್ಳು ಎಂದು altnews.in ತನ್ನ ಸತ್ಯಶೋಧನಾ ವರದಿಯಲ್ಲಿ ತಿಳಿಸಿದೆ.

ಗುಜರಾತ್‍ನಲ್ಲಿ ಮಾತನಾಡುವ ವೇಳೆ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡ ಇಂತಹುದೇ ಮಾತುಗಳನ್ನಾಡಿದ್ದರು. ಇನ್ನೊಬ್ಬ ಬಿಜೆಪಿ ನಾಯಕ ವಿನಯ್ ತೆಂಡುಲ್ಕರ್ ಕೂಡ ಇದೇ ರೀತಿ ಟ್ವೀಟ್ ಮಾಡಿದ್ದರು.

ಇದೇ ವಿಚಾರ ಮುಂದಿಟ್ಟುಕೊಂಡು ಶೋಧನೆಗೆ ತೊಡಗಿದ ಆಲ್ಟ್ ನ್ಯೂಸ್‍ಗೆ ಶಾಹ್ ಜಹಾನ್ ತಾಜ್ ಮಹಲ್ ಕಾರ್ಮಿಕರ ಕೈಕಡಿದಿದ್ದ ಎಂದು  ಇಂಗ್ಲೆಂಡ್‍ನ ವೈರ್ಡ್ ಸುದ್ದಿ ಸಂಸ್ಥೆ  ಮಾಡಿದ ಒಂದು ಟ್ವೀಟ್ ಹಾಗೂ ಅದಕ್ಕೂ ಆರು ವರ್ಷಗಳ ಮೊದಲು ಇಂಗ್ಲೆಂಡ್‍ನ ದಿ ಗಾರ್ಡಿಯನ್ ಕೂಡ ಇದೇ ರೀತಿಯಾಗಿ ಬರೆದಿತ್ತೆಂದು ಕಂಡುಕೊಂಡಿದೆ.

ಆದರೆ ಇದು ಕಟ್ಟುಕಥೆಯಲ್ಲದೆ ಮತ್ತಿನ್ನೇನಲ್ಲ ಎಂದು ರಾಂಚಿ ವಿವಿಯ ಇತಿಹಾಸ ವಿಭಾಗ 1971ರಲ್ಲಿ ಪ್ರಕಟಿಸಿದ್ದ ಜರ್ನಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಹೇಳಿತ್ತು. 2017ರಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ಕೂಡ ಶಾಹ್ ಜಹಾನ್ ಕಾರ್ಮಿಕರ ಕೈಕಡಿದಿದ್ದಾನೆಂಬುದು ಮಿಥ್ಯೆ ಎಂದಿತ್ತು. "ಇಂದಿಗೂ ತಾಜ್ ಗಂಜ್ ಎಂಬ ದೊಡ್ಡ  ಸ್ಥಳವೇ ಇದ್ದು ಇದನ್ನು ಶಾಹ್ ಜಹಾನ್ ತನಗಾಗಿ ತಾಜ್ ಮಹಲ್ ನಿರ್ಮಿಸಿದ್ದ ಸಾವಿರಾರು ಕಾರ್ಮಿಕರು, ಕರಕುಶಲಕರ್ಮಿಗಳಿಗಾಗಿ  ನಿರ್ಮಿಸಿದ್ದ. ಈ ಕಾರ್ಮಿಕರ  ನಂತರದ ತಲೆಮಾರಿನ ಕುಟುಂಬಗಳು ಈಗಲೂ ಅಲ್ಲಿದ್ದು ತಮ್ಮ ಪೂರ್ವಜನರ ಕೌಶಲ್ಯಗಳನ್ನೇ ಮುಂದುವರಿಸುತ್ತಿದೆ" ಎಂದು ಪತ್ರಿಕೆ ಹೇಳಿತ್ತು. ಈ ಲೇಖನವನ್ನು ಪತ್ರಕರ್ತ ಮಣಿಮುಗ್ದ ಶರ್ಮ ಬರೆದಿದ್ದರು.

ಆಲ್ಟ್ ನ್ಯೂಸ್ ಇತಿಹಾಸಕಾರ ಎಸ್ ಇರ್ಫಾನ್ ಹಬೀಬ್ ಅವರೊಂದಿಗೆ ಮಾತನಾಡುತ್ತಾ, “ಈ ಕಥೆಯನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ ಅಥವಾ ಯಾವುದೇ ವಿಶ್ವಾಸಾರ್ಹ ಇತಿಹಾಸಕಾರರು ಈ ಹಕ್ಕು ಮಾಡಿಲ್ಲ ಎಂದು ನಾನು ಹೇಳಬಲ್ಲೆ. ಈ  ಪುರಾಣವು 1960 ರ ದಶಕದ ಹಿಂದಿನದು ಮತ್ತು ನಾನು ಅದನ್ನು ಬಾಯಿಯ ಮಾತಿನ ಮೂಲಕ ಕೇಳಿದ್ದೇನೆ ಎಂಬುದು ಗಮನಿಸಬೇಕಾದ ಸಂಗತಿ. ಆದಾಗ್ಯೂ, ಒಂದು ಗಮನಾರ್ಹ ವ್ಯತ್ಯಾಸವಿದೆ. ಇಂದು, ಪುರಾಣಕ್ಕೆ ಕೋಮುವಾದಕ್ಕೆ ತಿರುಗಿ ಶಹಜಹಾನ್‌ ನನ್ನು ಗೇಲಿ ಮಾಡುತ್ತಿದೆ ಎಂದಿದ್ದಾರೆ.

ತಾಜ್ ಮಹಲ್  ಕುರಿತಾದ ಅಧಿಕೃತ ವೆಬ್ ಸೈಟ್‍ನಲ್ಲೂ ಶಾಹ್ ಜಹಾನ್ ಕಾರ್ಮಿಕರ ಕೈಕಡಿದಿದ್ದಾನೆಂಬುದನ್ನು ಉಲ್ಲೇಖಿಸಿಲ್ಲ,. ಆದರೆ ತಾಜ್ ಟೂರ್ಸ್ ಎಂಬ ವೆಬ್ ತಾಣ ಈ ಕುರಿತು ಉಲ್ಲೇಖಿಸಿ  "ವಾಸ್ತವವಾಗಿ ತಾಜ್ ಮಹಲ್ ನಿರ್ಮಿಸಿದ್ದ ಕಾರ್ಮಿಕರು ಬೇರೆ  ಯಾವುದೇ ದೊರೆಗೆ ಕೆಲಸ ಮಾಡುವ ಹಾಗಿಲ್ಲ ಎಂಬ  ನೈತಿಕ ಕಟ್ಟುಪಾಡನ್ನು ಶಾಹ್ ಜಹಾನ್  ವಿಧಿಸಿದ್ದ. ಬಳಿಕ ಈ ಕಾರ್ಮಿಕರು ಬೇರೆಯವರಿಗೆ ಕೆಲಸ ಮಾಡಲು ಸಾಧ್ಯವಿಲ್ಲದೇ ಇದ್ದುದರಿಂದ 'ಅವರ ಕೈಗಳನ್ನು ಕಡಿಯಲಾಗಿದೆ' ಎಂಬಂತಹ ಪದಪ್ರಯೋಗಗಳು ಕೇಳಿ ಬಂದವು" ಎಂದು ಈ ವೆಬ್ ತಾಣ ವಿವರಿಸಿದೆ. ಜನರ ಮಾತಿನಿಂದಾಗಿ ಬಳಿಕ ಕಟ್ಟುಕತೆಗಳು ಉದ್ಭವವಾಗಿತ್ತು ಎಂದು ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News