ಎಸಿಬಿ ದಾಳಿ ನೆಪದಲ್ಲಿ ಶಾಸಕ ಕೆ.ಜಿ.ಬೋಪಯ್ಯಗೆ 1 ಕೋಟಿ ರೂ. ಬೇಡಿಕೆ: ಅನಾಮಧೇಯ ವ್ಯಕ್ತಿ ವಿರುದ್ಧ ದೂರು

Update: 2022-01-06 12:08 GMT
ಶಾಸಕ ಕೆ.ಜಿ.ಬೋಪಯ್ಯ

ಮಡಿಕೇರಿ ಜ.6 : ವಿಧಾನಸಭೆಯ ಮಾಜಿ ಅಧ್ಯಕ್ಷ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಭಷ್ಟಾಚಾರ ನಿಗ್ರಹ ದಳದ ಹೆಸರಲ್ಲಿ ವ್ಯಕ್ತಿಯೊಬ್ಬ ಕರೆ ಮಾಡಿ 1 ಕೋಟಿ ರೂ.ಹಣದ ಬೇಡಿಕೆಯಿಟ್ಟ ಪ್ರಕರಣ ನಡೆದಿದೆ. ಈ ಕುರಿತು ಅಪರಿಚಿತ ವ್ಯಕ್ತಿಯ ವಿರುದ್ಧ ಶಾಸಕ ಬೋಪಯ್ಯ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬುಧವಾರ ಸಂಜೆ 6.15 ಗಂಟೆಗೆ ಅಪರಿಚಿತ ವ್ಯಕ್ತಿ ಶಾಸಕ ಕೆ.ಜಿ.ಬೋಪಯ್ಯ ಅವರ ಮೊಬೈಲ್ ಸಂಖ್ಯೆಗೆ ಕರೆಮಾಡಿ “ತಾವು ಎ.ಸಿ.ಬಿ ಅವರು, ತಮ್ಮ ಮೇಲೆ ಎಸಿಬಿ ದಾಳಿ ಮಾಡಲು ಸಜ್ಜಾಗುತ್ತಿದ್ದು, ಈ ಎಸಿಬಿ ದಾಳಿಯನ್ನು ತಡೆ ಹಿಡಿಯಲು 1 ಕೋಟಿ ರೂ. ನೀಡಬೇಕೆಂದು” ಬೇಡಿಕೆ ಇಟ್ಟಿದ್ದಾನೆ. ಮಾತ್ರವಲ್ಲದೇ, ಒಂದು ಬ್ಯಾಂಕ್ ಅಕೌಂಟ್ ಸಂಖ್ಯೆಯನ್ನು ನೀಡುತ್ತೇನೆ, ಅದಕ್ಕೆ ಈ ಕೂಡಲೇ ಹಣ ಹಾಕುವಂತೆ ತಿಳಿಸಿ ಕರೆ ಕಟ್ ಮಾಡಿದ್ದಾನೆ. ಮತ್ತೊಂದು ಸಂಖ್ಯೆಯಿಂದ ಕೆಲ ಸಮಯದ ಬಳಿಕ ಕರೆ ಮಾಡಿದ ಅಪರಿಚಿತ ‘ಹಣದ ಬಗ್ಗೆ ಏನು ಯೋಚನೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಅಸಮಾಧಾನಗೊಂಡ ಶಾಸಕ ಕೆ.ಜಿ ಬೋಪಯ್ಯ, ದಾಳಿ ನಡೆಯುವುದಾದರೆ ನಡೆಯಲಿ, ಮನೆಯನ್ನು ಶೋಧಿಸಲಿ, ಏನು ಸಿಗುತ್ತೋ ಅದನ್ನು ತೆಗೆದುಕೊಂಡು ಹೋಗಲಿ’ ಎಂದು ಹೇಳಿ ಕರೆ ಕಟ್ ಮಾಡಿದ್ದಾರೆ.

ತಮ್ಮ ಮನೆಗೆ ಆಗಮಿಸಿದ್ದ ಕೆಲವರ ಬಳಿಯಿಂದ ಕರೆ ಬಂದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಅಪರಿಚಿತ ಕರೆ ಸ್ವೀಕರಿಸಲಿಲ್ಲ. ಬಳಿಕ ಮಡಿಕೇರಿ ನಗರ ಠಾಣೆಗೆ ತೆರಳಿದ ಶಾಸಕ ಬೋಪಯ್ಯ ದೂರು ದಾಖಲಿಸಿದ್ದಾರೆ. ಈ ಕುರಿತು ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಉನ್ನತ್ತಾಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯೋನ್ಮುಖರಾದ ಸೈಬರ್ ಕ್ರೈಂ ಸಿಬ್ಬಂದಿಗಳು ಕರೆಯನ್ನು ಪರಿಶೀಲಿಸಿದಾಗ ಎರಡೂ ಕರೆಗಳು ಆಂಧ್ರ ಪ್ರದೇಶದ ಕಡೆಯಿಂದ ಬಂದಿದ್ದು, ಒಂದು ಸಂಖ್ಯೆ ಝಹೀಬ್ ಖಾನ್ ಹೆಸರಲ್ಲಿ ಮತ್ತೊಂದು ಕರೆ ಅನ್ನದಾನಮ್ಮ ಎಂಬುವವರ ಹೆಸರಿನಲ್ಲಿದೆ ಎಂದು ಸೈಬರ್ ಕ್ರೈಂ ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಮತ್ತಷ್ಟು ತನಿಖೆ ನಡೆಸುವಂತೆ ಶಾಸಕ ಕೆ.ಜಿ. ಬೋಪಯ್ಯ ಅವರು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಬುಧವಾರ ಸಂಜೆ 2 ಬಾರಿ ಕರೆ ಬಂದಿದ್ದು, ಅಪರಿಚಿತ ವ್ಯಕ್ತಿ ಶುದ್ಧ ಕನ್ನಡದಲ್ಲೇ ಮಾತನಾಡಿದ್ದಾನೆ. ನೀವು ಕೆ.ಜಿ.ಬೋಪಯ್ಯ ಅಲ್ಲವೇ ಎಂದು ಪ್ರಶ್ನಿಸಿದ್ದಾನೆ ಎಂದು ಮಾಹಿತಿ ನೀಡಿದರು. 

ಈ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ಸೈಬರ್ ಕ್ರೈಂಗೂ ದೂರು ನೀಡಿರುವುದಾಗಿ ಕೆ.ಜಿ.ಬೋಪಯ್ಯ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News