ಡಿಕೆಶಿ ಜಿಲ್ಲಾಧಿಕಾರಿಗೆ ಅರ್ಜಿ ಹಾಕಿ ಮತಾಂತರವಾದರೆ ರಗಳೆ ಇಲ್ಲ: ಸಚಿವ ಈಶ್ವರಪ್ಪ

Update: 2022-01-01 10:46 GMT

ಶಿವಮೊಗ್ಗ, ಜ.1: 'ಡಿ.ಕೆ ಶಿವಕುಮಾರ್ ಅವರು ದೇವಸ್ಥಾನಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಕೊಡುತ್ತಾರೆ ಅಂತ ಹೇಳುವ ಮೊದಲು ಜಿಲ್ಲಾಧಿಕಾರಿ ಅವರಿಗೆ ಅರ್ಜಿ ಹಾಕಿಕೊಂಡು ಮುಸ್ಲಿಂ ಅಥವಾ ಕ್ರಿಶ್ಚಿಯನ್ ಆಗಿ ಮತಾಂತರವಾದರೆ ರಗಳೆ ಇಲ್ಲ. ದೇವಸ್ಥಾನಗಳಿಗೆ ಸ್ವತಂತ್ರ ಕೊಟ್ಟರೆ ಇವರಿಗೆ ಏಕೆ ಉರಿ' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,'ಇಲ್ಲಿಯವರೆಗೆ ಚರ್ಚ್‌ಗಳಿಗೆ, ಮಸೀದಿಗಳಿಗೆ ಸ್ವಾತಂತ್ರ್ಯ ಇದೆ. ದೇವಸ್ಥಾನಗಳಿಗೆ ಸ್ವಾತಂತ್ರ್ಯ ಕೊಟ್ಟ ತಕ್ಷಣ ಡಿಕೆಶಿ ಏಕೆ ಬೇಸರ ಮಾಡಿಕೊಂಡರು ಎಂಬುದು ನನಗೆ ಗೊತ್ತಿಲ್ಲ. ಗೋಹತ್ಯೆ ನಿಷೇಧ, ಮತಾಂತರ ವಿಷಯ ಬಂದಾಗ ಈ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಡಿಕೆಶಿ ಅವರು ಕೇವಲ ಮುಸಲ್ಮಾನರನ್ನು, ಕ್ರಿಶ್ಚಿಯನ್ನರನ್ನು ತೃಪ್ತಿಪಡಿಸುವ ಕೆಲಸ ಮಾಡ್ತಿದ್ದಾರೆ. ಹಿಂದೂಗಳಿಗೆ ತೊಂದರೆ ಆದರೂ ಪರವಾಗಿಲ್ಲ ಅಂತ ಯೋಚನೆ ಮಾಡ್ತಿದ್ದಾರೆ' ಎಂದರು.

'ಗೋ ಹತ್ಯೆ ಮಾಡುವ ವ್ಯಕ್ತಿಗಳ ಬಗ್ಗೆ ಕ್ರಮ ಕೈಗೊಳ್ಳಿ ಅಂದ್ರೂ ಕೈಗೊಳ್ಳಲಿಲ್ಲ. ಗೋಹತ್ಯೆ ನಿಲ್ಲಿಸುವವರನ್ನು ಜೈಲಿಗೆ ಕಳುಹಿಸಿದರು. ಡಿಕೆಶಿ ಅವರು ಇಲ್ಲಿಯೂ ರಾಜಕಾರಣ ತಂದ್ರೆ ನಾನು ಏನು ಮಾಡೋಕೆ ಆಗಲ್ಲ. ಅವರಿಗೆ ದೇವಸ್ಥಾನ ಅಭಿವೃದ್ಧಿ ಆಗುವುದು ಬೇಕಿಲ್ಲ. ಗೋಹತ್ಯೆ ಮಾಡಿದರೆ, ನಮ್ಮ ಹೆಣ್ಣು ಮಕ್ಕಳಿಗೆ ಅನ್ಯಾಯವಾದರೆ ಅವರಿಗೆ ನೋವು ಇಲ್ಲ. ಈಗಾಗಿ ಡಿಕೆಶಿ ಮುಸಲ್ಮಾನ್ ಇಲ್ಲವೇ, ಕ್ರಿಶ್ಚಿಯನ್ ಆಗುವುದು ಒಳ್ಳೆಯದು' ಎಂದು ಹೇಳಿದರು.

'ದೇವಸ್ಥಾನಕ್ಕೆ ಕೈ ಹಾಕಿದರೆ ಸರ್ಕಾರ ಭಸ್ಮವಾಗುತ್ತೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ದೇಶದಲ್ಲಿ ಕಾಂಗ್ರೆಸ್ ಭಸ್ಮವಾಗಿದೆಯಾ, ಬಿಜೆಪಿ ಭಸ್ಮವಾಗಿದೆಯಾ? ಗೋಹತ್ಯೆ ಮಾಡಿದ್ದಕೋಸ್ಕರ ಕಾಂಗ್ರೆಸ್ ಭಸ್ಮ ಆಗಿದ್ದು. ಮತಾಂತರ ನಿಷೇಧ ಕಾಯ್ದೆ ವಿರೋಧ ಮಾಡ್ತಿದ್ದಾರೆ. ಅದಕ್ಕೆ ಭಸ್ಮ ಆಗುತ್ತಿದೆ. ದೇಶ ಭಕ್ತರು, ಧರ್ಮ ಭಕ್ತರು ಬಿಜೆಪಿಯಲ್ಲಿ ಇರುತ್ತಾರೆ. ರಾಷ್ಟ್ರ ಭಕ್ತಿ, ಧರ್ಮ ಭಕ್ತಿಯನ್ನು ನಮಗೆ ಆರೆಸ್ಸೆಸ್ ಹೇಳಿಕೊಟ್ಟಿದೆ. ನಾವೆಲ್ಲರೂ ಆರೆಸ್ಸೆಸ್ ಬೆಂಬಲಿಗರೇ' ಎಂದರು.

ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶ ವಿಚಾರವಾಗಿ ಮಾತನಾಡಿ, ಚುನಾವಣೆ ಅಂದ ಮೇಲೆ ಕಾಂಗ್ರೆಸ್‌ನವರು ಬದುಕಿರಬೇಕಲ್ಲ. ನಮಗೆ ವಿರೋಧ ಪಕ್ಷವೇ ಇಲ್ಲ ಅಂತಾದ್ರೆ ಕಥೆ ಏನು. ಡೆಮಾಕ್ರಸಿಯಲ್ಲಿ ವಿರೋಧ ಪಕ್ಷ ಇರಬೇಕು. ಹಾಗಾಗಿ ಕಾಂಗ್ರೆಸ್ ಸ್ವಲ್ಪ ಸ್ಥಾನ ತೆಗೆದುಕೊಳ್ಳುವುದಕ್ಕೆ ಜನ ಬಿಟ್ಟಿದ್ದಾರೆ. ನಾನು ಅದನ್ನು ಸ್ವಾಗತಿಸುತ್ತೇನೆ. ಎಲ್ಲಿ ನಾವು ಎಡವಿದ್ದೇನೆ ಎಂದು ಗಮನಿಸಿ, ತಿದ್ದಿಕೊಳ್ಳುವ ಪ್ರಯತ್ನ ಮಾಡ್ತೀವಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News