ಆ ವೇಷಭೂಷಣ ಕೊರಗಜ್ಜನದಲ್ಲ: ಕೊರಗಜ್ಜನನ್ನು ಅವಮಾನಿಸುವ ಪ್ರತಿಯೊಬ್ಬರಿಗೂ ಶಿಕ್ಷೆ ಆಗಬೇಕು!

Update: 2022-01-09 14:44 GMT

ದಕ್ಷಿಣಕನ್ನಡದ ಸಾಲೆತ್ತೂರಿನಲ್ಲಿ ಮದುವೆ ಸಮಾರಂಭದ ನಿಮಿತ್ತ ನಡೆಸಿದ್ದ ಕಾರ್ಯಕ್ರಮದಲ್ಲಿ ಕೊರಗಜ್ಜ ಮತ್ತು ಕೊರಗ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ʼಕೊರಗೆರ್ನ ಅಲಿಪು ಉಲಿಪುʼ ಎಂಬ ಪೇಜ್‌ ನಲ್ಲಿ ಕೊರಗ ಸಮುದಾಯದ ಯುವಕ ಬಿ.ಎಸ್.‌ ಹೃದಯ ಬೆಳುವಾಯಿ  ಫೇಸ್‌ ಬುಕ್‌ ನಲ್ಲಿ ಬರೆದಿರುವ ಬರಹ ಇಲ್ಲಿದೆ. 

ತಲೆಮೇಲೊಂದು ಮುಠ್ಠಾಳೆ. ಮೈ ಪೂರಾ ಕಡು ಕಪ್ಪು ಬಣ್ಣ, ಬೆಳ್ಳಗಿನ ದಪ್ಪ ಮೀಸೆ, ದೃಢಕಾಯ ಮೈಕಟ್ಟು, ಸೊಂಟದಲ್ಲೊಂದು ಬುಟ್ಟಿ, ಕೈಗಳಲ್ಲಿ ಎರಡು ಕೋಲುಗಳು. ಇದು ಜನರ ಸ್ಮೃತಿ ಪಟಲದಲ್ಲಿ ಮೂಡಿಬರುವ ಕೊರಗಜ್ಜನ ಚಿತ್ರಣ. ಈ ಚಿತ್ರಣವನ್ನೇ ಎಲ್ಲರೂ 'ಕೊರಗಜ್ಜ'ನೆಂದು ಪೂಜಿಸುವುದು. ಅದನ್ನೇ ಕಲಾವಿದರು ಬಿಂಬವಾಗಿ ಪ್ರತಿಷ್ಠಾಪಿಸಿರುವುದು, ಕಲೆಯಾಗಿ ಅರಳಿಸಿ ಚಿತ್ರಿಸಿರುವುದು!

ಕೊರಗಜ್ಜನನ್ನು ಶಿವನ ರೂಪದಂತೆ ಚಿತ್ರಿಸುವುದು, ಮುಕ್ಕಣ್ಣನಂತೆ (ಹಣೆಮೇಲೆ ಮೂರನೇ ಕಣ್ಣು) ಚಿತ್ರಿದಿರುವುದು, ಅರ್ಧ ಶಿವನ ಮುಖದ ಚಿತ್ರಕ್ಕೆ - ಇನ್ನರ್ಧ ಕೊರಗಜ್ಜನ ಮುಖವನ್ನಿಟ್ಟು ಚಿತ್ರಿಸುವುದು ಕಲಾವಿದರಿಗೆ ಪ್ಯಾಶನ್ ಆಗಿದೆ! ಭಗ್ತಿಗೀತೆಗಳು ಕೂಡಾ ಇದನ್ನೇ ಹೇಳುತ್ತಿದೆ! ಕಲೆಯನ್ನು ಗೌರವಿಸೋಣ. ಆದರೆ, ಆ ಒಂದು ಕಲೆ 'ಒಂದು ಜನಾಂಗದ ಸಾರ್ವಭೌಮತೆಯನ್ನು ಪ್ರತಿಬಿಂಬಿಸುವ ರೂಪಕವೊಂದರ ಅಸ್ಮಿತೆ' ಎಂಬುದನ್ನು ಮರೆತು, ಕಲಾವಿದರು ತಮ್ಮ ಸ್ಮೃತಿ ಪಟಲದಲ್ಲಿ ಮೂಡಿಬಂದಂತೆ 'ಅಜ್ಜ'ನನ್ನು ಚಿತ್ರಿಸಿ ಹೊಸ ತಲೆಮಾರು ಮಾರುಹೋಗುವಂತೆ ಬಿಂಬಿಸಿ, ಇನ್ನಷ್ಟು ಹೋಸ ಹೊಸ ರೀತಿಯ ಆಲೋಚನೆಗಳು ಮೂಡುವಂತೆ ಮಾಡುವುದು ಅವಮಾನವಲ್ಲವೇ?! ಮದುವೆಯೇ ಆಗದ ಕೊರಗ ತನಿಯ/ಕೊರಗಜ್ಜನಿಗೆ 'ಏಳು ಕೊರಪೊಳು'ಗಳೆಂದು ಹೇಳಿ - ಆ ವಿಕೃತಿಯನ್ನು  ಕಾರ್ಯರೂಪಕ್ಕೆ ತಂದಾಗ ಸುಮ್ಮನಿದ್ದವರು, ಈಗ ಸಾಮ್ಯತೆಯೇ ಇಲ್ಲದ ವಿಚಾರವೊಂದರ ಕುರಿತಾಗಿ ಹಾರಾಡುವುದನ್ನು ಕಂಡಾಗ ಮರುಕವಾಗುತ್ತದೆ.
 
ಬಂಟ್ವಾಳ ತಾಲ್ಲೂಕಿನ ಕೊಲ್ನಾಡು ಗ್ರಾಮದ ಸಾಲೆತ್ತೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಮದುಮಗ ನೀಲಿ ಬಣ್ಣದ ಟಿ ಶರ್ಟ್ ಮತ್ತು ಪ್ಯಾಂಟ್ ಮೇಲೆ ಪಂಚೆಯುಟ್ಟು, ಕ್ರೋಟನ್ ಗಿಡದ ಎಲೆಯನ್ನು ದಾರಕ್ಕೆ ಕಟ್ಟಿದ ಹಾರವಾಗಿ, ತಲೆ ಮೇಲೊಂದು ಅಡಿಕೆ ಹಾಲೆಯ ಮುಠ್ಠಾಳೆಯಿಟ್ಟು, ಮುಖಕ್ಕೆ ಕಪ್ಪು ಬಣ್ಣ ಬಳಿದು ತಲೆ ಬಗ್ಗಿಸಿ ಆಗಮಿಸುತ್ತಾನೆ. ಸುತ್ತು ವರಿದ ಗೆಳೆಯರ ಬಳಗ ಬ್ಯಾರಿ ಹಾಡು (ಮಾಪಿಳ್ಳೆ ಪಾಟ್) ಹಾಡಿ ಸಂಭ್ರಮಿಸುತ್ತಾರೆ. ಕೊರಗಜ್ಜನ ಕೋಲದಲ್ಲಿ ವೇಷಧಾರಿ ನರ್ತಿಸುವಂತೆ ಏನು ಆತ ನರ್ತಿಸಿಲ್ಲ. ಅಂತಹ ಸಾಮ್ಯತೆ ಯಾವುದೂ ಅಲ್ಲಿ ಕಂಡು ಬಂದಿಲ್ಲ. ಹೀಗಿರುವಾಗ ತಲೆ ಮೇಲಿನ ಮುಠ್ಠಾಳೆ ಮತ್ತು ಬರಿಯ ಮುಖಬಣ್ಣದಿಂದ 'ಕೊರಗಜ್ಜನನ್ನು ಅವಮಾನಿಸಿದರು' ಎಂದು ಹೇಗೆ ಹೇಳೋಣ?!

ಕೊರಗಜ್ಜನನ್ನು ಅವಮಾನಿಸುವ ಪ್ರತಿಯೊಬ್ಬರಿಗೂ ಶಿಕ್ಷೆ ಆಗಬೇಕು. ಪರಿಶುದ್ಧ ಶೇಂಧಿಯ ಬದಲು ಬಿಯರ್ ಬಾಟಲಿ ಇಡುವವರಿಗೆ ಶಿಕ್ಷೆ ಆಗಬೇಕು. ಅದಕ್ಕೂ ಮೊದಲು - ಅಜ್ಜನ ಹೆಸರೇಳಿ ವಿಕೃತವಾಗಿ ಕುಣಿಯುವವರಿಗೆ, ಸೊಂಟದ ಕೆಳಗಿನ ಪದ ಬಳಸಿ ಅಪಹಾಸ್ಯ ಮಾಡುವವರಿಗೆ ಶಿಕ್ಷೆಯಾಗಬೇಕು.

Full View

Writer - - ಬಿ.ಎಸ್. ಹೃದಯ, ಬೆಳುವಾಯಿ.

contributor

Editor - - ಬಿ.ಎಸ್. ಹೃದಯ, ಬೆಳುವಾಯಿ.

contributor

Similar News