‘ನಮ್ಮನ್ನು ಮುಗಿಸಲಾಗಿದೆ’: ಕರ್ನಾಟಕ ಗೋಹತ್ಯೆ ಕಾನೂನು 'ಸಂಕಷ್ಟಕ್ಕೆ' ತಳ್ಳಿದೆ ಎನ್ನುತ್ತಿರುವ ರೈತರು, ವ್ಯಾಪಾರಿಗಳು

Update: 2022-01-10 16:30 GMT
ಸಾಂದರ್ಭಿಕ ಚಿತ್ರ

ಬೆಂಗಳೂರು,ಜ.10: ಕರ್ನಾಟಕ ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣೆ ಕಾಯ್ದೆ,2020 ರೈತರು, ಜಾನುವಾರು ವ್ಯಾಪಾರಿಗಳು,ಚರ್ಮ ಕಾರ್ಮಿಕರು ಮತ್ತು ಟ್ಯಾನರಿಗಳ ಕಾರ್ಮಿಕರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ಈ ಕಾಯ್ದೆ ತಮ್ಮನ್ನು ಮುಗಿಸಿಬಿಟ್ಟಿದೆ ಎಂದು ಅವರು ಗೋಳಿಡುತ್ತಿದ್ದಾರೆ.

ರಾಜ್ಯದ ಬಿಜೆಪಿ ಸರಕಾರವು ತಂದಿರುವ ಈ ಕಾಯ್ದೆಯು ಜನವರಿ 2021ರಲ್ಲಿ ಜಾರಿಗೊಂಡಿದೆ. ಕಾಯ್ದೆಯಡಿ ಎಲ್ಲ ಜಾನುವಾರುಗಳ (ಗೋವುಗಳು, ಹೋರಿಗಳು, ಎಮ್ಮೆಗಳು ಮತ್ತು ಎತ್ತುಗಳು) ಖರೀದಿ, ಮಾರಾಟ, ಸಾಗಾಣಿಕೆ, ಹತ್ಯೆ ಮತ್ತು ವ್ಯಾಪಾರ ಕಾನೂನುಬಾಹಿರವಾಗಿದೆ. 13 ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಎಮ್ಮೆಗಳು ಮತ್ತು ಮಾರಣಾಂತಿಕ ಅನಾರೋಗ್ಯದಿಂದ ಬಳಲುತ್ತಿರುವ ಜಾನುವಾರುಗಳಿಗೆ ಮಾತ್ರ ಈ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ,ಅದೂ ಪಶುವೈದ್ಯರು ಪ್ರಮಾಣೀಕರಿಸಿದರೆ ಮಾತ್ರ. ಕಾಯ್ದೆಯಡಿ ತಪ್ಪಿತಸ್ಥರಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50,000 ರೂ.ಗಳಿಂದ ಐದು ಲ.ರೂ.ವರೆಗೆ ದಂಡ ವಿಧಿಸಬಹುದಾಗಿದೆ.

ರಾಜ್ಯದ ಪಶುಸಂಗೋಪನಾ ಸಚಿವ ಪ್ರಭು ಚವಾಣ್ ಹೇಳಿರುವಂತೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಂಡಾಗಿನಿಂದ 500ಕ್ಕೂ ಅಧಿಕ ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಹಲವರು ಜೈಲು ದರ್ಶನವನ್ನೂ ಮಾಡಿದ್ದಾರೆ. ಗೋ ಸಂರಕ್ಷಣೆಯ ಗುಜರಾತ್ ಮಾದರಿಯನ್ನು ಪುನರಾರ್ತಿಸುವುದು ಕಾಯ್ದೆಯ ಉದ್ದೇಶವಾಗಿದೆ ಎಂದು ಚವಾಣ್ ಹೇಳಿಕೊಂಡಿದ್ದಾರೆ.

ಕಾಯ್ದೆ ದೊಡ್ಡ ಹೊಡೆತ ನೀಡಿದೆ

ಬಿಜೆಪಿ ಸರಕಾರದ ಈ ಕಾಯ್ದೆಯು ಒಂದು ವರ್ಗದ ಜನರಿಗೆ ಸಂತಸವನ್ನು ನೀಡಿದೆ,ಆದರೆ ಅದು ತಮ್ಮನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ ಎಂದು ಇತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರು,ಜಾನುವಾರು ವ್ಯಾಪಾರಿಗಳು,ಚರ್ಮ ಕಾರ್ಮಿಕರು,ಚರ್ಮ ಹದ ಮಾಡುವ ಮತ್ತು ಟ್ಯಾನರಿಗಳ ಕಾರ್ಮಿಕರು ಇವರಲ್ಲಿ ಸೇರಿದ್ದಾರೆ. ಅತ್ಯಂತ ಸಂಕಷ್ಟದಲ್ಲಿರುವವರು ಸಣ್ಣ ರೈತರು ಮತ್ತು ಹೆಚ್ಚಾಗಿ ದಲಿತರು ಮತ್ತು ಮುಸ್ಲಿಮರೇ ಸೇರಿದಂತೆ ಕಸಾಯಿ ಖಾನೆಗಳಲ್ಲಿ ,ಚರ್ಮ ಹದ ಮಾಡುವ ಘಟಕಗಳಲ್ಲಿ ದುಡಿಯುವ ಬಡಕಾರ್ಮಿಕರಾಗಿದ್ದಾರೆ.

ಈ ಕಾಯ್ದೆಯು ಈಗಾಗಲೇ ಕೋವಿಡ್ ಲಾಕ್‌ಡೌನ್‌ಗಳಿಂದಾಗಿ ಸಂಕಷ್ಟದಲ್ಲಿರುವ ಕೈಗಾರಿಕೆಗಳ ಮೇಲೆ ಇನ್ನಷ್ಟು ಹೊರೆಯನ್ನು ಹೊರಿಸಿದೆ ಎನ್ನುತ್ತಾರೆ ಈ ಉದ್ಯಮದೊಂದಿಗೆ ಗುರುತಿಸಿಕೊಂಡಿರುವವರು.

‘ವ್ಯಾಪಾರಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ತಿಂಗಳಿಗೆ 10,000-15,000 ರೂ.ಗಳಿಸುತ್ತಿದ್ದ ಕಾರ್ಮಿಕರು ತಮ್ಮ ಕೆಲಸಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ನನ್ನ ಉದ್ಯೋಗಕ್ಕೂ ತೀವ್ರ ಹೊಡೆತ ಬಿದ್ದಿದೆ. ನಾನೀಗ ಜಾನುವಾರು ಚರ್ಮಗಳನ್ನು ಕೇರಳ ಮತ್ತು ಆಂಧ್ರಪ್ರದೇಶದಿಂದ ತರಿಸಿಕೊಳ್ಳುತ್ತಿದ್ದೇನೆ ’ ಎಂದು ಬೆಂಗಳೂರಿನ ಟ್ಯಾನರಿ ಘಟಕವೊಂದರ ಮಾಲಿಕ ರಿಝ್ವಾನ್-ಉಲ್ ಖುರೇಷಿ ಹೇಳಿದರು.

ಚರ್ಮ ಉದ್ಯಮದಲ್ಲಿ ದುಡಿಯುತ್ತಿದ್ದ ದಲಿತರು ಮತ್ತು ಮುಸ್ಲಿಮರು ಅತ್ಯಂತ ಹೆಚ್ಚಿನ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ಗೋಹತ್ಯೆ ಕಾನೂನಿನ ಪರಿಣಾಮಗಳ ಕುರಿತು ಸಂಶೋಧಕರಾದ ಡಾ.ಸಿಲ್ವಿಯಾ ಕರ್ಪಗಂ ಮತ್ತು ಸಿದ್ಧಾರ್ಥ ಜೋಶಿ ಅವರು ಸಿದ್ಧಪಡಿಸಿರುವ ವರದಿಯು ಬೆಟ್ಟು ಮಾಡಿದೆ.

ಜಾನುವಾರಿ ವ್ಯಾಪಾರಿಗಳು ಮತ್ತು ರೈತರು ಕಾಯ್ದೆಯ ಬಿಸಿಯನ್ನು ಅನುಭವಿಸುತ್ತಿದ್ದಾರೆ. ಒಂದು ಪ್ರಕರಣದಲ್ಲಿ ರೈತನೋರ್ವ ಆಸ್ಪತ್ರೆ ಶುಲ್ಕವನ್ನು ಪಾವತಿಸಲು ತನ್ನ ಜಾನುವಾರು ಮಾರಾಟ ಮಾಡಿದ್ದ. ಆತನ ಮಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆಯಾಗಿತ್ತು. ಆದರೆ ಜಾನುವಾರು ಮಾರಾಟ ಮಾಡಿದ್ದ ತಪ್ಪಿಗೆ ಪ್ರಕರಣವನ್ನು ಎದುರಿಸುತ್ತಿದ್ದಾನೆ. ತಮ್ಮ ಜಾನುವಾರುಗಳನ್ನು ಮಾರಾಟ ಮಾಡಿರುವ ಹಲವಾರು ರೈತರು ಇಂತಹುದೇ ಹಣಕಾಸು ಮುಗ್ಗಟ್ಟು ಎದುರಿಸುತ್ತಿದ್ದರು. ದುರದೃಷ್ಟವೆಂದರೆ ಜಾನುವಾರು ಮಾರಾಟದಿಂದ ಬಂದಿದ್ದ ಹಣದ ಹೆಚ್ಚಿನ ಭಾಗವನ್ನು ಅವರು ನ್ಯಾಯಾಲಯದಿಂದ ಜಾಮೀನು ಪಡೆಯಲು ಖರ್ಚು ಮಾಡುವಂತಾಗಿದೆ. 

theprint.in ಜೊತೆ ಮಾತನಾಡಿದ ಸಚಿವ ಚವಾಣ್ ಕಾಯ್ದೆಯಿಂದ ರೈತರಿಗೆ ತೊಂದರೆಯಾಗಿದೆ ಎನ್ನುವುದನ್ನು ನಿರಾಕರಿಸಿದರು. ಕಾಯ್ದೆಯಡಿ ಯಾವುದೇ ರೈತನ ವಿರುದ್ಧ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿಕೊಂಡರು. ಆದರೆ ಕಳೆದ ಆಗಸ್ಟ್‌ನಲ್ಲಿ ಮೂವರು ರೈತರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ನತ್ತ ಬೆಟ್ಟು ಮಾಡಿದಾಗ,ಅವರ ವಿರುದ್ಧ ಪ್ರಕರಣ ದಾಖಲಾಗಿರಬಹುದು,ಆದರೆ ಕಾಯ್ದೆಗೆ ವಿರೋಧವನ್ನು ವ್ಯಕ್ತಪಡಿಸಿ ಯಾವುದೇ ರೈತರು ತನಗೆ ಅಹವಾಲು ಸಲ್ಲಿಸಿಲ್ಲ ಎಂದು ಸಮರ್ಥಿಸಿಕೊಂಡರು.

ಗೋಶಾಲೆಗಳ ಮಾಲಿಕರಿಗೆ ಮಾತ್ರ ಲಾಭ

ಕಾಯ್ದೆಯು ಜಾರಿಗೊಂಡು ಒಂದು ವರ್ಷವಾಗಿದ್ದರೂ ರಾಜ್ಯದಲ್ಲಿ ಒಂದೇ ಒಂದು ಸರಕಾರಿ ಗೋಶಾಲೆ ಕಾರ್ಯ ನಿರ್ವಹಿಸುತ್ತಿಲ್ಲ. ಎಲ್ಲ 30 ಜಿಲ್ಲೆಗಳಲ್ಲಿ ಸರಕಾರಿ ಗೋಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ರೈತರು ತಮ್ಮ ವಯಸ್ಸಾದ,ಅನಾರೋಗ್ಯಪೀಡಿತ,ಅನುತ್ಪಾದಕ ಜಾನುವಾರುಗಳು ಮತ್ತು ಗಂಡು ಕರುಗಳನ್ನು ಅಲ್ಲಿ ಬಿಡಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರದಲ್ಲಿ ಚವಾಣ್ ತಿಳಿಸಿದ್ದಾರೆ.

ತಮ್ಮ ಉಪಯೋಗವಿಲ್ಲದ ಜಾನುವಾರುಗಳನ್ನು ಇಂತಹ ಗೋಶಾಲೆಗಳಿಗೆ ಉಚಿತವಾಗಿ ನೀಡುವಂತೆ ತಮ್ಮನ್ನು ಬಲವಂತಗೊಳಿಸುವುದರಿಂದ ಅವುಗಳ ಮಾರಾಟದಿಂದ ಸಿಗುವ ಸಣ್ಣ ಮೊತ್ತದಿಂದಲೂ ತಾವು ವಂಚಿತರಾಗುತ್ತೇವೆ ಎಂದು ರೈತರು ಆರೋಪಿಸಿದ್ದಾರೆ.

ಹಾಲಿ ದೇವಸ್ಥಾನಗಳು,ಟ್ರಸ್ಟ್‌ಗಳು ಮತ್ತು ಧಾರ್ಮಿಕ ಸಂಸ್ಥೆಗಳು ಸುಮಾರು 186 ಗೋಶಾಲೆಗಳನ್ನು ನಡೆಸುತ್ತಿದ್ದು,ಕಾಯ್ದೆಯಡಿ ವಶಪಡಿಸಿಕೊಳ್ಳಲಾದ ಜಾನುವಾರುಗಳನ್ನು ನೋಡಿಕೊಳ್ಳಲು ಸರಕಾರದಿಂದ ಆರ್ಥಿಕ ನೆರವನ್ನು ಪಡೆಯುತ್ತಿವೆ.

ಕೃಷಿ ಮಾಡಲು ಭೂಮಿ,ತನ್ನ ಉತ್ಪನ್ನವನ್ನು ಮಾರಾಟ ಮಾಡಲು ಮಾರುಕಟ್ಟೆ ಮತ್ತು ಪೂರಕ ಆದಾಯಕ್ಕಾಗಿ ಜಾನುವಾರು ಸಾಕಣೆ ಇವು ರೈತನು ಬದುಕುಳಿಯಲು ಅಗತ್ಯವಾಗಿವೆ. ಎಪಿಎಂಸಿ ಕಾಯ್ದೆ (ಇತ್ತೀಚಿಗೆ ರದ್ದಾಗಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳ ಪೈಕಿ ಒಂದರ ರಾಜ್ಯದ ಆವೃತ್ತಿ) ಮತ್ತು ಗೋಹತ್ಯೆ ನಿಷೇಧ ಕಾಯ್ದೆಗಳಿಂದ ರಾಜ್ಯದಲ್ಲಿಯ ಬಿಜೆಪಿ ಸರಕಾರವು ರೈತರನ್ನು ಮುಗಿಸಿಬಿಟ್ಟಿದೆ ಎಂದು ಹೇಳಿದ ಕರ್ನಾಟಕ ರಾಜ್ಯ ರೈತ ಒಕ್ಕೂಟದ ನಾಯಕ ಕೋಡಿಹಳ್ಳಿ ಚಂದ್ರಶೇಖರ ಅವರು,ಕಾಯ್ದೆಯಿಂದ ಲಾಭ ಮಾಡಿಕೊಳ್ಳುತ್ತಿರುವವರು ಗೋಶಾಲೆಗಳ ಮಾಲಿಕರು ಮಾತ್ರ ಎಂದರು.

ಉದ್ಯಮ ಸರಪಳಿಯಲ್ಲಿನ ಪ್ರತಿಯೊಬ್ಬರ ಮೇಲೂ ಪ್ರತಿಕೂಲ ಪರಿಣಾಮ

ಸರಕಾರದ ಸ್ವಂತ ಅಂದಾಜಿನಂತೆ ದಲಿತ ಸಮುದಾಯವೊಂದಕ್ಕೇ ಸೇರಿದ ಸುಮಾರು 3.5 ಲಕ್ಷ ಚರ್ಮ ಕುಶಲಕರ್ಮಿಗಳಿದ್ದಾರೆ. ರಾಜ್ಯದಲ್ಲೀಗ ಟ್ಯಾನಿಂಗ್ ಮತ್ತು ಚರ್ಮ ಹದಗೊಳಿಸುವುದರಲ್ಲಿ ತೊಡಗಿಸಿಕೊಂಡಿರುವ 91 ಫ್ಯಾಕ್ಟರಿಗಳಿವೆ. ಕಾಯ್ದೆಯು ಉದ್ಯಮ ಸರಪಳಿಯಲ್ಲಿರುವ ಪ್ರತಿಯೊಬ್ಬರ ಮೇಲೂ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ.

‘ನಾವು ನಮ್ಮ ವರದಿಯನ್ನು ಸಿದ್ಧಪಡಿಸುತ್ತಿದ್ದಾಗ ಬೆಂಗಳೂರಿನಲ್ಲಿಯ ಸುಮಾರು ಶೇ.30ರಷ್ಟು ಬೀಫ್ ಮಾರಾಟದ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಕಾಯ್ದೆಯು ಜಾನುವಾರು ವ್ಯಾಪಾರವನ್ನು ನಿಲ್ಲಿಸಿದೆ ಎಂದಲ್ಲ. ಅದು ರೈತರು ಮತ್ತು ವ್ಯಾಪಾರಿಗಳಿಗೆ ಜೀವನವನ್ನು ದುರ್ಭರವಾಗಿಸಿದೆ,ಆದರೆ ಬೀಫ್ ವ್ಯಾಪಾರವನ್ನು ಕ್ರಿಮಿನಲ್ ಉದ್ಯಮವನ್ನಾಗಿಸಿದೆ. ರಾಜಕೀಯ ಸಂಪರ್ಕಗಳು ಮತ್ತು ಕೃಪಾಕಟಾಕ್ಷವನ್ನು ಹೊಂದಿರುವರು ಮಾತ್ರ ಲಾಭ ಮಾಡಿಕೊಳ್ಳುತ್ತಿದ್ದಾರೆ’ಎಂದು ಸಿದ್ಧಾರ್ಥ ಜೋಶಿ ಹೇಳಿದರು.

ಒಂದೊಮ್ಮೆ 5,000 ಕಾರ್ಮಿಕರಿಗೆ ಉದ್ಯೋಗವನ್ನು ನೀಡಿದ್ದ ಟ್ಯಾನರಿ ರಸ್ತೆಯಲ್ಲಿನ ಬೆಂಗಳೂರು ಕಸಾಯಿಖಾನೆಯಲ್ಲಿ ಈಗ ಕೇವಲ 150-200 ಕಾರ್ಮಿಕರು ಉಳಿದಿದ್ದಾರೆ ಎಂದು ಕಸಾಯಿಗಳ ಸಂಘಟನೆ ಆಲ್ ಇಂಡಿಯಾ ಜಮೀಯತುಲ್ ಕುರೇಶಿಯ ಅಧ್ಯಕ್ಷ ಖಾಸಿಂ ಶೋಐಬ್ ಉರ್ ರಹಮಾನ್ ಕುರೇಶಿ ಹೇಳಿದರು.

‘ಗೋಹತ್ಯೆ ನಿಷೇಧಿಸಿರುವುದರಿಂದ ನಾವೀಗ ಬೀಫ್‌ನ್ನು ನೆರೆಯ ಕೇರಳ,ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಂದ ತರಿಸಿಕೊಳ್ಳುತ್ತಿದ್ದೇವೆ. ಅದನ್ನೂ ಈಗ ಅವರು ನಿಲ್ಲಿಸುತ್ತಿದ್ದಾರೆ ’ ಎಂದರು.

ಗೋಹತ್ಯೆ ನಿಷೇಧ ಕಾಯ್ದೆಯು ಬೀಫ್ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿಲ್ಲ,ಆದರೆ ಬೆಂಗಳೂರು ಮಹಾನಗರ ಪಾಲಿಕೆಯು ನೀಡುತ್ತಿರುವ ವ್ಯವಹಾರ ಪರವಾನಿಗೆಯಿಂದಾಗಿ ಇದರಲ್ಲಿಯೂ ಸಮಸ್ಯೆಗಳು ಉದ್ಭವಿಸಿವೆ. 2020 ಡಿಸೆಂಬರ್‌ವರೆಗೆ ಪರವಾನಿಗೆಯಲ್ಲಿ ‘ಮಾಂಸ,ಚಿಕನ್,ಮೀನು,ಹಂದಿಮಾಂಸ ಮತ್ತು ಬೀಫ್ ’ಎಂದು ಉಲ್ಲೇಖವಿರುತ್ತಿತ್ತು. ಕಾಯ್ದೆಯು ಜಾರಿಗೊಂಡ ಬಳಿಕ ಪರವಾನಿಗೆಗಳಲ್ಲಿ ಬೀಫ್ ಬದಲಿಗೆ ಎಮ್ಮೆ ಮಾಂಸ ಎಂದು ಸೇರಿಸಲಾಗಿದೆ. ಇದು ಬೀಫ್ ಮಾರಾಟದ ಅಂಗಡಿಗಳು ಅದನ್ನು ರಾಜ್ಯದ ಹೊರಗಿನಿಂದ ತರಿಸಿಕೊಂಡಿದ್ದರೂ ಅದರ ಮಾರಾಟವನ್ನು ಕಾನೂನುಬಾಹಿರವಾಗಿಸಿದೆ.

ಕಸಾಯಿಗಳು ಮತ್ತು ಮಾಂಸ ವ್ಯಾಪಾರಿಗಳ ಜೀವನೋಪಾಯಗಳನ್ನು ಕಿತ್ತುಕೊಳ್ಳಲು ಸಂಚು ನಡೆದಿರುವಂತಿದೆ ಎಂದು ಹೇಳಿದ ಖಾಸಿಂ ಕುರೇಶಿ,‘ಹಳ್ಳಿಕಾರ್ ಮತ್ತು ಅಮೃತಮಹಲ್ ತಳಿಗಳನ್ನು ಪೂಜಿಸಲಾಗುತ್ತದೆ ಮತ್ತು ಅವುಗಳ ಹತ್ಯೆಯ ಮೇಲೆ ನಿಷೇಧವನ್ನು ನಾವು ಬೆಂಬಲಿಸುತ್ತೇವೆ. ಆದರೆ ಯುರೋಪಿಯನ್ ಹಸುಗಳು ಎಂದಿನಿಂದ ಪವಿತ್ರ ಗೋವುಗಳಾದವು? ಇದು ನಮ್ಮ ಜೀವನೋಪಾಯವನ್ನು ನಾಶ ಮಾಡುವ ಸಂಚಲ್ಲದೆ ಬೇರೇನೂ ಅಲ್ಲ. ಕಾಯ್ದೆಯು ರೈತರು,ದಲಿತರು ಮತ್ತು ಬಡಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಿದೆ ಎನ್ನುವುದನ್ನು ಸರಕಾರವು ಅರ್ಥಮಾಡಿಕೊಂಡಿಲ್ಲ ಎಂದರು. ವ್ಯಾಪಾರಿಗಳು ಹೊರರಾಜ್ಯಗಳಿಂದ ಮಾಂಸವನ್ನು ತರಿಸಿಕೊಳ್ಳುತ್ತಿದ್ದರೂ ಅವರ ವಾಹನಗಳನ್ನು ತಡೆಯಲಾಗುತ್ತಿದೆ ಮತ್ತು ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

‘ಬಲಪಂಥೀಯ ಸಂಘಟನೆಗಳ ಸದಸ್ಯರು ನಮ್ಮ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುತ್ತಾರೆ,ಪರವಾನಿಗೆಗಳನ್ನು ಹರಿದುಹಾಕುತ್ತಾರೆ ಮತ್ತು ನಾವು ನಿಯಮಗಳನ್ನು ಉಲ್ಲಂಘಿಸಿದ್ದೇವೆ ಎಂದು ಆರೋಪಿಸುತ್ತಾರೆ. ಪೊಲೀಸರು ನಮ್ಮ ವಿರುದ್ಧ ಪ್ರಕರಣವನ್ನು ದಾಖಲಿಸುತ್ತಾರೆ ಮತ್ತು ನಾವು ನ್ಯಾಯಾಲಯಗಳಿಗೆ ಅಲೆದಾಡುವಂತಾಗಿದೆ. ಒಂದು ಪಕ್ಷದ ರಾಜಕೀಯ ಗಳಿಕೆಗಾಗಿ ರೈತರು,ನಾವು ಸಂಕಷ್ಟಗಳನ್ನು ಅನುಭವಿಸುತ್ತಿದ್ದೇವೆ ’ ಎಂದು ಕುರೇಶಿ ಹೇಳಿದರು. ಕಾಯ್ದೆಯನ್ನು ಪ್ರಶ್ನಿಸಿ ರೈತರು,ಸಾಮಾಜಿಕ ಹೋರಾಟಗಾರರು,ಮಾಂಸ ವ್ಯಾಪಾರಿಗಳು ಸೇರಿದಂತೆ ಹಲವರು ಕರ್ನಾಟಕ ಉಚ್ಚ ನ್ಯಾಯಾಲದಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

Writer - ಅನುಷಾ ರವಿ ಸೂದ್(theprint.in)

contributor

Editor - ಅನುಷಾ ರವಿ ಸೂದ್(theprint.in)

contributor

Similar News