ಮೇಕೆದಾಟು ಯೋಜನೆ ಜಾರಿಗೆ ಛಲದ ಹೋರಾಟ ಅಗತ್ಯ: ಮಲ್ಲಿಕಾರ್ಜುನ ಖರ್ಗೆ

Update: 2022-01-09 12:00 GMT

ಬೆಂಗಳೂರು, ಜ. 9: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ವಿಫಲಗೊಳಿಸಲು ಬಿಜೆಪಿ, ಜೆಡಿಎಸ್ ಹಾಗೂ ಇತರ ಪಕ್ಷಗಳು ಪ್ರಯತ್ನಿಸುತ್ತಿವೆ.  ಆದರೆ, ಇದಕ್ಕೆ ನಾವು ವಿಚಲಿತರಾಗುವ ಅಗತ್ಯ ಇಲ್ಲ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ರವಿವಾರ ಇಲ್ಲಿನ ಕನಕಪುರದ ಸಂಗಮದಲ್ಲಿ ಏರ್ಪಡಿಸಿದ್ದ ಐತಿಹಾಸಿಕ ಪಾದಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, 9 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಆರಂಭಿಸಲು ಕಾಂಗ್ರೆಸ್ ಸರಕಾರ ಎಲ್ಲ ಪ್ರಯತ್ನ ನಡೆಸಿತ್ತು. 67 ಟಿಎಂಸಿ ನೀರು ಶೇಖರಣಾ ಸಾಮರ್ಥ್ಯದ ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಪ್ರಬಲ ಹೋರಾಟ ನಡೆಸುವ ಛಲ ಕಾಂಗ್ರೆಸ್ ಪಕ್ಷದ ನಾಯಕರಲ್ಲಿದೆ. ಇದನ್ನು ವಿಫಲಗೊಳಿಸಲು ಸರಕಾರದ ವಿಫಲಯತ್ನ ನಡೆಸಿದೆ ಎಂದು ಟೀಕಿಸಿದರು. 

ಮೇಕೆದಾಟು ಯೋಜನೆಯಿಂದ ತಮಿಳುನಾಡು ಸೇರಿದಂತೆ ಯಾರಿಗೂ ತೊಂದರೆ ಆಗುವುದಿಲ್ಲ. ಯೋಜನೆಯಿಂದ ಬಾಧಿತವಾಗುವ ಅರಣ್ಯ ಪ್ರದೇಶದ ಎರಡು ಪಟ್ಟು ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲು ಸರಕಾರ ಗುರುತಿಸಿದೆ. ಯಾವ ಕಾರಣಕ್ಕೂ ಈ ಯೋಜನೆ ನಿಲ್ಲಬಾರದು ಎಂದು ಹೇಳಿದರು.

ಉತ್ತರ ನೀಡುತ್ತೇವೆ: ಜಲಸಂಪನ್ಮೂಲ ಸಚಿವ ಕಾರಜೋಳ ಅನಾಮಧೇಯ ಜಾಹೀರಾತು ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ವಾಸ್ತವಾಂಶಗಳನ್ನು ಮುಚ್ಚಿಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದರು.

ಇದೇ ವೇಳೆ ಮಾತನಾಡಿದ ಅವರು, ಮೇಕೆದಾಟು ಯೋಜನೆ 1986-87ರಿಂದಲೂ ಪ್ರಸ್ತಾಪವಾಗುತ್ತಿದೆ. 5,600 ಎಕರೆಯಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಚಿಂತನೆ ನಡೆದಿತ್ತು. ಅಂದಿನಿಂದ 2013ರ ವರೆಗೆ ಹಲವು ಬೆಳವಣಿಗೆಗಳಾಗಿವೆ.

ಕಾವೇರಿ ನೀರಾವರಿ ನ್ಯಾಯ ಮಂಡಳಿಯ ತೀರ್ಪಿನ ಬಳಿಕ ನಾನು 2013ರ ಅಕ್ಟೋಬರ್‍ನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಯೋಜನಾ ವರದಿ ತಯಾರಿಸಲು 4ಜಿ ರಿಯಾಯಿತಿ ನೀಡಲಾಯಿತು. ನಂತರ ಜಾಗತಿಕ ಆಸಕ್ತರನ್ನು ಆಹ್ವಾನಿಸಲಾಗಿತ್ತು. ಖಾಸಗಿ ಕಂಪೆನಿಗಳು 22 ಕೋಟಿ ರೂ. ಟೆಂಡರ್ ನಮೂದು ಮಾಡಿದ್ದವು. ಅದು ಹೆಚ್ಚಾಗಿದೆ ಎಂದು ಕೈಬಿಟ್ಟು 3.26 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರಕಾರದ ಅಧಿಕಾರಿಗಳು ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದರು. ಅದನ್ನು ಕೇಂದ್ರ ಜಲ ಆಯೋಗಕ್ಕೆ ವರದಿ ರೂಪದಲ್ಲಿ ಸಲ್ಲಿಸಲಾಯಿತು ಎಂದರು.

ಆರಂಭದಲ್ಲಿ ಯೋಜನೆಯ ಔಚಿತ್ಯ ವರದಿಯನ್ನೂ ನೀಡಲಾಗಿದೆ. ಬಳಿಕ ನಮ್ಮ ಯೋಜನಾ ವರದಿಗೆ ಕೇಂದ್ರ ಸರಕಾರ ಅಂಗೀಕಾರ ದೊರೆತಿದೆ. ಬಳಿಕ ಕಾವೇರಿ ನದಿ ವಿವಾದದ ತೀರ್ಪು ಪ್ರಕಟಗೊಂಡಿತ್ತು. 

ಹಿರಿಯ ವಕೀಲ ಪಾಲಿನಾರಿಮನ್ ಅವರು ಕೊನೆಯ ಹಂತದ ವಿಚಾರಣೆಯಲ್ಲಿ ಮಾಡಿದ ವಾದ ಪರಿಗಣಿಸಿ ತಮಿಳುನಾಡಿಗೆ ಹಂಚಿಕೆಯಾಗಿದ್ದ 193 ಟಿಎಂಸಿ ನೀರಿನ ಬದಲು ಸುಪ್ರೀಂಕೋರ್ಟ್ 172 ಟಿಎಂಸಿಯನ್ನು ಮರು ಹಂಚಿಕೆ ಮಾಡಿದೆ ಎಂದು ಅವರು ವಿವರಿಸಿದರು.
ಮೇಕೆದಾಟು ಅಣೆಕಟ್ಟಿಗೆ ಮೊದಲು 5,692 ಕೋಟಿ ರೂ. ವೆಚ್ಚದಲ್ಲಿ ಯೋಜನೆ ತಯಾರಿಸಲಾಗಿತ್ತು. ಭೂಸ್ವಾಧೀನ ಪ್ರಕ್ರಿಯ ಮೌಲ್ಯ ಹೆಚ್ಚಾಗಿದ್ದರಿಂದ ಪರಿಷ್ಕೃತ ಯೋಜನಾ ವೆಚ್ಚ 9 ಕೋಟಿ ರೂ.ಗೆ ಹೆಚ್ಚಾಯಿತು ಎಂದು ಅವರು ಹೇಳಿದರು.

ಕಾವೇರಿ ನೀರು ನಿರ್ವಹಣಾ ಮಂಡಲಿ ಮತ್ತು ಕೇಂದ್ರ ಪರಿಸರ ಅರಣ್ಯ ಇಲಾಖೆಯ ಅನುಮತಿ ಪಡೆದು ಯೋಜನೆ ಆರಂಭಿಸಲು ಸಾಧ್ಯವಿದೆ. ಈ ಎರಡು ಕೆಲಸಗಳು ಕೇಂದ್ರ ಸರಕಾರದ ಅಧೀನದಲ್ಲಿ ನಡೆಯಬೇಕಿದೆ. ಬಿಜೆಪಿ ಸರಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅನಾಮಧೇಯ ಜಾಹೀರಾತು ನೀಡಿದೆ. ನಾವು ವಾಸ್ತವಾಂಶಗಳನ್ನು ನೀಡಲು ಪ್ರತ್ಯೇಕ ಜಾಹೀರಾತು ನೀಡುತ್ತೇವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News