ಚಿಕ್ಕಮಗಳೂರು: ಕೋವಿಡ್ ಮಾರ್ಗಸೂಚಿ ನಡುವೆಯೂ ಹೊಸ ವರ್ಷಾಚರಣೆಗೆ ಜಿಲ್ಲಾದ್ಯಂತ ಪ್ರವಾಸಿಗರ ದಂಡು

Update: 2022-01-01 18:10 GMT

ಚಿಕ್ಕಮಗಳೂರು, ಜ.1: ಹೊಸವರ್ಷದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ರಾಜ್ಯದ ವಿವಿಧ ಮೂಲೆಗಳಿಂದ ಪ್ರವಾಸಿಗರ ದಂಡೆ ಹರಿದು ಬಂದಿದ್ದು, ಸುಂದರ ನಿಸರ್ಗವನ್ನು ಸವಿಯುವುದರೊಂದಿಗೆ ಹೊಸವರ್ಷವನ್ನು ಬರಮಾಡಿಕೊಂಡರು.

ವಾರಾಂತ್ಯದ ದಿನಗಳಲ್ಲಿ ಭಾರೀ ಪ್ರಮಾಣದ ಪ್ರವಾಸಿಗರು ಬರುವುದು ಸಾಮಾನ್ಯ ಅದರಲ್ಲೂ ಈ ಬಾರಿ ನೂತನ ವರ್ಷ ವಾರಾಂತ್ಯದಲ್ಲಿ ಬಂದಿದ್ದರಿಂದ ಪ್ರಮಾಣದ ಪ್ರವಾಸಿಗರು ಕಾಫಿನಾಡಿನತ್ತಾ ಮುಖ ಮಾಡಿದ್ದರು. ಇನ್ನೂ ಪ್ರವಾಸಿ ತಾಣಗಳಲ್ಲಿ ಕೋವಿಡ್ ಮಾರ್ಗಸೂಚಿಗಳು ಮಾಯವಾಗಿದ್ದವು. ಜಿಲ್ಲೆಯ ಮುಳ್ಳಯ್ಯನಗಿರಿ ಪರ್ವತ ಶ್ರೇಣಿ ಪ್ರದೇಶಕ್ಕೆ ಶನಿವಾರ ಬಾರೀ ಪ್ರಮಾಣದ ಪ್ರವಾಸಿಗರು ಆಗಮಿಸಿದ್ದು, 414 ಬೈಕ್, 1,148 ಕಾರುಗಳಲ್ಲಿ ಹಾಗೂ 89 ಟಿಟಿ ವಾಹ ನ ಮತ್ತು ಮಿನಿ ಬಸ್‍ಗಳಲ್ಲಿ ಪ್ರವಾಸಿಗರು ಬಂದಿದ್ದು ಅಂದಾಜು 10ಸಾವಿರಕ್ಕೂ ಹೆಚ್ಚಿನ ಜನರು ಇಲ್ಲಿನ ಪ್ರಕೃತಿಯನ್ನು ಸವಿದರು. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಲಗ್ಗೆ ಇಟ್ಟಿದ್ದರಿಂದ ಮುಳ್ಳಯ್ಯನಗಿರಿ ಶ್ರೇಣಿಗೆ ಸಾಗುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್‍ನಿಂದ ಪ್ರವಾಸಿಗರು ಹೈರಾಣಾ ದರೂ.

ಮುಳ್ಳಯ್ಯನಗಿರಿ ಸೇರಿದಂತೆ ದತ್ತಪೀಠ, ಹೊನ್ನಮ್ಮನಹಳ್ಳ, ಮಾಣಿಕ್ಯಧಾರ, ಮುತ್ತೋಡಿ, ಸಗೀರ್‍ಫಾಲ್ಸ್, ಕಲ್ಲತ್ತಗಿರಿ ಕೆಮ್ಮಣ್ಣಗುಂಡಿ, ಚಾರ್ಮಾಡಿಘಾಟ್, ದೇವರಮನೆ, ಕುದುರೆಮುಖ ಮಲ್ಲಂದೂರು ಗುಡ್ಡ, ಕಾಮೇನಹಳ್ಳಿ ಫಾಲ್ಸ್, ಉಕ್ಕುಂದ ಜಲಪಾತ, ಸಿರಿಮನೆ ಫಾಲ್ಸ್ ಸೇರಿದಂತೆ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಶೃಂಗೇರಿ ಶಾರದಾ ದೇವಸ್ಥಾನ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಕಳಸ ಕಳಶೇಶ್ವರ ದೇವಸ್ಥಾನ ಸೇರಿ ದಂತೆ ಇತರೆ ದೇವಸ್ಥಾನಗಳಿಗೆ ಬಾರೀ ಸಂಖ್ಯೆಯ ಜನರು ಭೇಟಿನೀಡಿದರು.

ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣ ಪ್ರದೇಶದಲ್ಲಿ ವಾಹನಧಟ್ಟಣೆ ಎಂದಿಗಿಂತ ಹೆಚ್ಚಾಗಿತ್ತು. ಕೋ ವಿಡ್ ಹಿನ್ನಲೆಯಲ್ಲಿ ನೈಟ್‍ ಕರ್ಫ್ಯೂ ವಿಧಿಸಲಾಗಿತ್ತು. ಪ್ರವಾಸಿ ಕೇಂದ್ರಗಳ ಮೇಲೆ ನಿಗಾ ವಹಿಸಲು 600 ಜನ ಪೊಲೀಸ್ ಸಿಬ್ಬಂದಿ ಬಂದೋಬಸ್ತ್‍ಗೆ ನಿಯೋಜಿಸಲಾಗಿತ್ತು. ಹೋಮ್ ಸ್ಟೇ ಮತ್ತು ಪ್ರವಾಸಿ ತಂಗು ಪ್ರದೇಶದಲ್ಲಿ ಕೋವಿಡ್ ನಿಯಮ ಪಾಲಿಸಿಕೊಂಡು ಶೇ.50ರಷ್ಟು ಜನರು ತಂಗಲು ಅವಕಾಶವನ್ನು ನೀಡಲಾಗಿತ್ತು. ಕೋವಿ ಡ್ ಹಿನ್ನೆಲೆಯಲ್ಲಿ ಪ್ರವಾಸಿತಾಣಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟರು ಪ್ರವಾಸಿತಾಣಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗಿತ್ತು. ಇದ ರಿಂದ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು.

ಜಿಲ್ಲಾದ್ಯಂತ ನೂತನ ವರ್ಷಾಚಾರಣೆ: ಜಿಲ್ಲಾದ್ಯಂತ ನೂತನ ವರ್ಷವನ್ನು ಅತ್ಯಂತ ಸಂಭ್ರಮ ಸಡಗರದಿಂದ ಬರಮಾಡಿಕೊಳ್ಳಲಾಯಿತು. ರಾತ್ರಿ 12ರವರೆಗೂ ಕಾದುಕುಳಿತ ಜನರು 12ಗಂಟೆ ಆಗುತ್ತಿದ್ದಂತೆ ಪಟಾಕಿಗಳನ್ನು ಸಿಡಿಸಿ ನೂತನ ವರ್ಷವನ್ನು ಬರಮಾಡಿಕೊಂಡರು. ಶುಭಾಶಯದ ಸಂದೇಶಗಳನ್ನು ಹಂಚಿಕೊಂಡರು. ಇನ್ನೂ ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ವಿವಿಧ ದೇಶಿ ಉಡುಪುಗಳನ್ನು ತೊಟ್ಟು ಸಂಭ್ರಮದಿಂದ ನೂತನ ವರ್ಷವನ್ನು ಆಚರಿಸಿದರು. ಪ್ರತೀ ಇಲಾಖೆಗಳ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಹೂವಿನ ಬೊಕ್ಕೆಗಳನ್ನು ನೀಡುವ ಮೂಲಕ ನೂತನ ವರ್ಷದ ಶುಭಾಶಯ ಕೋರಿಕೊಂಡರು. ಹಾಗೂ ಸಾರ್ವಜನಿಕರು ಹೊಸ ಉಡುಗೆ ತೊಟ್ಟು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಂಭ್ರಮದಿಂದ ನೂತನ ವರ್ಷವನ್ನು ಬರಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News