ಆರ್ಥಿಕ ದುರ್ಬಲ ಸಮುದಾಯ ಸಬಲಗೊಳಿಸುವುದು ಸಂವಿಧಾನ ಆಶಯವಾಗಲಿ: ಸಿ.ಟಿ.ರವಿ

Update: 2021-12-25 15:37 GMT

ಚಿಕ್ಕಮಗಳೂರು, ಡಿ.25: ತುಳಿತಕ್ಕೊಳಗಾದವರ ಏಳಿಗೆಗೆ ಅವಕಾಶ ನೀಡಿದಂತೆ ಆರ್ಥಿಕವಾಗಿ ದುರ್ಬಲ ವರ್ಗದ ಸಮುದಾಯವನ್ನು ಸಬಲರನ್ನಾಗಿಸುವುದು ಸಂವಿಧಾನದ ಆಶಯವಾಗಬೇಕು ಎಂದು ಶಾಸಕ ಸಿ.ಟಿ.ರವಿ ಅಭಿಪ್ರಾಯಿಸಿದರು.

ನಗರದ ಶ್ರೀರಂಗಣ್ಣ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವಿಪ್ರನೌಕರರ ಕ್ಷೇಮಾಭ್ಯುದಯ ಸಂಘದ ವತಿಯಿಂದ ಆಯೋಜಿಸಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಪ್ರರು ಆದಿಕಾಲದಿಂದಲೂ ಜಗತ್ತಿನ ಹಿತಕ್ಕಾಗಿ ಕೆಲಸಮಾಡುತ್ತಾ ಬಂದಿದ್ದಾರೆ. ಬ್ರಹ್ಮ ಜ್ಞಾನ ಪಡೆದು ಸಮಾಜದ ಒಳಿತಿಗಾಗಿ ಪ್ರಾರ್ಥಿಸುವ ಮೂಲಕ ಸಾಮಾಜಿಕ ಗೌರವಕ್ಕೆ ಪಾತ್ರರಾಗಿದ್ದಾರೆ, ಇಂದಿನ ಕಾಲಘಟ್ಟದಲ್ಲಿ ಅಸ್ಪೃಶ್ಯತೆ, ಜಾತೀಯತೆಗೆ ಬ್ರಾಹ್ಮಣರೇ ಕಾರಣ ಎಂದು ಬಿಂಬಿಸುವ ಕೆಲವು ಪ್ರಗತಿಪರರು ಮುಂದಾಗಿರುವುದು ವಿಷಾದನೀಯ ಎಂದರು.

ಮೌಲ್ಯಗಳ ಆಧಾರದ ಮೇಲೆ ಗೌರವಿಸುವ ಪರಂಪರೆ ನಮ್ಮದು, ಶಂಕರಾಚಾರ್ಯರು ಚಾಂಡಾಲನಿಗೂ ನಮಸ್ಕರಿಸುವ ಮೂಲಕ ಗೌರವಿಸುತ್ತಿದ್ದರು ಆ ಬಗ್ಗೆ ಇಂದಿಗೂ ಸಮಾಜ ಮಾತನಾಡಲ್ಲ, ಭೌದ್ಧಿಕ ವಿಸ್ತಾರ ಮೂಲಕ ನಮ್ಮಲ್ಲಿನ ಕೀಳರಿಮೆಯನ್ನು ಹೋಗಲಾಡಿಸಬೇಕು. ಪರೋಪಕಾರ, ಪ್ರಾಣಿ, ಪಕ್ಷಿಗಳ ಬಗ್ಗೆ ಕನಿಕರವಿದ್ದಾಗ ಸ್ವರ್ಗ ಪ್ರಾಪ್ತಿಯಾಗಲಿದೆ ಎಂಬುದನ್ನು ಎಲ್ಲಾ ಧರ್ಮಗಳು ಬೋಧಿಸುತ್ತವೆ. ಮಾನವ ಜನ್ಮ ಉತ್ಕೃಷ್ಟವಾದುದು, ಪುಣ್ಯದ ಕೆಲಸ ಮಾಡಿದವರು ಸ್ವರ್ಗಕ್ಕೆ ಪಾಪದ ಕೆಲಸ ಮಾಡಿದವರು ನರಕಕ್ಕೆ ಹೋಗಲಿದ್ದಾರೆ ಎಂದು ನಂಬಿಕೆ ಇದೆ, ಆ ನಿಟ್ಟಿನಲ್ಲಿ ಉತ್ತಮ ಮಾನವೀಯ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ಸಂವಿಧಾನ ಮೀಸಲಾತಿ ಮೂಲಕ ಏಳಿಗೆಗೆ ಅವಕಾಶ ನೀಡಿದೆ. ಅದರಂತೆ ಆರ್ಥಿಕವಾಗಿ ಹಿಂದುಳಿದ ದುರ್ಬಲ ಸಮುದಾಯಗಳನ್ನು ಮೇಲೆತ್ತುವುದು ಸಂವಿಧಾನದ ಆಶಯವಾಗಬೇಕು ಎಂದು ಅಭಿಪ್ರಾಯಿಸಿದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಜೋಷಿ, ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಅನಂತರಾಮು, ಜಿಲ್ಲಾ ವಿಪ್ರ ನೌಕರರ ಕ್ಷೇಮಾಭ್ಯುದಯ ಸಂಘದ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿದರು. ಇದೇ ವೇಳೆ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಸ್ಪರ್ಧೇಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು, ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ವಿನೀತ್‌ಕುಮಾರ್, ಕಾರ್ಯಾಧ್ಯಕ್ಷ ವಿಶ್ವೇಶ್ವರಪ್ರಸಾದ್, ಸಂಘಟನಾ ಕಾರ್ಯದರ್ಶಿ ಕಿರಣ್, ಜೆಪಿ, ಖಜಾಂಚಿ ಸಂಜಯ್, ಇದ್ದರು ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಎ.ಎನ್.ಗೋಪಾಲಕೃಷ್ಣ, ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುಮಾಪ್ರಸಾದ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News