ಐಕಮತ್ಯದ ಕೊರತೆಯೂ, ಶೋಷಣೆಯ ಹೊಸ ಆಯಾಮಗಳೂ

Update: 2022-01-03 19:30 GMT

ನಿಜ, ಕೊರಗ ಸಮುದಾಯ ಜನಸಂಖ್ಯೆಯ ದೃಷ್ಟಿಯಲ್ಲಿ ನಗಣ್ಯ. ಇಂತಹ ನೂರಾರು ಸಮುದಾಯಗಳು ನಮ್ಮ ನಡುವೆ ಇವೆ. ತಮ್ಮ ಜೀವನೋಪಾಯಕ್ಕಾಗಿ ಸರಕಾರ ಮತ್ತು ಸಾಂವಿಧಾನಿಕ ಸವಲತ್ತುಗಳನ್ನೇ ಅವಲಂಬಿಸುವ ಇಂತಹ ಅನೇಕ ಸಮುದಾಯಗಳಲ್ಲಿ ಪ್ರತಿರೋಧದ ನೆಲೆಗಳನ್ನು ಅರಸುವುದಕ್ಕಿಂತಲೂ, ಈ ಶೋಷಿತರ ಸಾಮಾಜಿಕಾರ್ಥಿಕ ನೆಲೆಗಳಿಂದ ಹೊರತಾಗಿ, ಪರಾನುಭೂತಿಯನ್ನು ತೋರುವ ಮೂಲಕ, ಆಳುವ ವ್ಯವಸ್ಥೆಯ ಶೋಷಣೆ ಮತ್ತು ದಬ್ಬಾಳಿಕೆಯ ಮೂಲಗಳನ್ನು ಶೋಧಿಸುವುದು ಇಂದಿನ ಅಗತ್ಯತೆಯಾಗಿದೆ.


ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಶತಮಾನಗಳಿಂದ ಕಾಣಬಹುದಾದ ಒಂದು ವೈಶಿಷ್ಟ್ಯ ಎಂದರೆ ಇಲ್ಲಿ ಜನಸಮುದಾಯಗಳ ಐಕ್ಯತೆಯನ್ನು ನಿರ್ಧರಿಸುವಷ್ಟೇ ಪರಿಣಾಮಕಾರಿಯಾಗಿ ಸಮುದಾಯಗಳ ನಡುವಿನ ವಿಘಟನೆಯನ್ನೂ ನಿರ್ಧರಿಸುವುದು ಜಾತಿ ಮೂಲಗಳು. ತನ್ನ ಹುಟ್ಟು ಮತ್ತು ಬೆಳವಣಿಗೆ, ತಾನು ಬೆಳೆದ ಸಾಮಾಜಿಕ ಪರಿಸರ, ತಾನು ಬೆಳೆಸಿಕೊಂಡ ಸಂಬಂಧಗಳ ಮೂಲಕವೇ ವ್ಯಕ್ತಿ ತನ್ನ ವ್ಯಕ್ತಿತ್ವವನ್ನೂ ರೂಪಿಸಿಕೊಳ್ಳುವುದು ಸಹಜ ಪ್ರಕ್ರಿಯೆ. ಯಾವುದೇ ವ್ಯಕ್ತಿ ಈ ಚೌಕಟ್ಟಿನಿಂದ ಹೊರಬಂದು, ಬಾಹ್ಯ ಸಮಾಜದೊಳಗಿನ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡಾಗ ಮಾತ್ರವೇ ಸಾಮಾಜಿಕ ಪ್ರಜ್ಞೆ ಮೂಡಲು ಸಾಧ್ಯ. ವ್ಯಷ್ಟಿ ಪ್ರಜ್ಞೆಯನ್ನು ದಾಟಿ ಸಮಷ್ಟಿ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕೆಂದರೆ ವ್ಯಕ್ತಿಗತ ನೆಲೆಯಲ್ಲಿನ ಜಾತಿ-ಮತ-ಸಮುದಾಯ ಮತ್ತು ಭಾಷೆಯ ಭಾವನಾತ್ಮಕ ಸಂಕೋಲೆಗಳನ್ನು ತೊರೆದು ಸಾಮುದಾಯಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು.

ಭಾರತದ ದುರಂತ ಎಂದರೆ ಇಲ್ಲಿ ಶತಮಾನಗಳಿಂದ ಬೇರೂರಿರುವ ಜಾತಿ ಶ್ರೇಷ್ಠತೆಯ ವ್ಯಸನ ಈ ಪ್ರಕ್ರಿಯೆಗೆ ಅವಕಾಶವನ್ನೇ ನೀಡುವುದಿಲ್ಲ. ತೊಟ್ಟಿಲಿನಿಂದಲೇ ಜಾತಿ ಶ್ರೇಷ್ಠತೆಯನ್ನು ಆಚರಣೆಗಳ ಮೂಲಕ, ವಿಧಿ ವಿಧಾನಗಳ ಮೂಲಕ, ಬೋಧನೆ ಮತ್ತು ಸಂವಹನದ ಮೂಲಕ ಮಕ್ಕಳಲ್ಲಿ ಬಿತ್ತುವ ಒಂದು ವ್ಯವಸ್ಥಿತ ನಾಗರಿಕತೆಯನ್ನು ಭಾರತ ರೂಢಿಸಿಕೊಂಡುಬಂದಿದೆ. ಚಿಗುರುವ ಹಂತದಲ್ಲೇ ಒಂದು ಕುಡಿಯನ್ನು ಸಂಕೋಲೆಗಳಲ್ಲಿ ಬಂಧಿಸುವ ಈ ಪ್ರಕ್ರಿಯೆಗೆ ಶ್ರೇಷ್ಠತೆಯ ವ್ಯಸನ ಮತ್ತು ಮೇಲರಿಮೆಗಳು ಪೂರಕವಾಗಿ ವ್ಯಕ್ತಿತ್ವಗಳನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇದು ಎಲ್ಲ ದೇಶಗಳಲ್ಲೂ, ಎಲ್ಲ ರೀತಿಯ ಸಮಾಜಗಳಲ್ಲೂ ಇರಬಹುದಾದ ಸ್ವಾಭಾವಿಕ ಪ್ರಕ್ರಿಯೆಯಾದರೂ ಭಾರತದ ಸಂದರ್ಭದಲ್ಲಿ ವಿಭಿನ್ನವಾಗಿಯೇ ಕಾಣುವುದಲ್ಲದೆ ಸಾಮಾಜಿಕ ಶೋಷಣೆಯ ಬುನಾದಿಯಾಗಿ ಪರಿಣಮಿಸುತ್ತದೆ.

ಸಾಮಾಜಿಕ ನೆಲೆಯಲ್ಲಿ ಜಾತಿ ತಾರತಮ್ಯಗಳು ಮತ್ತು ಶ್ರೇಷ್ಠ-ಕನಿಷ್ಠ ಪರಿಕಲ್ಪನೆಯ ಧೋರಣೆಗಳು ನಿರ್ಮಿಸುವ ಗೋಡೆಗಳಿಗೆ ಪೂರಕವಾಗಿ ವ್ಯಕ್ತಿಗತ ನೆಲೆಯಲ್ಲಿ ಮೈ ಬಣ್ಣ, ಬೌದ್ಧಿಕ ಮಟ್ಟ ಮತ್ತು ಆರ್ಥಿಕ ಸ್ಥಿತ್ಯಂತರಗಳು ಬೇಲಿಗಳನ್ನು ನಿರ್ಮಿಸುವುದು ಭಾರತದ ಜಾತಿ ವ್ಯವಸ್ಥೆಯ ವೈಶಿಷ್ಟ್ಯ. ಪ್ರಾಪಂಚಿಕ ಬದುಕಿಗೆ ಮಗು ಕಣ್ತೆರೆಯುವ ಮುನ್ನವೇ ಅದು ಈ ಬೇಲಿಗಳಿಂದ ಸುತ್ತುವರಿಯಲ್ಪಟ್ಟಿರುತ್ತದೆ. ನೆಲದ ಮೇಲೆ ನಡೆಯಲಾರಂಭಿಸುವ ಮುನ್ನವೇ ಮಕ್ಕಳನ್ನು ನೆಲದ ಸೂಕ್ಷ್ಮತೆಗಳಿಂದ ಬೇರ್ಪಡಿಸಿ ಯಾವುದೋ ಒಂದು ನಿರ್ದಿಷ್ಟ ಜಾತಿ-ಮತ-ಧರ್ಮ-ಆಚರಣೆ ಮತ್ತು ವಿಧಿ ವಿಧಾನಗಳ ಚೌಕಟ್ಟಿನಲ್ಲಿ ಬಂಧಿಸಲಾಗುತ್ತದೆ. ವೈದಿಕ ಶಾಹಿ ಪರಂಪರೆಯನ್ನು ಇಂದಿಗೂ ಚಾಚೂ ತಪ್ಪದೆ ಅನುಸರಿಸುವ ಮೇಲ್ಜಾತಿಗಳಲ್ಲಿ ಇದು ಶ್ರೇಷ್ಠತೆಯ ವ್ಯಸನಕ್ಕೆ ಸುಲಭಮಾರ್ಗವಾಗುತ್ತದೆ. ಆಧುನಿಕ ಜಗತ್ತಿನ ಸವಲತ್ತುಗಳು ಮತ್ತು ನಾಗರಿಕ ಪ್ರಪಂಚದ ಭೌತಿಕ ಅನುಕೂಲತೆಗಳ ನೆರಳಲ್ಲೇ ಬೆಳೆಯುವ ಇಂತಹ ಮಕ್ಕಳು ಕ್ರಮೇಣ ತಮ್ಮ ವರ್ಗ ಅಸ್ಮಿತೆಯನ್ನೂ ಗುರುತಿಸಿಕೊಳ್ಳಲಾರಂಭಿಸುತ್ತವೆ.

ಹೀಗೆ ಜಾತಿ ಶ್ರೇಷ್ಠತೆ-ಮೇಲರಿಮೆ-ಮೇಲಂತಸ್ತಿನ ಧೋರಣೆ ಮತ್ತು ಮೇಲ್ವರ್ಗದ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಒಂದು ಪೀಳಿಗೆ ಸುತ್ತಲಿನ ವಾಸ್ತವ ಜಗತ್ತಿಗೆ ಮುಖಾಮುಖಿಯಾಗುವುದರ ಬದಲು ತಮ್ಮ ಸುತ್ತಲೂ ನಿರ್ಮಿಸಲ್ಪಟ್ಟಿರುವ ಬೇಲಿಗಳೊಡನೆ ಅನುಸಂಧಾನಕ್ಕೆ ಮುಂದಾಗುತ್ತವೆ. ಈ ಬೇಲಿಗಳ ಅಂಚಿನಲ್ಲಿ ನಡೆಯುವ ಬೌದ್ಧಿಕ ಸಂವಹನಗಳು ಮತ್ತು ಭೌತಿಕ ಸಂಪರ್ಕಗಳು ಈ ಪೀಳಿಗೆಯಲ್ಲಿ ಸಮಾಜಮುಖಿ ಚಿಂತನೆಗಳನ್ನು ಮೂಡಿಸುವುದಕ್ಕಿಂತಲೂ ಹೆಚ್ಚಾಗಿ, ವಾಸ್ತವಕ್ಕೆ ಬೆನ್ನು ತಿರುಗಿಸಿ, ಪರಂಪರೆಯ ಭವ್ಯತೆಯೊಡನೆ ಬೆರೆತುಹೋಗುವ ರೀತಿಯಲ್ಲಿ ಇಡೀ ಸಮಾಜವನ್ನು ಮುನ್ನಡೆಸಲಾಗುತ್ತದೆ.

ಸಮಾಜದಲ್ಲಿ ಅಂತರ್ಗತವಾಗಿರಬಹುದಾದ ಸಾಮಾಜಿಕ ಅನಿಷ್ಠಗಳು, ತಾರತಮ್ಯದ ನೆಲೆಗಳು, ಶೋಷಣೆಯ ಆಯಾಮಗಳು ಇವೆಲ್ಲವೂ ಈ ಬೇಲಿಯಂಚಿನಲ್ಲಿ ನಡೆಯುವ ಸಂಕಥನಗಳಲ್ಲಿ ಮುಳುಗಿಹೋಗುವುದರಿಂದ ಪರಂಪರೆ ಮತ್ತು ಗ್ರಾಂಥಿಕ ಭವ್ಯತೆಯ ಭ್ರಮೆಯಲ್ಲೇ ಈ ಪೀಳಿಗೆ ವಾಸ್ತವ ಜಗತ್ತಿಗೆ ವಿಮುಖವಾಗುತ್ತಾ ಹೋಗುತ್ತದೆ. ಇಂತಹ ಒಂದು ಜಗತ್ತಿನ ನಡುವೆ ನಾವು ಜಾತಿ ದೌರ್ಜನ್ಯ, ಅಸ್ಪಶ್ಯತೆ, ತಾರತಮ್ಯ, ಶೋಷಣೆ ಮತ್ತು ದಬ್ಬಾಳಿಕೆಗಳನ್ನು ಶೋಧಿಸುತ್ತಿದ್ದೇವೆ. ಉಡುಪಿಯ ಬಳಿ ಕೊರಗ ಸಮುದಾಯದ ಮೇಲೆ ನಡೆದಿರುವ ದೌರ್ಜನ್ಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ಶೂದ್ರ ಸಮುದಾಯಗಳು ವೈದಿಕಶಾಹಿ ಮನಸ್ಥಿತಿಗೆ ವಿಮುಖವಾಗಿ ಇತರ ತಳಸಮುದಾಯಗಳೊಡನೆ, ಶೋಷಿತರೊಡನೆ ಮತ್ತು ಅಸ್ಪೃಶ್ಯತೆಯ ಕ್ರೌರ್ಯವನ್ನು ಅನುಭವಿಸುತ್ತಿರುವವರೊಡನೆ ಗುರುತಿಸಿಕೊಳ್ಳಬೇಕು ಎಂಬ ನಮ್ಮ ಸಹಜವಾದ ನಿರೀಕ್ಷೆ ಮತ್ತು ಅಪೇಕ್ಷೆಗಳ ನಡುವೆಯೇ, ಹಿಂದೂ ಧರ್ಮ ಎನ್ನಲಾಗುವ ಒಂದು ಮತೀಯ ಅಸ್ಮಿತೆ ಎಲ್ಲರನ್ನೂ ಆವರಿಸಿಕೊಳ್ಳುತ್ತಿದೆ. ಸಾಮಾಜಿಕ ಸ್ಥಾನಮಾನಗಳಲ್ಲಿ, ಆರ್ಥಿಕ ವಲಯಗಳಲ್ಲಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅವಕಾಶಗಳಿಗಾಗಿ ಹಪಹಪಿಸುವ ಶೂದ್ರ ಸಮುದಾಯಗಳಿಗೆ ಎಡಪಂಥೀಯ ರಾಜಕಾರಣಕ್ಕಿಂತಲೂ, ಉಗ್ರ ಹಿಂದುತ್ವವಾದವನ್ನು ಪ್ರತಿಪಾದಿಸುವ ಬಲಪಂಥೀಯ ರಾಜಕಾರಣ ಆಕರ್ಷಣೀಯವಾಗಿ ಕಾಣುತ್ತದೆ. ಏಕೆಂದರೆ ಅಲ್ಲಿ ಜಾತಿ ಶ್ರೇಷ್ಠತೆಯ ಮೇಲರಿಮೆಯನ್ನು ಸಂರಕ್ಷಿಸಲಾಗುತ್ತದೆ. ಸಾಮಾಜಿಕ ಸ್ಥಾನಮಾನಗಳ ಪಲ್ಲಟ ಸಾಧ್ಯವಾಗುವುದಿಲ್ಲ.

ಐದು ದಶಕಗಳ ದಲಿತ ಚಳವಳಿಯ ಫಲಾನುಭವಿಗಳೇ ಆದ ತಳಸಮುದಾಯಗಳು ತಮ್ಮಳಗಿನ ವರ್ಗಾಧಾರಿತ ಶೋಷಣೆಯನ್ನು ಗುರುತಿಸಲು ವಿಫಲವಾಗಿರುವುದರಿಂದಲೇ ಇಂದು ಶೋಷಿತರಲ್ಲೇ ಶೋಷಿತರೂ ಸೃಷ್ಟಿಯಾಗಿದ್ದಾರೆ. ಕೊರಗ ಸಮುದಾಯವೂ ಇಂತಹುದರಲ್ಲಿ ಒಂದು. ಭಾರತದ ಸಂದರ್ಭದಲ್ಲಿ ದಲಿತರು, ಆದಿವಾಸಿಗಳನ್ನೂ ಒಳಗೊಂಡಂತೆ ತಳಸಮುದಾಯಗಳು ಮೂಲತಃ ಭೂಮಿಯನ್ನು ಅವಲಂಬಿಸಿರುತ್ತವೆ ಅಥವಾ ತಮ್ಮ ಪಾರಂಪರಿಕ ಕಸುಬುಗಳನ್ನು ಆಧರಿಸಿರುತ್ತವೆ. ಬಂಡವಾಳಶಾಹಿ ಅಭಿವೃದ್ಧಿ ಪಥದಲ್ಲಿ ಹೆಚ್ಚು ಹೆಚ್ಚಾಗಿ ಅಂಚಿಗೆ ತಳ್ಳಲ್ಪಡುವ ಈ ಶ್ರಮಜೀವಿ ವರ್ಗಗಳ ಆರ್ಥಿಕ ಸುಸ್ಥಿರತೆಗೆ ಈ ಭೂಮಿಯ ಒಡೆತನ ಅಥವಾ ಪಾಲುದಾರಿಕೆಯೇ ಮುಖ್ಯವಾಗುತ್ತದೆ. ಹಾಗೆಯೇ ತಮ್ಮ ಪಾರಂಪರಿಕ ಕಸುಬುಗಳ ಆಧುನೀಕರಣದೊಂದಿಗೇ ಮಾರುಕಟ್ಟೆ ಆರ್ಥಿಕತೆಯೊಡನೆ ಮುಖಾಮುಖಿಯಾಗುವ ಸಂದರ್ಭದಲ್ಲಿ ಈ ಸಮುದಾಯಗಳಿಗೆ ಸಾಮಾಜಿಕ ಭದ್ರತೆ, ಆರ್ಥಿಕ ಸಮಾನತೆ ಮತ್ತು ರಾಜಕೀಯ ಅವಕಾಶಗಳು ಅವಶ್ಯವಾಗುತ್ತವೆ. ಶೋಷಿತ ತಳಸಮುದಾಯಗಳ ಆರ್ಥಿಕ ಸುಸ್ಥಿರತೆ, ಸಾಮಾಜಿಕ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತದ ಸಂವಿಧಾನ ಎಷ್ಟೇ ಮಾರ್ಗಗಳನ್ನು ಕಲ್ಪಿಸಿದ್ದರೂ, ಅಧಿಕಾರ ರಾಜಕಾರಣದಲ್ಲಿ ಕಾಣಬಹುದಾದ ಸಮಾಜದ ಮೇಲ್ಪದರದ ಸಾಮುದಾಯಿಕ ಅಸ್ಮಿತೆಗಳು ಈ ಮಾರ್ಗಗಳನ್ನು ಅಲ್ಲಲ್ಲಿ ಭಂಗಗೊಳಿಸುವ ಸಾಧನಗಳಾಗಿ ಪರಿಣಮಿಸುತ್ತವೆ. ಸಂವಿಧಾನ ನೀಡಿರುವ ಮೀಸಲಾತಿ ಮತ್ತಿತರ ಸಾಂವಿಧಾನಿಕ ಸವಲತ್ತುಗಳು ಈ ಶೋಷಿತರಲ್ಲಿ ಶೋಷಿತರಾಗಿರುವವರ ಬಾಗಿಲಿಗೆ ತಲುಪಿವೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡದೆ ಹೋದರೆ ಈ ಜಿಜ್ಞಾಸೆಗೆ ಉತ್ತರ ಕಂಡುಕೊಳ್ಳಲಾಗುವುದಿಲ್ಲ.

ಸಾಮಾಜಿಕಾರ್ಥಿಕ ಮೇಲ್‌ಚಲನೆಯೊಂದನ್ನೇ ಮಾನದಂಡವನ್ನಾಗಿ ಪರಿಗಣಿಸಿ, ವಿಮೋಚನೆಯ ಚೌಕಟ್ಟುಗಳನ್ನು ಸಂಕುಚಿತಗೊಳಿಸುವ ನಿಟ್ಟಿನಲ್ಲಿ ಬಹಳಷ್ಟು ಚಳವಳಿಗಳು ಮುನ್ನಡೆಯುತ್ತಿರುವುದರಿಂದಲೇ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತಿತರ ಒಬಿಸಿ ಕೇಂದ್ರಿತ ರಾಜಕೀಯ ಪಕ್ಷಗಳು ಜಾತಿ ವ್ಯವಸ್ಥೆಯ ಕೆಳಪದರಗಳನ್ನು ನಿರ್ಲಕ್ಷಿಸಿಯೂ ತಮ್ಮ ಆಧಿಪತ್ಯ ಸಾಧಿಸಲು ಸಾಧ್ಯವಾಗುತ್ತಿದೆ. ಒಂದು ದೃಷ್ಟಿಯಲ್ಲಿ ಬಹುಜನ ಪಕ್ಷ ಎಂದೇ ಹೇಳಿಕೊಳ್ಳುವ ಬಿಎಸ್ಪಿಸಹ ಇದೇ ಸಮೀಪದೃಷ್ಟಿಯ ದೋಷದಿಂದ ಬಳಲುತ್ತಿದೆ. ಈ ಚೌಕಟ್ಟಿನಿಂದ ಹೊರಬರಬೇಕಾದರೆ ತಳಸಮುದಾಯಗಳು ಮತ್ತು ಶೋಷಿತರಲ್ಲಿ ಶೋಷಿತ ಸಮುದಾಯಗಳು ತಮ್ಮ ವರ್ಗ ನೆಲೆಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಸಾಮಾಜಿಕವಾಗಿ ಮೇಲ್‌ಚಲನೆ ಪಡೆದಿರುವ ಮತ್ತು ಆರ್ಥಿಕವಾಗಿ ಮುಂಚಲನೆ ಪಡೆದಿರುವ ಶೋಷಿತ ಸಮುದಾಯಗಳಲ್ಲಿ ಈ ತಳಮಟ್ಟದ ವರ್ಗ ನೆಲೆಗಳ ಬಗ್ಗೆ ಸ್ಪಷ್ಟ ತಿಳುವಳಿಕೆ ಇಲ್ಲದಿರುವುದರಿಂದಲೇ ಶೋಷಣೆಯ ಹೊಸ ಆಯಾಮಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲ.

ಶೂದ್ರ ಸಮುದಾಯಗಳಿಂದಲೇ ಹೆಚ್ಚಿನ ಜಾತಿ ದೌರ್ಜನ್ಯ, ಶೋಷಣೆ ಮತ್ತು ಅಪಮಾನದ ಪ್ರಯತ್ನಗಳು ನಡೆಯುತ್ತಿರುವುದನ್ನು ನಿಷ್ಕರ್ಷೆಗೊಳಪಡಿಸುವ ಮುನ್ನ, ಈ ಸಮುದಾಯಗಳ ವರ್ಗ ಹಿನ್ನೆಲೆಯನ್ನೂ ನಾವು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಮೇಲ್ನೋಟಕ್ಕೆ ಕಂಡುಬರುವ ಸಾಮುದಾಯಿಕ ಮೇಲ್‌ಚಲನೆಯನ್ನು ಛೇದಿಸಿ ಒಳಹೊಕ್ಕು ನೋಡಿದಾಗ, ಶೂದ್ರ ಸಮುದಾಯಗಳಲ್ಲೇ ಇಂದಿಗೂ ತೀವ್ರ ಶೋಷಣೆ ಎದುರಿಸುತ್ತಿರುವ ಒಂದು ವರ್ಗವನ್ನೂ ಕಾಣಬಹುದಾಗಿದೆ. ಈ ವರ್ಗವನ್ನು ಗುರುತಿಸುವುದೇ ನಮ್ಮ ಮುಂದಿನ ಬೃಹತ್ ಸವಾಲಾಗಿದೆ. ಉಡುಪಿಯಲ್ಲಿ ಕೊರಗ ಸಮುದಾಯದ ಮೇಲೆ ನಡೆದಿರುವ ದೌರ್ಜನ್ಯದ ವಿರುದ್ಧ ಎದ್ದಿರುವ ಪ್ರತಿರೋಧದ ಕೂಗು ಏಕಿಷ್ಟು ಕ್ಷೀಣವಾಗಿದೆ? ಈ ಪ್ರಶ್ನೆಗೆ ಉತ್ತರ ಶೋಧಿಸುತ್ತಾ ಹೋದಂತೆಲ್ಲಾ ನಮ್ಮಾಳಗಿನ ಜಿಜ್ಞಾಸೆಗಳೂ ತೆರೆದುಕೊಳ್ಳುತ್ತಾ ಹೋಗುತ್ತವೆ. ಇದು ಕೇವಲ ಸಾಮುದಾಯಿಕ ಪ್ರಜ್ಞೆ ಅಥವಾ ಸಾಮಾಜಿಕ ಸುಪ್ರಜ್ಞೆಯ ಪ್ರಶ್ನೆಯಾಗಿ ಕಾಣುವುದಿಲ್ಲ. ಕಂಬಾಲಪಲ್ಲಿ, ಖೈರ್ಲಾಂಜಿ, ಕರಂಚೇಡು, ಉನ ಮುಂತಾದ ಘಟನೆಗಳ ಸಂದರ್ಭದಲ್ಲಿ ವ್ಯಕ್ತವಾದ ಆಕ್ರೋಶದ ದನಿಗಳು ಇಂದೇಕೆ ಕ್ಷೀಣಿಸಿವೆ ಎನ್ನುವುದೂ ಈ ಜಿಜ್ಞಾಸೆಗಳ ಒಂದು ಭಾಗ. ಅಧಿಕಾರ ರಾಜಕಾರಣದ ಫಲಾನುಭವಿಗಳಾಗಿರುವ ಇದೇ ಶೋಷಿತ ಸಮುದಾಯದ ಪ್ರತಿನಿಧಿಗಳಿಗೆ ಇದೊಂದು ಕಾನೂನಾತ್ಮಕ ಸಮಸ್ಯೆಯಾಗಿ ಮಾತ್ರ ಕಾಣಲು ಸಾಧ್ಯ. ಅಥವಾ ಸಾಂವಿಧಾನಿಕವಾಗಿ ಮೇಲ್ ಚಲನೆ ಪಡೆದು ಹಿತವಲಯದಲ್ಲಿರುವ ಶೋಷಿತ ಸಮುದಾಯಗಳ ಪ್ರತಿನಿಧಿಗಳಿಗೂ ಇದು ಶೋಷಣೆಯ ಇತಿಹಾಸದ ಮತ್ತೊಂದು ಪುಟ ಎಂದಷ್ಟೇ ಕಾಣಲು ಸಾಧ್ಯ.

ಇಂದಿನ ಸಂದರ್ಭದಲ್ಲಿ ನಾವು ಈ ಸಮೀಪದೃಷ್ಟಿಯ ದೋಷವನ್ನು ನಿವಾರಿಸಿಕೊಂಡು ಒಳನೋಟಗಳನ್ನು ಕಂಡುಕೊಳ್ಳಬೇಕಿದೆ. ನಮ್ಮ ಪ್ರತಿರೋಧದ ನೆಲೆಗಳು ಶೋಷಣೆಯ ವಿರುದ್ಧವೇ ಎನ್ನುವುದಾದರೆ ಶೋಷಣೆಯ ವಿಭಿನ್ನ ಆಯಾಮಗಳಲ್ಲಿ ಎದುರಾಗಬಹುದಾದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ವೈರುಧ್ಯಗಳನ್ನು ಅರ್ಥಮಾಡಿಕೊಳ್ಳುವುದೂ ಮುಖ್ಯ ಅಲ್ಲವೇ? ನಿಜ, ಕೊರಗ ಸಮುದಾಯ ಜನಸಂಖ್ಯೆಯ ದೃಷ್ಟಿಯಲ್ಲಿ ನಗಣ್ಯ. ಇಂತಹ ನೂರಾರು ಸಮುದಾಯಗಳು ನಮ್ಮ ನಡುವೆ ಇವೆ. ತಮ್ಮ ಜೀವನೋಪಾಯಕ್ಕಾಗಿ ಸರಕಾರ ಮತ್ತು ಸಾಂವಿಧಾನಿಕ ಸವಲತ್ತುಗಳನ್ನೇ ಅವಲಂಬಿಸುವ ಇಂತಹ ಅನೇಕ ಸಮುದಾಯಗಳಲ್ಲಿ ಪ್ರತಿರೋಧದ ನೆಲೆಗಳನ್ನು ಅರಸುವುದಕ್ಕಿಂತಲೂ, ಈ ಶೋಷಿತರ ಸಾಮಾಜಿಕಾರ್ಥಿಕ ನೆಲೆಗಳಿಂದ ಹೊರತಾಗಿ, ಪರಾನುಭೂತಿಯನ್ನು ತೋರುವ ಮೂಲಕ, ಆಳುವ ವ್ಯವಸ್ಥೆಯ ಶೋಷಣೆ ಮತ್ತು ದಬ್ಬಾಳಿಕೆಯ ಮೂಲಗಳನ್ನು ಶೋಧಿಸುವುದು ಇಂದಿನ ಅಗತ್ಯತೆಯಾಗಿದೆ.

ಈ ಪರಾನುಭೂತಿಗೆ ಸಾಮುದಾಯಿಕ ಐಕ್ಯತೆಗಿಂತಲೂ ಮುಖ್ಯವಾಗಿ ಬೇಕಾಗುವುದು ಸಾಮಾಜಿಕ ಐಕಮತ್ಯ. ತಮ್ಮ ಮೇಲಿನ ಶೋಷಣೆಗೆ ಮತ್ತು ದೌರ್ಜನ್ಯಗಳಿಗೆ ಸಮಾಜದಲ್ಲಿ ಅಂತರ್ಗತವಾಗಿರುವ ಜಾತಿ ಶ್ರೇಷ್ಠತೆಯ ಮನಸ್ಥಿತಿಯೊಂದಿಗೇ ಆರ್ಥಿಕ ಸ್ಥಿತ್ಯಂತರಗಳೂ ಅಷ್ಟೇ ಪ್ರಮಾಣದಲ್ಲಿ ಕಾರಣವಾಗಿರುತ್ತದೆ ಎಂಬ ವಾಸ್ತವದ ಬಗ್ಗೆ ಜನಸಮುದಾಯಗಳಲ್ಲಿ ಅರಿವು ಮೂಡಿಸಲು ಈ ಪರಾನುಭೂತಿಯುಕ್ತ ಐಕಮತ್ಯ ನೆರವಾಗುತ್ತದೆ. ಎಡಪಕ್ಷಗಳು ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲತೆಯಿಂದ ಮುನ್ನಡೆಯುವ ಅವಶ್ಯಕತೆಯೂ ಇದೆ. ಹಾಗೆಯೇ ದಲಿತ ಚಳವಳಿಯಲ್ಲೂ ಈ ಜಾಗೃತಿ ಮೂಡುವ ಅನಿವಾರ್ಯ ಎದುರಾಗಿದೆ. ಇದು ಕೇವಲ ಉಡುಪಿಯ ಒಂದು ಘಟನೆಯ ಪ್ರಶ್ನೆಯಲ್ಲ ಅಥವಾ ಒಂದು ಕೊರಗ ಅಥವಾ ಮತ್ತಾವುದೇ ಸಮುದಾಯದ ಸಮಸ್ಯೆಯಲ್ಲ. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ನಿರಂತರವಾಗಿ ಶೋಷಣೆ ಮತ್ತು ಮೂಲೋತ್ಪಾಟನೆಯ ಸಮಸ್ಯೆಗಳನ್ನು ಎದುರಿಸುತ್ತಿರುವ ಆದಿವಾಸಿ ಸಮುದಾಯಗಳ ಕಡೆಗೂ ನಾವು ಗಮನಹರಿಸಬೇಕಾಗುತ್ತದೆ. ಶೋಷಣೆ ಮತ್ತು ದೌರ್ಜನ್ಯಗಳ ಆಯಾಮಗಳು ಬದಲಾಗುತ್ತಾ ಹೋದಂತೆಲ್ಲಾ, ಈ ಶೋಷಣೆಯ ಮೂಲಗಳನ್ನು ಛೇದಿಸುತ್ತಾ ಹೋಗ ಬೇಕಾಗುತ್ತದೆ. ಹಾಗಾದಲ್ಲಿ ಮಾತ್ರ ಸಾಮಾಜಿಕಾರ್ಥಿಕ ಮುಂಚಲನೆ ಪಡೆದ ಸಮುದಾಯಗಳ ನಡುವೆಯೂ ಶೋಷಕ ವರ್ಗಗಳು ಸೃಷ್ಟಿಯಾಗು ತ್ತಿರುವುದನ್ನು ಗುರುತಿಸಲು ಸಾಧ್ಯ. ತಳಸಮುದಾಯಗಳಲ್ಲಿರುವ ಶೋಷಿತರಲ್ಲಿ ಶೋಷಿತರ ಪ್ರತಿರೋಧದ ದನಿಗೆ ಒಂದು ಸಾಮಾಜಿಕ ಚೌಕಟ್ಟು ಮತ್ತು ರಾಜಕೀಯ ದನಿಯನ್ನು ನೀಡುವ ನಿಟ್ಟಿನಲ್ಲಿ ಸಂವೇದನಾಶೀಲ ಮನಸ್ಸುಗಳು ಐಕಮತ್ಯ ಪ್ರದರ್ಶಿಸಬೇಕಿದೆ. ಅಂಬೇಡ್ಕರ್ ಮತ್ತು ಮಾರ್ಕ್ಸ್ ಈ ನಿಟ್ಟಿನಲ್ಲಿ ದಾರಿ ದೀವಿಗೆಯಾಗಬಹುದೇ? ಯೋಚಿಸೋಣ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News