ಪಂಜಾಬ್ ಪೊಲೀಸರು ಗುಪ್ತಚರ ಮಾಹಿತಿಯನ್ನು ನಿರ್ಲಕ್ಷಿಸಿದ್ದರು: ಗೃಹ ಸಚಿವಾಲಯ

Update: 2022-01-06 05:28 GMT
Photo: Twitter/@ANI

ಹೊಸದಿಲ್ಲಿ: ಫ್ಲೈಓವರ್ ಸಮೀಪ ಪ್ರತಿಭಟನಾಕಾರರು ಇದ್ದಾರೆಂಬ ಕುರಿತು ಗುಪ್ತಚರ ಮಾಹಿತಿಗಳು ಇದ್ದ ಹೊರತಾಗಿಯೂ ಪಂಜಾಬ್ ಪೊಲೀಸರು "ಬ್ಲೂ ಬುಕ್" ನಿಯಮಾನುಸಾರ ಪ್ರಧಾನಿ ಭೇಟಿಯ ಸಂದರ್ಭ ಪರ್ಯಾಯ ಮಾರ್ಗದ  ವ್ಯವಸ್ಥೆಯನ್ನು ಸಿದ್ಧಪಡಿಸಿರಲಿಲ್ಲ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಧಾನಿಯ ರಕ್ಷಣೆಗಿರುವ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್‌ಪಿಜಿ) ಬ್ಲೂ ಬುಕ್  ಪ್ರಧಾನಿಯ ರಕ್ಷಣೆಗೆ ಮಾರ್ಗಸೂಚಿಗಳನ್ನು ತಿಳಿಸುತ್ತದೆ ಎಂದು ndtv.com ವರದಿ ಮಾಡಿದೆ.

"ಇದರ ಅನುಸಾರ ರಾಜ್ಯ ಪೊಲೀಸರು, ಪ್ರಧಾನಿ ಭೇಟಿ ಸಂದರ್ಭ ಪಂಜಾಬ್‌ನಲ್ಲಾದಂತೆ ಯಾವುದೇ ಪ್ರತಿಕೂಲ ಪರಿಸ್ಥಿತಿಯಿದ್ದಲ್ಲಿ ಒಂದು ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಬೇಕಿದೆ,'' ಎಂದು ಈ ಅಧಿಕಾರಿ ಹೇಳಿದ್ದಾರೆ.

"ಗುಪ್ತಚರ ಬ್ಯುರೋದ ಅಧಿಕಾರಿಗಳು ಪಂಜಾಬ್ ಪೊಲೀಸರ ಜತೆ ಸಂಪರ್ಕದಲ್ಲಿದ್ದರು ಹಾಗೂ ಪ್ರತಿಭಟನಾಕಾರರ ಕುರಿತು ಮಾಹಿತಿ ನೀಡಿದ್ದರು ಹಾಗೂ  ವಿಐಪಿ ಭೇಟಿ ವೇಳೆ ಸಂಪೂರ್ಣ ರಕ್ಷಣೆಯೊದಗಿಸುವ ಭರವಸೆಯನ್ನು ಪಂಜಾಬ್ ಪೊಲೀಸ್ ಅಧಿಕಾರಿಗಳು ನೀಡಿದ್ದರು. ಎಸ್‌ಪಿಜಿ ಸಿಬ್ಬಂದಿ ಪ್ರಧಾನಿಯ ಸುತ್ತಮುತ್ತ ಇದ್ದರೂ ಇತರ ಭದ್ರತಾ ವ್ಯವಸ್ಥೆಗಳನ್ನು ರಾಜ್ಯ ಸರಕಾರ  ಮಾಡಬೇಕಿದೆ. ರಾಜ್ಯ ಪೊಲೀಸರು ಎಸ್‌ಪಿಜಿ ಸಿಬ್ಬಂದಿಗೆ ಸೂಕ್ತ ಮಾಹಿತಿ ನೀಡಿದ ಹಾಗೆಯೇ ವಿಐಪಿ ಸಾಗುವ ಹಾದಿಯ ಬಗ್ಗೆ ಅಗತ್ಯವಾದಂತೆ ಕ್ರಮಕೈಗೊಳ್ಳಲಾಗುತ್ತದೆ,'' ಎಂದು ಗೃಹ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.

ಪ್ರಧಾನಿಯ ಭೇಟಿ ವೇಳೆ ಪಂಜಾಬ್ ಪೊಲೀಸರು ಕೈಗೊಂಡ ಭದ್ರತಾ ಕ್ರಮಗಳ ಕುರಿತು ಗೃಹ ಸಚಿವಾಲಯ ವರದಿ ಕೇಳಿದೆ, ಭದ್ರತಾ ಲೋಪದ ಕುರಿತು ಕೂಡ ಗುಪ್ತಚರ ಏಜನ್ಸಿಗಳಿಂದ ವರದಿ ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ.

ಬುಧವಾರ ಪಂಜಾಬ್‌ನ ಹುಸೈನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲಿದ್ದ ಹಾಗೂ ಫಿರೋಝಪುರ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿದ್ದ ವಾಹನ ಮತ್ತು ಬೆಂಗಾವಲು ಪಡೆ ರೈತರ ಪ್ರತಿಭಟನೆಯೊಂದರ ಕಾರಣ ಫ್ಲೈಓವರಿನಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಸಿಲುಕಿಕೊಂಡು ಉಂಟಾದ 'ಭದ್ರತಾ ಲೋಪ'ದ ಕಾರಣ  ಪ್ರಧಾನಿ ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ವಾಪಸಾದ ಘಟನೆ ಬುಧವಾರ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News