ಚಿಕ್ಕಮಗಳೂರು: 22 ವರ್ಷಗಳ ಬಳಿಕ ಒಂದಾದ ತಾಯಿ-ಮಗಳು

Update: 2022-01-04 18:51 GMT

ಚಿಕ್ಕಮಗಳೂರು, ಜ.4: ಬಾಲ್ಯದಲ್ಲಿಯೇ ಹೆತ್ತವರನ್ನು ತೊರೆದು ನೆರೆ ರಾಜ್ಯ ಕೇರಳ ಸೇರಿಕೊಂಡಿದ್ದ ಮಹಿಳೆಯೊಬ್ಬರು 22 ವರ್ಷಗಳ ಬಳಿಕ ತನ್ನ ತಾಯಿಯ ಮಡಿಲು ಸೇರಿರುವ ಅಪರೂಪದ ಘಟನೆಯೊಂದು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ವರದಿಯಾಗಿದೆ. 

ಸದ್ಯ ಕೇರಳದ ಕ್ಯಾಲಿಕಟ್‍ನಿಂದ 30 ಕಿಮೀ ದೂರದಲ್ಲಿರುವ ನೆಲ್ಲಮಣಿ ಗ್ರಾಮದಲ್ಲಿ ವಾಸವಿದ್ದು, ಅಲ್ಲಿನ ನಿವಾಸಿ ಸಾಜಿ ಎಂಬವರನ್ನು ವಿವಾಹವಾಗಿರುವ ಅಂಜಲಿ ಹಾಗೂ ಮೂಡಿಗೆರೆ ತಾಲೂಕಿನ ಲೋಕವಳ್ಳಿ ಗ್ರಾಮ ಎಸ್ಟೇಟ್‍ವೊಂದರ ಲೈನ್‍ಮನೆಯಲ್ಲಿ ವಾಸವಿರುವ ವೃದ್ಧೆ ಚೈತ್ರಾ ಎಂಬವರೇ 22 ವರ್ಷಗಳ ಬಳಿಕ ಒಂದಾದ ತಾಯಿ ಮಗಳಾಗಿದ್ದಾರೆ. ಈ ತಾಯಿ ಮಗಳನ್ನು ಮೂಡಿಗೆರೆ ಪಟ್ಟಣದ ಸಾಮಾಜಿಕ ಸಕ್ರೀಯ ಸೇವಾ ಸಂಸ್ಥೆಯ ಸಮಾಜ ಸೇವಕರ ತಂಡದ ಸದಸ್ಯರು ಒಂದು ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಮೂಲತಃ ತಮಿಳುನಾಡು ಮೂಲದವರಾದ ಚೈತ್ರಾ ಹಾಗೂ ಕಾಳಿಮುತ್ತು ದಂಪತಿ ಕಳೆದ 22 ವರ್ಷಗಳ ಹಿಂದೆ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದ ಎಸ್ಟೇಟ್ ಒಂದರಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮೂಡಿಗೆರೆ ಸಮೀಪದ ಮುದ್ರೆಮನೆ ಎಂಬಲ್ಲಿ ಆನೆ ಮಾವುತರಾಗಿದ್ದ ಕೇರಳ ಮೂಲದ ವೃದ್ಧ ಹಾಗೂ ಆತನೊಂದಿಗಿದ್ದ ಬಾಲಕನೊಂದಿಗೆ ಚೈತ್ರಾ, ಕಾಳಿಮುತ್ತು ದಂಪತಿಯ 5ನೇ ಮಗಳಾದ ಅಂಜಲಿ ಮನೆಯವರ ಬಳಿ ಹೇಳದೆ ತೆರಳಿದ್ದಳು. ಮಗಳು ನಾಪತ್ತೆಯಾದ ಬಳಿಕ ಕೆಲ ದಿನಗಳ ಕಾಲ ಚೈತ್ರಾ ಹಾಗೂ ಕಾಳಿಮುತ್ತ ಹುಡುಕಾಟ ನಡೆಸಿ ಮಗಳ ಬಗ್ಗೆ ಸುಳಿವು ಸಿಗದಿದ್ದಾಗ ಪೊಲೀಸರಿಗೂ ದೂರು ನೀಡದೇ ಸುಮ್ಮನಾಗಿದ್ದರು ಎಂದು ತಿಳಿದು ಬಂದಿದೆ.

ಅಂದು ಆನೆ ಮಾವುತ ಹಾಗೂ ಬಾಲಕನೊಂದಿಗೆ ಕೇರಳಕ್ಕೆ ತೆರಳಿದ್ದ ಬಾಲಕಿ ವೃದ್ಧನ ಮನೆಯಲ್ಲೇ ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಬಳಿಕ ಕ್ಯಾಲಿಕಟ್ ಸಮೀಪದ ನೆಲ್ಲಮಣಿ ಎಂಬ ಊರಿನ ಸಾಜಿ ಎಂಬವರನ್ನು ಅಂಜಲಿ ವಿವಾಹವಾಗಿದ್ದು, ಅಂಜಲಿ ಹಾಗೂ ಸಾಜಿ ದಂಪತಿ ನೆಲ್ಲಮಣಿಯಲ್ಲಿ ಮೂರು ಮಕ್ಕಳೊಂದಿಗೆ ನೆಮ್ಮದಿಯ ಸಂಸಾರ ನಡೆಸುತ್ತಿದ್ದಾರೆ.

ಇತ್ತೀಚೆಗೆ ಮಂಗಳೂರಿನ ಮುಸ್ತಫಾ ಎಂಬವರು ಕೇರಳಕ್ಕೆ ತೆರಳಿದ್ದ ವೇಳೆ ಅಲ್ಲಿ ಅಂಜಲಿ ಹಾಗೂ ಸಾಜಿ ದಂಪತಿ ಪರಿಚಯವಾಗಿದ್ದು, ಈ ವೇಳೆ ಅಂಜಲಿ ಮೂಡಿಗೆರೆಯಲ್ಲಿ ತನ್ನ ತಾಯಿ ಹಾಗೂ ಸಂಬಂಧಿಕರು ಇರುವುದನ್ನು ತಿಳಿಸಿ ಅವರ ಪತ್ತೆಗೆ ನೆರವಾಗುವಂತೆ ಕೇಳಿಕೊಂಡಿದ್ದರು. ಈ ವಿಷಯವನ್ನು ಮಂಗಳೂರಿನ ಮುಸ್ತಾಫ ಅವರು  ಸಾಮಾಜಿಕ ಸಕ್ರೀಯ ಸೇವಾ ಸಂಸ್ಥೆಯ ಅಧ್ಯಕ್ಷ ಫಿಶ್ ಮೋಣು ಎಂಬವರ ಬಳಿ ಹೇಳಿಕೊಂಡು ಅಂಜಲಿ ತಾಯಿ, ಸಂಬಂಧಿಕರ ಪತ್ತೆಗೆ ನೆರವಾಗುವಂತೆ ಕೇಳಿಕೊಂಡಿದ್ದಾರೆ.  ಫಿಶ್ ಮೋಣು ಈ ವಿಚಾರವನ್ನು ತಮ್ಮ ಸಂಸ್ಥೆಯ ಸದಸ್ಯರ ಬಳಿ ಹಂಚಿಕೊಂಡು ತಾಯಿ ಮಗಳನ್ನು ಒಂದು ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಅದೃಷ್ಟವಶಾತ್ ಸಾಮಾಜಿಕ ಸಕ್ರೀಯ ಸೇವಾ ಸಂಸ್ಥೆಯ ಸದಸ್ಯ ದಾವೂದ್ ಎಂಬವರಿಗೆ ಅಂಜಲಿ ತಾಯಿ ಮೂಡಿಗೆರೆ ಪಟ್ಟಣ ಸಮೀಪದ ಲೋಕವಳ್ಳಿ ಗ್ರಾಮದ ಎಸ್ಟೇಟ್ ಒಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಫಿಶ್‍ಮೋಣು ಹಾಗೂ ದಾವೂದ್ ತಮ್ಮ ತಂಡದ ಇತರ ಸದಸ್ಯರಾದ ಲೋಕವಳ್ಳಿ ರಮೇಶ್, ಯಾಕೂಬ್, ಆಯೂಬ್, ಕಿರುಗುಂದ ಅಬ್ಬಾಸ್‍ರೊಂದಿಗೆ ಲೋಕವಳ್ಳಿ ಗ್ರಾಮದಲ್ಲಿದ್ದ ವೃದ್ಧೆ ಚೈತ್ರಾ ಎಂಬವರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಕೇರಳದಲ್ಲಿ ತನ್ನ ತಾಯಿಗಾಗಿ ಹುಡುಕುತ್ತಿರುವ ಅಂಜಲಿ ತಾಯಿ ಇವರೇ ಎಂಬುದನ್ನು ಖಚಿತ ಪಡಿಸಿಕೊಂಡು ಅಂಜಲಿ ಹಾಗೂ ಸಾಜಿ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ. 

ಸುದ್ದಿ ತಿಳಿದ ಅಂಜಲಿ ಹಾಗೂ ಸಾಜಿ ಕೇರಳದಿಂದ ಸೋಮವಾರ ಮಂಗಳೂರಿಗೆ ಆಗಮಿಸಿ ಮಂಗಳವಾರ ಬೆಳಗ್ಗೆ ಮೂಡಿಗೆರೆ ಆಗಮಿಸಿದ್ದಾರೆ. ಅಲ್ಲಿ ಫಿಶ್ ಮೋಣು ತಂಡದೊಂದಿಗೆ ಲೋಕವಳ್ಳಿಗೆ ತೆರಳಿದ್ದಾರೆ. ಅಲ್ಲಿನ ಎಸ್ಟೇಟ್ ಒಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ತನ್ನ ತಾಯಿಯನ್ನು ಅಂಜಲಿ 22 ವರ್ಷಗಳ ಬಳಿಕ ಭೇಟಿ ಮಾಡಿದ್ದು, ಈ ವೇಳೆ ತಾಯಿ ಮಗಳು ಪರಸ್ಪರ ಅಪ್ಪಿಕೊಂಡು ಭಾವುಕರಾದ ಕ್ಷಣ ಮನಕಲುಕುವಂತಿತ್ತು. ಈ ವೇಳೆ ಅಂಜಲಿ ಪತಿ ಸಾಜಿ ಅವರ ಕಣ್ಣಾವಲಿಗಳಲ್ಲಿ ನೀರು ತುಂಬಿಕೊಂಡಿತ್ತು. ತಾಯಿ ಮಗಳು 22 ವರ್ಷಗಳ ಬಳಿಕ ಭೇಟಿಯಾದ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 22 ವರ್ಷಗಳ ಬಳಿಕ ತಾಯಿ ಮಗಳನ್ನು ಒಂದು ಮಾಡಿದ ಸಂತಸದೊಂದಿಗೆ ಮೂಡಿಗೆರೆಯ ಸಾಮಾಜಿಕ ಸಕ್ರೀಯ ಸೇವಾ ಸಂಸ್ಥೆಯ ಸದಸ್ಯರ ಮುಖದಲ್ಲಿ ಮಂದಹಾಸ ಮೂಡಿತ್ತು.

ಚೈತ್ರಾ ಕಾಳಿಮುತ್ತ ದಂಪತಿ ಮಗಳಾದ ಅಂಜಲಿ ಮನೆ ಬಿಟ್ಟು ತೆರಳಿದ್ದ ಸಂದರ್ಭ ಆಕೆಗೆ ಕೇವಲ 9 ವರ್ಷವಾಗಿದ್ದು, ಬಾಲ್ಯದಿಂದಲೇ ಕೇರಳದಲ್ಲೇ ಇದ್ದ ಪರಿಣಾಮ ಆಕೆಗೆ ಸದ್ಯ ಕನ್ನಡ ಭಾಷೆಯನ್ನೇ ಮರೆತಿದ್ದಾರೆ. ಮಲೆಯಾಳದಲ್ಲೇ ಮಾತನಾಡಿದ ಅಂಜಲಿ ತಾಯಿಯನ್ನು ಬಿಟ್ಟಿರಲು ತನ್ನಿಂದ ಸಾಧ್ಯವಿಲ್ಲ. ಎರಡು ತಿಂಗಳ ಬಳಿಕ ತಾಯಿಯನ್ನು ಕೇರಳಕ್ಕೆ ಕರೆದೊಯ್ಯುವುದಾಗಿ ಭಾವುರಾಗಿ ಹೇಳಿದ್ದಾರೆ.

ನನ್ನ ಗಂಡ ನಿಧನರಾಗಿ 4 ವರ್ಷವಾಗಿದೆ. ನಮಗೆ 11 ಮಕ್ಕಳು, ಒಬ್ಬ ಗಂಡು ಮಗ ತೀರಿಕೊಂಡಿದ್ದಾನೆ. 10 ಮಕ್ಕಳ ಪೈಕಿ ಅಂಜಲಿ 5ನೇ ಮಗಳು. ಅವಳು 9ನೇ ವರ್ಷದವಳಿದ್ದಾಗ ಮನೆಯಿಂದ ಹೋದವಳು ಮತ್ತೆ ಮನೆಗೆ ಹಿಂದಿರುಗಿಲ್ಲ. ಆಕೆ ಬದುಕಿದ್ದಾಳೆ ಎಂಬ ಬಗ್ಗೆಯೇ ಸಂಶಯ ಇತ್ತು. ಆದರೆ ಮೂಡಿಗೆರೆಯ ಸಹೃದಯಿಗಳಿಂದಾಗಿ ನನ್ನ ಮಗಳು ನನಗೆ ಸಿಕ್ಕಿದ್ದಾಳೆ. ಅವರ ಈ ಉಪಕಾರವನ್ನು ನಾನೆಂದೂ ಮರೆಯಲಾರೆ. ಅಂಜಲಿ ಮನೆಯಿಂದ ನಾಪತ್ತೆಯಾದಾಗ ನನ್ನ ಕೊನೆಯ ಮಗಳಿನ್ನೂ ಚಿಕ್ಕ ಮಗುವಾಗಿದ್ದಳು. ಈಗ ಅವಳಿಗೆ ಮದುವೆಯಾಗಿದ್ದು, ಅವಳು ಅಕ್ಕ ಅಂಜಲಿಯನ್ನು ಗುರುತು ಹಿಡಿಯಲು ಸಾಧ್ಯವಾಗುತ್ತಿಲ್ಲ. ಎಲ್ಲ ಮಕ್ಕಳಿಗೂ ಮದುವೆಯಾಗಿದ್ದು, ಕೂಲಿ ಮಾಡಿ ಜೀವನ ನಡೆಸುತ್ತಿದ್ದೇನೆ. ಮತ್ತೆಂದೂ ನೋಡಲ್ಲ ಎಂದು ಕೊಂಡಿದ್ದ ಮಗಳು ಕಣ್ಣೆದುರು ಬಂದಾಗ ಕನಸು ಕಾಣುತ್ತಿದ್ದೇನೆ ಎಂದು ಅನಿಸಿತು. 

- ಚೈತ್ರಾ, ಅಂಜಲಿ ತಾಯಿ

ಮಂಗಳೂರಿನಲ್ಲಿರುವ ಮುಸ್ತಫಾ ಎಂಬವರಿಂದಾಗಿ ಕೇರಳದಲ್ಲಿರುವ ಅಂಜಲಿ ತನ್ನ ತಾಯಿಗಾಗಿ ಹುಡುಕುತ್ತಿರುವ ಸುದ್ದಿ ತಿಳಿಯಿತು. ಅವರು ಮೂಡಿಗೆರೆಯವರಾಗಿದ್ದರಿಂದ ಹುಡುಕಲು ಸಾಧ್ಯವಾಯಿತು. ತಾಯಿ ಮಗಳನ್ನು ಒಂದು ಮಾಡಿದ ಸಾರ್ಥಕತೆ ನಮಗೆ ಸಂತಸ ತಂದಿದೆ.

- ಫಿಶ್ ಮೋಣು, ಸಾಮಾಜಿಕ ಸಕ್ರೀಯ ಸಂಸ್ಥೆಯ ಅಧ್ಯಕ್ಷ, ಮೂಡಿಗೆರೆ
 

 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News