ಸಿಂಗಾಪುರ: ಕೊರೋನ ಸೋಂಕಿನಿಂದ ಮೃತರಲ್ಲಿ 30% ಲಸಿಕೆ ಹಾಕಿಸಿಕೊಂಡವರು; ಸರಕಾರದ ಮಾಹಿತಿ

Update: 2022-01-10 18:29 GMT
ಸಾಂದರ್ಭಿಕ ಚಿತ್ರ

ಸಿಂಗಾಪುರ, ಜ.10: ಸಿಂಗಾಪುರದಲ್ಲಿ ಕಳೆದ ವರ್ಷ ದಾಖಲಾದ ಕೊರೋನ ಸೋಂಕಿಗೆ ಸಂಬಂಧಿಸಿದ ಸಾವಿನ ಪ್ರಕರಣಗಳಲ್ಲಿ 30%ದಷ್ಟು ವ್ಯಕ್ತಿಗಳು ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದವರು ಎಂದು ಆರೋಗ್ಯ ಸಚಿವ ಓಂಗ್ ಕೆ ಕುಂಗ್ ಸೋಮವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.

ಸಿಂಗಾಪುರದಲ್ಲಿ ಲಸಿಕೆ ಪಡೆಯದವರು ಅಲ್ಪಪ್ರಮಾಣದಲ್ಲಿದ್ದಾರೆ. ಆದರೂ, ಕಳೆದ ವರ್ಷ ಕೊರೋನ ಸೋಂಕಿನಿಂದ ಮೃತರಲ್ಲಿ ಲಸಿಕೆ ಪಡೆಯದವರ ಪ್ರಮಾಣ 70% ಆಗಿತ್ತು. ದೇಶದಲ್ಲಿ ಅರ್ಹ ವಯೋಮಾನದವರಲ್ಲಿ 90%ಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. 60ರಿಂದ 69 , 70 ಮತ್ತು ಅದಕ್ಕಿಂತ ಹೆಚ್ಚಿನ ವರ್ಷದ ಹಿರಿಯ ನಾಗರಿಕರಲ್ಲಿ ಕ್ರಮವಾಗಿ 96% ಮತ್ತು 95% ಜನ ಲಸಿಕೆ ಪಡೆದಿದ್ದಾರೆ ಎಂಬುದು ಸಂತೋಷದ ವಿಷಯವಾಗಿದೆ . 12ರಿಂದ 19 ವರ್ಷದ ವಿಭಾಗದಲ್ಲಿ 95% ಮಂದಿ ಪೂರ್ಣ ಪ್ರಮಾಣದ ಲಸಿಕೆ ಪಡೆದಿದ್ದಾರೆ. 5ರಿಂದ 11 ವರ್ಷದ ಮಕ್ಕಳಿಗೆ ಲಸಿಕಾಕರಣ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಈಗ 18 ವರ್ಷದ ಕೆಳಗಿನವರಿಗೆ ಪೈಝರ್- ಬಯೊಎನ್‌ಟೆಕ್/ಕೊಮಿರ್ನಟಿ ಲಸಿಕೆಯನ್ನು ಅನುಮೋದಿಸಲಾಗಿದೆ. ಇತರ ಲಸಿಕೆಗಳ ಲಭ್ಯತೆಯನ್ನೂ ನಿಕಟವಾಗಿ ಗಮನಿಸುತ್ತಿದ್ದೇವೆ ಎಂದು ಸಚಿವರು ಹೇಳಿದ್ದಾರೆ.

ಬೂಸ್ಟರ್ ಲಸಿಕೆ ಪಡೆಯಲೂ ಉತ್ತಮ ಸ್ಪಂದನೆ ಲಭಿಸಿದ್ದು ಸುಮಾರು 46% ಜನತೆ ಲಸಿಕೆ ಪಡೆದಿದ್ದಾರೆ. ಪೂರ್ಣ ಲಸಿಕಾಕರಣಕ್ಕೆ ಸಿಂಧುತ್ವದ ಅವಧಿಯನ್ನು 270 ದಿನಗಳೆಂದು ನಿಗದಿಗೊಳಿಸಲಾಗಿದೆ. ಮತ್ತಷ್ಟು ಬೂಸ್ಟರ್ ಡೋಸ್ ಅಗತ್ಯವಿದೆಯೇ ಎಂಬುದನ್ನು ಈಗಲೇ ಹೇಳಲಾಗದು ಎಂದವರು ಸಂಸತ್ತಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News