‘ಮೇಕೆದಾಟು' ಯೋಜನೆ: ಶೀಘ್ರದಲ್ಲೇ ಕಾಂಗ್ರೆಸ್ ಹೊಣೆಗೇಡಿತನದ ಸಾಕ್ಷ್ಯ ಬಿಡುಗಡೆ; ಸಚಿವ ಗೋವಿಂದ ಕಾರಜೋಳ

Update: 2022-01-01 11:40 GMT

ಬೆಂಗಳೂರು, ಜ. 1: ‘ಅಂದು ಕೃಷ್ಣೆಗೆ(ಕೂಡಲ ಸಂಗಮ), ಇಂದು ಕಾವೇರಿಗೆ (ಮೇಕೆದಾಟು) ಸಿಕ್ಕ ಅವಕಾಶವನ್ನು ವ್ಯಥ್ರ್ಯಗೊಳಿಸಿ ಅರ್ಥಹೀನ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಮುಖಂಡರು ಅಧಿಕಾರದಲ್ಲಿದ್ದಾಗ ‘ಮೇಕೆದಾಟು' ಅಣೆಕಟ್ಟು ಯೋಜನೆ ಕುರಿತು ಹೊಣೆಗೇಡಿತನಕ್ಕೆ ಸಾಕ್ಷ್ಯ ನಮ್ಮಲ್ಲಿದೆ. ಕಾದು ನೋಡಿ, ಕೆಲವೇ ದಿನಗಳಲ್ಲಿ ಸ್ಪೋಟಕ ಮಾಹಿತಿ ಹೊರಹಾಕುತ್ತೇನೆ' ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೊಸಬಾಂಬ್ ಸಿಡಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಅಣೆಕಟ್ಟು ಯೋಜನೆ ವಿಚಾರ ರಾಜ್ಯದ ಹಿತದೃಷ್ಟಿಯಿಂದ ಮತ್ತು ರಾಜ್ಯದ ಜನತೆಗೆ ಸತ್ಯ ಗಮನಕ್ಕೆ ತರುವುದಕ್ಕಾಗಿ ಶೀಘ್ರದಲ್ಲೆ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು. ಕಾಂಗ್ರೆಸ್ ಪಕ್ಷದ ನಾಯಕರು ಪಾದಯಾತ್ರೆ ನಡೆಸುವ ಮೂಲಕ ಗಿಮಿಕ್ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ರಾಜಕೀಯ ಗಿಮಿಕ್ ಮಾಡುವುದು ಇದೇ ಮೊದಲಲ್ಲ. 2013ರ ಜನವರಿ 7ರಿಂದ ಜನವರಿ 14ರವರೆಗೆ ಪಾದಯಾತ್ರೆ ಮಾಡಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ರಾಜಕೀಯ ಗಿಮಿಕ್ ಮಾಡಿದ್ದರು ಎಂದು ಟೀಕಿಸಿದ ಗೋವಿಂದ ಕಾರಜೋಳ, ಅಧಿಕಾರದಲ್ಲಿದ್ದಾಗ ಆಲಸ್ಯತನ ತೋರುವುದು, ಕಡತ ಯಜ್ಞ ಮಾಡದೇ ಕಾಲಹರಣ ಮಾಡುವುದು, ವಿಪಕ್ಷದಲ್ಲಿದ್ದಾಗ ಅನಗತ್ಯವಾದ ಆಂದೋಲನಗಳನ್ನು ಕೈಗೊಳ್ಳುವುದು ಕಾಂಗ್ರೆಸ್‍ನವರ ಜಾಯಮಾನ ಎಂದು ವ್ಯಂಗ್ಯವಾಡಿದರು.

ತಾವು ಅಧಿಕಾರದಲ್ಲಿದ್ದಾಗ ಕಾವೇರಿ ಕಣಿವೆಯ ರೈತರ ಮತ್ತು ಜನಹಿತದ ಕೆಲಸಗಳನ್ನು ವಿಳಂಬ ಮಾಡುವ ಮೂಲಕ ಮುಂದೂಡಿ ಇದೀಗ ಪಾದಯಾತ್ರೆ ಮೂಲಕ ಗಿಮಿಕ್ ಮಾಡುವುದು ಜನರಿಗೆ ತಿಳಿಯುತ್ತದೆ. ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿನ ವೈಫಲ್ಯಗಳನ್ನು ದಾಖಲೆಗಳ ಮೂಲಕ ಜನರಿಗೆ ತಿಳಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News