ಹರಿದ್ವಾರ ದ್ವೇಷ ಭಾಷಣ ಪ್ರಕರಣ: ಯುಎಪಿಎ ದಾಖಲಿಸಲಾಗುವುದಿಲ್ಲ ಎಂದ ಹರಿದ್ವಾರ ಡಿಜಿಪಿ

Update: 2021-12-25 09:29 GMT

ಹೊಸದಿಲ್ಲಿ: ಹರಿದ್ವಾರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹಲವು ಮಂದಿ ಮುಸ್ಲಿಮರ ವಿರುದ್ಧ  ಹಿಂಸೆಗೆ ಕರೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್, ಈ ಘಟನೆಯು ಯಾವುದೇ ಹತ್ಯೆಗಳಿಗೆ  ಕಾರಣವಾಗದೇ ಇರುವುದರಿಂದ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಹೇರಲಾಗಿಲ್ಲ ಎಂದಿದ್ದಾರೆ.

ಕಠಿಣವಲ್ಲದ ಸೆಕ್ಷನ್‍ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬುದನ್ನೂ ಅವರು ನಿರಾಕರಿಸಿದ್ದಾರೆ. ಸ್ಥಳೀಯ ನಿವಾಸಿಯೊಬ್ಬರು ನೀಡಿದ ದೂರಿನಲ್ಲಿ "ವಸೀಂ ರಿಝ್ವಿ ಮತ್ತು ಇತರರು" ಎಂದಷ್ಟೇ ಹೇಳಿರುವುದರಿಂದ ಎಫ್‍ಐಆರ್ ಕೂಡ ವಸೀಂ ರಿಝ್ವಿ ಆಲಿಯಾಸ್ ಜಿತೇಂದ್ರ ನಾರಾಯಣ್ ತ್ಯಾಗಿ ಅನ್ನು ಆರೋಪಿಯನ್ನಾಗಿ ಹೆಸರಿಸಿದೆ ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ ಅನ್ವಯ ಪ್ರಕರಣ ದಾಖಲಿಸಿದ್ದಾರೆ ಹಾಗೂ ಈ ಸೆಕ್ಷನ್  ಅನ್ವಯ ಗರಿಷ್ಠ ಶಿಕ್ಷೆ ಐದು ವರ್ಷ ಆಗಿದೆ.

ಕಾರ್ಯಕ್ರಮದಲ್ಲಿ ಮಕ್ಕಳು ಖಡ್ಗಗಳು ಮತ್ತು ತ್ರಿಶೂಲಗಳನ್ನು ಹಿಡಿದಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು "ಇವುಗಳು ಸಾಂಪ್ರದಾಯಿಕ ವಸ್ತುಗಳು, ಅವರು ಯಾವುದೇ ಶಸ್ತ್ರ ಖರೀದಿಸಿಲ್ಲ" ಎಂದು ಹೇಳಿದರು.

ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕಲಾಗಿದೆ ಎಂದು ಹೇಳಿದ ಅವರು ಅದೇ ಸಮಯ ವೀಡಿಯೋದಲ್ಲಿ ಕಾಣಿಸಿಕೊಂಡವರನ್ನು ಕಾನೂನಿನ ಪ್ರಕಾರ ಪ್ರಶ್ನಿಸಲು ಕರೆಸಲಾಗುವುದು ಎಂದಿದ್ದಾರೆ.

ಈ ಪ್ರಕರಣ ಸಂಬಂಧ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News