ಮಕ್ಕಳಿಗೆ ಲಸಿಕೆ: ಮುಗಿಯದ ಗೊಂದಲ

Update: 2022-01-06 05:52 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶದ ಎಲ್ಲ ವಯಸ್ಕರಿಗೆ ಕೋವಿಡ್ ಲಸಿಕೆ ನೀಡುವ ಗುರಿಯನ್ನೇ ಇನ್ನೂ ತಲುಪಲು ಸಾಧ್ಯವಾಗದ ಸರಕಾರ, ಇದೀಗ ಅವಸರವಸರವಾಗಿ 15ರಿಂದ 18ರ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ನೀಡಲು ಮುಂದಾಗಿದೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಕುರಿತಂತೆ ದೇಶದ ಜನತೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾಗೃತರಾಗಿಲ್ಲ ಅಥವಾ, ಕೋವಿಡ್ ಲಸಿಕೆಯ ಬಗ್ಗೆ ಜನರಲ್ಲಿ ಪೂರ್ಣ ಪ್ರಮಾಣದ ವಿಶ್ವಾಸವನ್ನು ಮೂಡಿಸುವಲ್ಲಿ ಸರಕಾರ ಯಶಸ್ವಿಯಾಗಿಲ್ಲ. ಹಲವು ತಜ್ಞರು ಈ ಲಸಿಕೆಯ ಪರಿಣಾಮಗಳ ಬಗ್ಗೆ ತಮ್ಮ ಅನುಮಾನಗಳನ್ನು ಈಗಲೂ ವ್ಯಕ್ತಪಡಿಸುತ್ತಿದ್ದಾರೆ. ಇವುಗಳ ನಡುವೆ, ಲಸಿಕೆಯನ್ನು ಹೇರುವುದರ ವಿರುದ್ಧ ಕೆಲವರು ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದಾರೆ. ಲಸಿಕೆ ಹಲವರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿರುವ ಬಗ್ಗೆ ಆರೋಪಗಳಿವೆ. ಲಸಿಕೆಯನ್ನು ಸ್ವೀಕರಿಸುವಲ್ಲಿ ಈ ದೇಶದ ಶೇ. 60ರಷ್ಟು ವಯಸ್ಕರೇ ಇನ್ನೂ ಮಾನಸಿಕವಾಗಿ ಸಿದ್ಧರಾಗಿಲ್ಲದೇ ಇರುವಾಗ, ಏಕಾಏಕಿ ಮಕ್ಕಳ ಮೇಲೆ ಅದರಲ್ಲೂ ಶಾಲಾ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ‘ಕೋವ್ಯಾಕ್ಸಿನ್ ಲಸಿಕೆ’ಯನ್ನು ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ? ಎನ್ನುವ ಪ್ರಶ್ನೆಯನ್ನು ದೇಶಾದ್ಯಂತ ವಿದ್ಯಾರ್ಥಿಗಳ ಪೋಷಕರು ಕೇಳುತ್ತಿದ್ದಾರೆ.

ಮುಖ್ಯವಾಗಿ ಕೋವ್ಯಾಕ್ಸಿನ್ ಲಸಿಕೆಯನ್ನೇ ಯಾಕೆ ಆಯ್ಕೆ ಮಾಡಲಾಗಿದೆ ಎನ್ನುವ ಪ್ರಶ್ನೆಗೂ ಸರಕಾರ ಉತ್ತರಿಸಬೇಕಾಗಿದೆ. ಕೋವ್ಯಾಕ್ಸಿನ್‌ಗೆ ವಿಶ್ವಸಂಸ್ಥೆಯಿಂದ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಮತಿ ಸಿಕ್ಕಿಲ್ಲ. ಡಬ್ಲೂಎಚ್‌ಒ ಕೋವ್ಯಾಕ್ಸಿನ್‌ಗೆ ಮಾನ್ಯತೆ ನೀಡಲು ಬಹಳಷ್ಟು ತಕರಾರುಗಳನ್ನು ಎತ್ತಿತ್ತು. ದೇಶದ ತೀವ್ರ ಪ್ರತಿಭಟನೆಯ ಬಳಿಕ, ತೀರಾ ತುರ್ತು ಸಂದರ್ಭದಲ್ಲಿ ಬಳಸುವುದಕ್ಕೆ ಅನುಮತಿಯನ್ನು ನೀಡಿತು. ಇನ್ನೂ ಹಲವು ದೇಶಗಳು ಕೋವ್ಯಾಕ್ಸಿನ್‌ಗೆ ಮಾನ್ಯತೆಯನ್ನು ನೀಡಿಲ್ಲ ಎನ್ನುವುದು ಗಮನಾರ್ಹವಾಗಿದೆ. ಡಬ್ಲೂಎಚ್‌ಒನ ಈ ನಿರ್ಧಾರದಿಂದ ಕೋವ್ಯಾಕ್ಸಿನ್‌ಗೆ ತೀವ್ರ ಹಿನ್ನಡೆಯಾಯಿತು. ಹಲವು ರಾಜ್ಯಗಳಲ್ಲಿ ಲಸಿಕೆಗಳ ದಾಸ್ತಾನು ಅವಧಿ ಮೀರತೊಡಗಿದವು. ಅದಕ್ಕಾಗಿ ಅಪಾರ ಹಣವನ್ನು ತೆತ್ತಿರುವ ಸರಕಾರ, ಬೇರೆ ಬೇರೆ ಒತ್ತಡಗಳ ಮೂಲಕ ಲಸಿಕೆಯನ್ನು ಬಲವಂತವಾಗಿ ಜನರ ಮೇಲೆ ಹೇರುವ ಪ್ರಯತ್ನ ನಡೆಸುತ್ತಿದೆ. ಇದೀಗ, ಆತುರಾತುರವಾಗಿ ಮಕ್ಕಳಿಗೆ ಕೋವ್ಯಾಕ್ಸಿನ್ ಕಡ್ಡಾಯ ಎನ್ನುವಂತಹ ಸನ್ನಿವೇಶ ನಿರ್ಮಾಣ ಮಾಡಿದೆ.

ಮಕ್ಕಳಿಗೆ ನೀಡಲಾಗುವ ಲಸಿಕೆಯ ಗೊಂದಲ ಒಂದೆರಡಲ್ಲ. ಸರಕಾರ ‘ಲೇಬಲ್ ಪ್ರಕಾರ ಅವಧಿ ಮೀರಿದ ಲಸಿಕೆಗಳನ್ನು ನೀಡುವಂತಿಲ್ಲ’ ಎಂದು ಇಲಾಖೆಗಳಿಗೆ ಆದೇಶ ನೀಡಿದೆ. ಇನ್ನೊಂದೆಡೆ ಕೋವ್ಯಾಕ್ಸಿನ್ ಲಸಿಕೆಯ ಅವಧಿ ಮೀರುವ ದಿನಾಂಕವನ್ನು ಉತ್ಪಾದನಾ ದಿನಾಂಕದಿಂದ ಒಂಭತ್ತು ತಿಂಗಳ ಬದಲಾಗಿ ಹನ್ನೆರಡು ತಿಂಗಳಿಗೆ ವಿಸ್ತರಿಸಲಾಗಿದೆ ಎಂದು ಸರಕಾರ ಹೇಳಿಕೆ ನೀಡಿದೆ. ಪೋಷಕರು ಇದೀಗ, ಲಸಿಕೆಯ ಅವಧಿಯ ಕುರಿತಂತೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಅವಧಿಯನ್ನು ಹನ್ನೆರಡು ತಿಂಗಳಿಗೆ ವಿಸ್ತರಿಸಲಾಗಿದೆ ಎಂದು ವೈದ್ಯರು ಸ್ಪಷ್ಟೀಕರಣ ನೀಡುತ್ತಿದ್ದರೂ, ಪೋಷಕರು ಅವುಗಳನ್ನು ಒಪ್ಪುತ್ತಿಲ್ಲ. ಇದು ಲಸಿಕೆ ನೀಡುವಿಕೆಗೆ ತೀವ್ರ ಹಿನ್ನಡೆಯನ್ನು ಉಂಟು ಮಾಡಿದೆ. ಜನರು ಕೋವ್ಯಾಕ್ಸಿನ್ ಕುರಿತಂತೆ ಆಸಕ್ತಿ ವಹಿಸದೆ ಇರುವ ಹಿನ್ನೆಲೆಯಲ್ಲಿ, ದೊಡ್ಡ ಪ್ರಮಾಣದ ಲಸಿಕೆಗಳು ಅವಧಿ ಮೀರಿ ವ್ಯರ್ಥವಾಗುತ್ತಿವೆ. ಇದನ್ನು ತಡೆಯಲು ಸರಕಾರ ಅವಧಿಯನ್ನು 12 ತಿಂಗಳಿಗೆ ವಿಸ್ತರಿಸಿದೆ ಎನ್ನುವ ಆರೋಪ ಪೋಷಕರದು. ಇಂತಹ ಅಪಾರದರ್ಶಕ ನಿರ್ಧಾರಗಳು ಲಸಿಕೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕೋವ್ಯಾಕ್ಸಿನ್ ಲಸಿಕೆಗಳು ಪ್ರತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಹೇರಲಾಗುತ್ತಿದೆ. ‘ಹೇಗಾದರೂ ಸರಿ, ಶಾಲೆಗಳು ಬಂದ್ ಆಗದಿರಲಿ’ ಎನ್ನುವುದು ಸಂಸ್ಥೆಯ ಆಡಳಿತ ಮಂಡಳಿ ಮತ್ತು ಪೋಷಕರ ಇಂಗಿತವಾಗಿದೆ. ಎಲ್ಲ ಮಕ್ಕಳು ಲಸಿಕೆಗಳನ್ನು ಹಾಕುವುದರಿಂದ ಅದು ಸಾಧ್ಯವಾಗುವುದಾದರೆ ಲಸಿಕೆ ಹಾಕಿಸಿ ಬಿಡುವ ಎನ್ನುವ ಮನಸ್ಥಿತಿಯನ್ನು ಬಹುತೇಕ ಮಂದಿ ಹೊಂದಿದ್ದಾರೆ. ಕೆಲವು ಶಾಲೆಗಳ ಮುಖ್ಯಸ್ಥರು ‘ಮಕ್ಕಳು ಲಸಿಕೆ ಹಾಕಿಸಿಕೊಳ್ಳಲೇಬೇಕು. ಇಲ್ಲವಾದರೆ ಎಸೆಸೆಲ್ಸಿ ಪರೀಕ್ಷೆ ಕೂರುವುದಕ್ಕೆ ಕಷ್ಟವಾಗಬಹುದು’ ಎಂಬ ಬೆದರಿಕೆಗಳನ್ನು ಒಡ್ಡುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಲಸಿಕೆ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ಒಂದೇ ಕಾರಣಕ್ಕಾಗಿ ಸರಕಾರ, ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಬಗ್ಗೆ ಆಸಕ್ತಿ ವಹಿಸಿದೆಯೇ ಎನ್ನುವ ಅನುಮಾನ ಇದೀಗ ದೇಶದ ಜನರನ್ನು ಕಾಡುತ್ತಿದೆ. ಸರಕಾರದ ಬೇಜವಾಬ್ದಾರಿಗೆ ಎಲ್ಲಿ ನಮ್ಮ ಮಕ್ಕಳು ಬಲಿಯಾಗಬೇಕಾಗುತ್ತವೆಯೋ ಎನ್ನುವ ಚಿಂತೆ ಸಕಲ ಪೋಷಕರದ್ದಾಗಿದೆ.

ಆದುದರಿಂದ ಮಕ್ಕಳಿಗೆ ಕೋವ್ಯಾಕ್ಸಿನ್‌ನ್ನು ಯಾವ ಕಾರಣಕ್ಕೂ ಕಡ್ಡಾಯಗೊಳಿಸಬಾರದು. ಪರೀಕ್ಷೆಗೆ ಕೂರಬೇಕಾದಲ್ಲಿ ಲಸಿಕೆ ಪಡೆಯುವುದು ಅಗತ್ಯ ಎಂಬಿತ್ಯಾದಿ ಒತ್ತಡಗಳ ಮೂಲಕ ಮಕ್ಕಳಿಗೆ ಲಸಿಕೆ ನೀಡಲು ಮುಂದಾದರೆ, ಅದು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರಬಹುದು. ಮೊದಲು ವಯಸ್ಕರಿಗೆ ಲಸಿಕೆ ನೀಡುವ ಗುರಿಯನ್ನು ಸರಕಾರ ತಲುಪುವ ಪ್ರಯತ್ನ ಮಾಡಲಿ. ಅದರ ಸಾಧಕ ಬಾಧಕಗಳನ್ನು ಗಂಭೀರವಾಗಿ ಅಧ್ಯಯನ ಮಾಡಿದ ಬಳಿಕ ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಮುಂದಾಗುವುದು ಭವಿಷ್ಯದ ದೃಷ್ಟಿಯಿಂದ ಒಳಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News