ಶೃಂಗೇರಿ: ಮನೆ ಹಕ್ಕುಪತ್ರಕ್ಕೆ ಲಂಚ ಕೇಳಿದ ಆರೋಪ; ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ, ತಹಶೀಲ್ದಾರ್ ವಿಚಾರಣೆ

Update: 2022-01-06 11:56 GMT
ಗ್ರಾಮಲೆಕ್ಕಾಧಿಕಾರಿ ಸಿದ್ದಪ್ಪ 

ಚಿಕ್ಕಮಗಳೂರು, ಜ.6: ಮನೆಯ ಹಕ್ಕುಪತ್ರ ನೀಡಲು 60 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮಲೆಕ್ಕಾಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಗುರುವಾರ ಜಿಲ್ಲೆಯ ಶೃಂಗೇರಿಯಲ್ಲಿ ವರದಿಯಾಗಿದೆ.

ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಸಿದ್ದಪ್ಪ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿಯಾಗಿದ್ದು, ಈತ ಶೃಂಗೇರಿ ತಾಲೂಕಿನ ಬೆಳಂದೂರು ಗ್ರಾಮದ ಸಂಜಯ್ ಕುಮಾರ್ ಎಂಬವರಿಂದ 30 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ಗ್ರಾಮಲೆಕ್ಕಾಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.

ಬೆಳಂದೂರು ಗ್ರಾಮದ ಸಂಜಯ್‍ಕುಮಾರ್ ಎಂಬವರು ತಮ್ಮ ಮನೆಯ ಹಕ್ಕುಪತ್ರ ಪಡೆಯಲು ಶೃಂಗೇರಿ ತಾಲೂಕು ಕಚೇರಿಯ ತಹಶೀಲ್ದಾರ್ ಅಂಬುಜಾ ಎಂಬವರ ಬಳಿ ಇತ್ತೀಚೆಗೆ ತೆರಳಿದ್ದು, ಈ ವೇಳೆ ಅವರು ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ಎಂಬವರನ್ನು ಭೇಟಿಯಾಗುವಂತೆ ತಿಳಿಸಿದ್ದರು. ತಹಶೀಲ್ದಾರ್ ಸೂಚನೆ ಮೇರೆಗೆ ಸಂಜಯ್‍ಕುಮಾರ್ ಕಿಗ್ಗಾ ಕಂದಾಯ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಸಿದ್ದಪ್ಪರನ್ನು ಭೇಟಿಯಾಗಿದ್ದು, ಈ ವೇಳೆ ಅಧಿಕಾರಿ ಸಿದ್ದಪ್ಪ, 60 ಸಾವಿರ ಹಣವನ್ನು ತಹಶೀಲ್ದಾರ್ ಗೆ ನೀಡಬೇಕು. ಹಣ ನೀಡಿದಲ್ಲಿ ಶೀಘ್ರ ಹಕ್ಕುಪತ್ರ ದೊರೆಯಲಿದೆ ಎಂದು ತಿಳಿಸಿದ್ದ ಎನ್ನಲಾಗಿದೆ.

ಅದರಂತೆ ಸಂಜಯ್ ಕುಮಾರ್ ಗ್ರಾಮಲೆಕ್ಕಾಧಿಕಾರಿ ಸಿದ್ದಪ್ಪ ಮೂಲಕ ತಹಶೀಲ್ದಾರ್ ಗೆ 30 ಸಾವಿರ ರೂ. ಹಣವನ್ನು ಮುಂಗಡವಾಗಿ ಕೊಡುವುದಾಗಿ ತಿಳಿಸಿದ್ದರು. ಈ ಮಧ್ಯೆ ತಹಶೀಲ್ದಾರ್ ಹಾಗೂ ಗ್ರಾಮಲೆಕ್ಕಾಧಿಕಾರಿ ಲಂಚ ಕೇಳುತ್ತಿರುವ ಬಗ್ಗೆ ಸಂಜಯ್‍ಕುಮಾರ್ ಎಸಿಬಿಗೆ ದೂರು ನೀಡಿದ್ದು, ಅದರಂತೆ ಗುರುವಾರ ಶೃಂಗೇರಿ ಪಟ್ಟಣದ ಐಬಿಯಲ್ಲಿ ಹಣ ನೀಡುವುದಾಗಿ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪನನ್ನು ಕರೆಸಿಕೊಂಡಿದ್ದ ಸಂಜಯ್‍ಕುಮಾರ್ 30 ಸಾವಿರ ರೂ. ಹಣವನ್ನು ಸಿದ್ದಪ್ಪ ಅವರಿಗೆ ನೀಡುತ್ತಿದ್ದಂತೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ಲಂಚದ ಹಣ ಸಹಿತ ಸಿದ್ದಪ್ಪನನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.

ತಹಶೀಲ್ದಾರ್ ಅಂಬುಜಾ ವಿಚಾರಣೆ: ಪ್ರಕರಣದಲ್ಲಿ ಶೃಂಗೇರಿ ತಹಶೀಲ್ದಾರ್ ಅಂಬುಜಾ ಅವರ ಹೆಸರನ್ನೂ ಸಂಜಯ್‍ಕುಮಾರ್ ಪ್ರಸ್ತಾಪಿಸಿದ್ದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಸಿದ್ದಪ್ಪನನ್ನು ವಶಕ್ಕೆ ಪಡೆದ ಬಳಿಕ ತಹಶೀಲ್ದಾರ್ ಅಂಬುಜಾ ಅವರನ್ನೂ ಐಬಿಗೆ ಕರೆಸಿಕೊಂಡು ಸುಮಾರು 1 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆಂದು ತಿಳಿದು ಬಂದಿದ್ದು, ವಿಚಾರಣೆ ಬಳಿಕ ತಹಶೀಲ್ದಾರ್ ವಿರುದ್ಧ ಎಸಿಬಿ ಅಧಿಕಾರಿಗಳ ತಂಡ ಯಾವುದೇ ಕ್ರಮವಹಿಸಿಲ್ಲ ಎಂದು ತಿಳಿದು ಬಂದಿದೆ. ತಹಶೀಲ್ದಾರ್ ಅಂಬುಜಾ ಅವರೂ ಸಾರ್ವಜನಿಕರ ಕೆಲಸಕ್ಕೆ ತಮ್ಮ ಕೈಕೆಳಗಿನ ಅಧಿಕಾರಿಗಳ ಮೂಲಕ ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದು, ಎಸಿಬಿ ಅಧಿಕಾರಿಗಳು ರಾಜಕಾರಣಿಗಳ ಒತ್ತಡಕ್ಕೆ ಮಣಿಸಿ ತಹಶೀಲ್ದಾರ್ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಹಿರಿಯ ಅಧಿಕಾರಿಗಳನ್ನು ಬಿಟ್ಟು ಕೆಳ ಹಂತದ ಅಧಿಕಾರಿಗಳ ಮೇಲೆ ಎಸಿಬಿ ಅಧಿಕಾರಿಗಳು ಕಾನೂನು ಕ್ರಮವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಎಸಿಬಿ ಡಿವೈಎಸ್ಪಿ ಗೀತಾ, ಇನ್‍ಸ್ಪೆಕ್ಟರ್‍ಗಳಾದ ಮಂಜುನಾಥ್, ಎ.ಜಿ.ರಾಥೋಡ್, ಎಚ್‍ಸಿಗಳಾದ ಪ್ರಕಾಶ್, ದೇವರಾಜ್, ವೇದಾವತಿ, ಸಿಬ್ಬಂದಿ ಅನಿಲ್‍ನಾಯಕ್, ಸತೀಶ್, ಮುಜೀಬ್, ರವಿಚಂದ್ರ, ಜಯಕುಮಾರ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

ನಾನು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಿವಾಸಿಯಾಗಿದ್ದು, ಇತ್ತೀಚೆಗೆ ಬೆಳಂದೂರು ಗ್ರಾಮದಲ್ಲಿ 18 ಗುಂಟೆ ಅಡಿಕೆ ತೋಟ ಖರೀದಿಸಿದ್ದೆ. ತೋಟದ ಪಕ್ಕದಲ್ಲಿದ್ದ ಮನೆಗೆ ಹಕ್ಕುಪತ್ರ ಇಲ್ಲದ ಕಾರಣಕ್ಕೆ ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿ ಎಲ್ಲ ದಾಖಲಾತಿಗಳನ್ನು ನೀಡಿದ್ದೆ. ಕಿಗ್ಗಾ ಕಂದಾಯ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಸಿದ್ದಪ್ಪ ಎಂಬವರನ್ನು ಭೇಟಿಯಾಗಿ ಹಕ್ಕುಪತ್ರ ನೀಡುವಂತೆ ಕೇಳಿದಾಗ 60 ಸಾವಿರ ರೂ. ಲಂಚ ಕೇಳಿದ್ದರು. ನನ್ನ ಬಳಿ ಅಷ್ಟು ಹಣ ಇಲ್ಲದ ಕಾರಣಕ್ಕೆ ಎಸಿಬಿಗೆ ದೂರು ನೀಡಿದ್ದೆ. ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳ ತಂಡ ಐಬಿಯಲ್ಲಿ ಸಿದ್ದಪ್ಪರನ್ನು ವಶಕ್ಕೆ ಪಡೆದಿದ್ದಾರೆ.

- ಸಂಜಯ್‍ಕುಮಾರ್, ದೂರುದಾರ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News