ಪಂಜಾಬ್: ವೈದ್ಯಕೀಯ ಕಾಲೇಜಿನ 80 ವೈದ್ಯರು, ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು

Update: 2022-01-04 19:05 GMT

ಚಂಡಿಗಢ: ಪಂಜಾಬ್ ನ ಪಾಟಿಯಾಲದ ಸರಕಾರಿ ರಾಜಿಂದರ್ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರು, ವಿದ್ಯಾರ್ಥಿಗಳು, ಪೂರಕ ಸಿಬ್ಬಂದಿ ಸೇರಿದಂತೆ ಒಟ್ಟು 80 ಮಂದಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪಂಜಾಬ್ ನ ಪಾಟಿಯಾಲ ಕೋವಿಡ್ ಸೋಂಕಿನಿಂದ ಅತಿಯಾಗಿ ಬಾಧಿತ ಜಿಲ್ಲೆಯಾಗಿದೆ. ಪಂಜಾಬ್ ನಲ್ಲಿ ಒಟ್ಟು 419 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಶೇ. 34 ಅಂದರೆ 143 ಪ್ರಕರಣಗಳು ಪಾಟಿಯಾಲ ಜಿಲ್ಲೆ ಒಂದರಿಂದಲೇ ವರದಿಯಾಗಿದೆ. ಇದರೊಂದಿಗೆ ಇಲ್ಲಿ ಸೋಮವಾರ 23.95 ಪಾಸಿಟಿವಿಟಿ ದರ ದಾಖಲಾಗಿದೆ.

ಸರಕಾರಿ ರಾಜಿಂದರ್ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನಲ್ಲಿ 22 ನಿವಾಸಿ ವೈದ್ಯರು, 34 ವೈದ್ಯಕೀಯ ವಿದ್ಯಾರ್ಥಿಗಳು, 9 ಬೋಧನಾ ಸಿಬ್ಬಂದಿ ಹಾಗೂ 15 ಪೂರಕ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಜಿಲ್ಲಾ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಡಾ. ಸುಮೀತ್ ಸಿಂಗ್ ಮಂಗಳವಾರ ಹೇಳಿದರು.
 
ಕೋವಿಡ್ ಪರೀಕ್ಷೆಗೆ ಮಾದರಿಯನ್ನು ನೀಡಿದ ಬಳಿಕ ಹಾಸ್ಟೆಲ್ ನಲ್ಲಿರುವ ಸುಮಾರು 1,000 ವೈದ್ಯಕೀಯ ವಿದ್ಯಾರ್ಥಿಗಳನ್ನು ತೆರವುಗೊಳಿಸಲು ನಿರ್ದೇಶನ ನೀಡಲಾಗಿದೆ. ವರದಿಯಲ್ಲಿ ಕೊರೋನ ಸೋಂಕು ದೃಢಪಟ್ಟ ವಿದ್ಯಾರ್ಥಿಗಳನ್ನು ಐಸೋಲೇಶನ್ಗೆ ಒಳಪಡಿಸಲು ಸೂಚಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪಾಟಿಯಾಲದ ಥಾಪರ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ 93 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿತ್ತು. ಕಳೆದ ಕೆಲವು ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುವುದಕ್ಕೆ ಪಂಜಾಬ್ ಸಾಕ್ಷಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News