ಮುಂದಿನ 4-6 ವಾರ ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು: ಆರೋಗ್ಯ ಸಚಿವ ಡಾ. ಸುಧಾಕರ್

Update: 2022-01-05 12:46 GMT
ಆರೋಗ್ಯ ಸಚಿವ ಡಾ. ಸುಧಾಕರ್

ಬೆಂಗಳೂರು, ಜ.5: ಕೋವಿಡ್ ಮೂರನೆ ಅಲೆಯು ಮೊದಲ ಹಾಗೂ ಎರಡನೆ ಅಲೆ ರೀತಿ ದೀರ್ಘ ಕಾಲ ಇರುವುದಿಲ್ಲ. ಆದರೆ, ಬಹಳ ವೇಗವಾಗಿ ಹರಡುತ್ತದೆ, ಅದೇ ರೀತಿ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಬುಧವಾರ ಸದಾಶಿವ ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ದೇಶಗಳಲ್ಲಿನ ಪರಿಸ್ಥಿತಿಯನ್ನು ಗಮನಿಸಿದರೆ ನಾವು ಮುಂದಿನ 4-6 ವಾರಗಳ ಕಾಲ ಬಹಳ ಎಚ್ಚರಿಕೆಯಿಂದ ನಡೆದುಕೊಂಡರೆ, ಈ ಮೂರನೆ ಅಲೆಯನ್ನು ನಿಯಂತ್ರಣಕ್ಕೆ ತರಬಹುದು ಎಂದರು. 

ಒಮೈಕ್ರಾನ್ ಸೋಂಕು ತಗಲುತ್ತಿದ್ದಂತೆ ಯಾರು ಆತಂಕಕ್ಕೆ ಒಳಗಾಗಿ ತಕ್ಷಣ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆಯಿಲ್ಲ. ಈ ಒಮೈಕ್ರಾನ್ ವೈರಾಣುವಿನ ಸ್ವಭಾವವು ಮೂಗಿನಿಂದ ಗಂಟಲಿಗೆ ಹೋಗುತ್ತದೆ, ಆದರೆ, ಶ್ವಾಸಕೋಶಕ್ಕೆ ಹೋಗುವುದು ತೀರಾ ಕಡಿಮೆ. ಆದುದರಿಂದ, ಆಕ್ಸಿಜನ್, ವೆಂಟಿಲೇಟರ್, ಐಸಿಯು ದಾಖಲಾತಿಯ ಪ್ರಕರಣ ತೀರಾ ಕಡಿಮೆ ಎಂದು ಸುಧಾಕರ್ ಹೇಳಿದರು.

ಆದರೆ, ಕೋವಿಡ್‌ನ ಎರಡು ಡೋಸ್ ಲಸಿಕೆ ಯಾರು ಪಡೆದಿಲ್ಲವೋ ಅವರ ಮೇಲೆ ಇದರ ಪ್ರಭಾವ ಹೆಚ್ಚಿರುತ್ತದೆ. ರಾಜ್ಯದ ಜನರಲ್ಲಿ ಕೈ ಮುಗಿದು ಮನವಿ ಮಾಡುತ್ತೇನೆ. ದಯವಿಟ್ಟು ಎರಡು ಡೋಸ್ ಲಸಿಕೆ ಪಡೆದುಕೊಳ್ಳಿ. ಜ.10ರಿಂದ 60 ವರ್ಷ ಮೇಲ್ಟಟ್ಟ ಇತರೆ ರೋಗಗಳನ್ನು ಹೊಂದಿರುವವರಿಗೆ ಬೂಸ್ಟರ್ ಡೋಸ್ ನೀಡಲಾಗುವುದು. ಅದನ್ನು ಕಡ್ಡಾಯವಾಗಿ ಎಲ್ಲರೂ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಜೊತೆಗೆ, ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರು, ದಾದಿಯರು, ಎಲ್ಲ ನೌಕರರಿಗೆ ಹಾಗೂ ಫ್ರಂಟ್ ಲೈನ್ ವಾರಿಯರ್ಸ್ ಎಂದು ಗುರುತಿಸಲ್ಪಟ್ಟವರಿಗೂ ಬೂಸ್ಟರ್ ಡೋಸ್ ನೀಡಲಾಗುವುದು. ರಾಜ್ಯದಲ್ಲಿ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಪ್ರಕ್ರಿಯೆ ಭರದಿಂದ ಸಾಗಿದೆ. ನಿನ್ನೆ ಒಂದೇ ದಿನ 3.50 ಲಕ್ಷ ಮಕ್ಕಳಿಗೆ ಲಸಿಕೆ ನೀಡಿದ್ದು, ಲಸಿಕಾಕರಣದಲ್ಲಿ ದೇಶದಲ್ಲಿ ಮೂರನೆ ಸ್ಥಾನದಲ್ಲಿದ್ದೇವೆ ಎಂದು ಸುಧಾಕರ್ ತಿಳಿಸಿದರು.

15-18 ವರ್ಷದೊಳಗಿನ ಶೇ.25ರಷ್ಟು ಮಕ್ಕಳಿಗೆ ಈಗಾಗಲೆ ಮೊದಲ ಡೋಸ್ ನೀಡಿದ್ದೇವೆ. 10-15 ದಿನಗಳಲ್ಲಿ ಈ ವಯೋಮಿತಿಯ ಎಲ್ಲ ಮಕ್ಕಳಿಗೆ ಲಸಿಕೆ ನೀಡುವ ಹಾದಿಯಲ್ಲಿ ಸಾಗುತ್ತಿದ್ದೇವೆ. ಮೊದಲ ಡೋಸ್ ಪಡೆದ 28 ದಿನಗಳ ನಂತರ ಎರಡನೆ ಡೋಸ್ ಕೋವ್ಯಾಕ್ಸಿನ್ ನೀಡಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕೋವಿಡ್ ಹಾಗೂ ಒಮೈಕ್ರಾನ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ನಿನ್ನೆ ಸಿಎಂ ಅಧ್ಯಕ್ಷತೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡಿ ವಿವರವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಲಸಿಕಾಕರಣ ತ್ವರಿತಗತಿಯಲ್ಲಿ ಮಾಡುತ್ತಿರುವುದರಿಂದ ಕೋವಿಡ್ ನಿಯಂತ್ರಣ ಸಾಧ್ಯವಾಗುತ್ತಿದೆ. ಇದಕ್ಕೆ ಜನರ ಸಹಕಾರ, ಸಂಘ ಸಂಸ್ಥೆಗಳ ಸಹಕಾರ, ರಾಜಕೀಯ ಪಕ್ಷಗಳ ಸಹಕಾರ ಬಹಳ ಅಗತ್ಯ ಎಂದು ಸುಧಾಕರ್ ಪ್ರತಿಪಾದಿಸಿದರು.

ಸರಕಾರ ಒಂದು ಮಾರ್ಗಸೂಚಿ, ಕಾನೂನು ತರುವುದರಿಂದ ಯಾವುದೆ ನಿಯಂತ್ರಣ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ, ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ, ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಎಲ್ಲ ಪಕ್ಷಗಳ ನೇತಾರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸರಕಾರದ ಜೊತೆ ಸಹಕರಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷ ಹಮ್ಮಿಕೊಳ್ಳಲು ಉದ್ದೇಶಿಸಿರುವ ಪಾದಯಾತ್ರೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಅವರೇ ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ನಾವು ಯಾವುದೆ ದುರುದ್ದೇಶದಿಂದ ಮಾರ್ಗಸೂಚಿ, ಕಾನೂನು ಜಾರಿಗೆ ತಂದಿಲ್ಲ. ಕೋವಿಡ್ ಪ್ರಕರಣಗಳು ಹೇಗೆ ವೇಗವಾಗಿ ಹರಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಜನರ ಹಿತ ಕಾಪಾಡುವ ಮನಸ್ಸು ಇದೆ ಎಂದು ತಿಳಿದುಕೊಂಡಿದ್ದೇನೆ. ಅವರ ಮನಸ್ಸು ಪರಿವರ್ತನೆ ಆಗಬಹುದು. ಮಹಾರಾಷ್ಟ್ರದಲ್ಲಿ ಏನಾಗುತ್ತಿದೆ, ಕರ್ನಾಟಕದಲ್ಲಿ ದಿನೇ ದಿನೇ ಯಾವ ರೀತಿ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದನ್ನು ಅವರು ನೋಡಿದ್ದಾರೆ ಎಂದು ಸುಧಾಕರ್ ಹೇಳಿದರು.

ಮುಖ್ಯಮಂತ್ರಿ ಆಗಿದ್ದವರು, ಅನೇಕ ಸಲ ಮಂತ್ರಿಗಳಾಗಿದ್ದವರು ಆ ಪಕ್ಷದ ಪ್ರಮುಖ ಸ್ಥಾನದಲ್ಲಿದ್ದಾರೆ. ದೀರ್ಘಕಾಲಕ್ಕೆ ದೇಶ, ರಾಜ್ಯವನ್ನು ಆಳಿದವರು. ಯಾವುದು ಒಳ್ಳೆಯದು, ಯಾವುದು ಒಳ್ಳೆಯದಲ್ಲ ಎಂಬ ಕನಿಷ್ಠ ತಿಳಿವಳಿಕೆ ಅವರಿಗಿದೆ ಎಂದ ಅವರು, ಕಾನೂನು ಉಲ್ಲಂಘಿಸುವವರ ವಿರುದ್ಧ ಕಾನೂನು ತನ್ನ ಕೆಲಸವನ್ನು ತಾನು ಮಾಡಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News