ಡಿ.ಕೆ.ಶಿವಕುಮಾರ್ ಕಲ್ಲು ಗುಂಡಿನ ಹಾಗೇ ಇದ್ದಾರೆ: ಸಿದ್ದರಾಮಯ್ಯ

Update: 2022-01-11 06:58 GMT
ಫೈಲ್ ಚಿತ್ರ

ರಾಮನಗರ: ''ನಿನ್ನೆ ಡಿ.ಕೆ ಶಿವಕುಮಾರ್ ಅವರ ಗಂಟಲು ದ್ರವ ಮಾದರಿ ತಗೊಂಡು ಬರಲು ಸರ್ಕಾರ ವೈದ್ಯಾಧಿಕಾರಿಯನ್ನು ಕಳುಹಿಸಿತ್ತು. ಬಹುಶಃ ಮಾದರಿ ಪರೀಕ್ಷೆ ಮಾಡಿ ಕೊರೋನ ಇದೆ ಎಂದು ಸುಳ್ಳು ವರದಿ ಕೊಡುವ ಯೋಚನೆ ಮಾಡಿಕೊಂಡಿದ್ದರೋ ಏನೋ. ಎರಡು ದಿನ ಬಿಸಿಲಿನಲ್ಲಿ ನಡೆದರೂ ಡಿ.ಕೆ ಶಿವಕುಮಾರ್ ಕಲ್ಲುಗುಂಡಿನ ಹಾಗೆ ಇದ್ದಾರೆ'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನಕಪುರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

''ಈ ಹಿಂದೆ ಬಳ್ಳಾರಿಯಲ್ಲಿ ಪಾದಯಾತ್ರೆ ಮಾಡಿದಾಗ ಕಡೇ ದಿನ ಐದು ಲಕ್ಷ ಜನ ಸೇರಿದ್ದರೂ. ಈಗಲೂ ಜನ ನಮ್ಮ ಪಾದಯಾತ್ರೆಗೆ ಸ್ವಯಂ ಪ್ರೇರಿತರಾಗಿ ಬರಲು ಆರಂಭ ಮಾಡಿದ್ದಾರೆ. ಇದರಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ. ಬಳ್ಳಾರಿ ಪಾದಯಾತ್ರೆ ನೆನಪಾದ್ರೆ ಬಸವರಾಜ ಬೊಮ್ಮಾಯಿ ಅವರಿಗೆ ರಾತ್ರಿ ನಿದ್ರೆ ಬರುತ್ತಿಲ್ಲ ಇರಬೇಕು. ನಮ್ಮ ಪಾದಯಾತ್ರೆ ತಡೆಯಲು ಸತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ನಾವು ಅವರ ಯಾವ ಷಡ್ಯಂತ್ರಗಳಿಗೂ ಮಣಿಯದೆ ಹನ್ನೊಂದು ದಿನಗಳ ಪಾದಯಾತ್ರೆ ಮಾಡಿಯೇ ಮಾಡುತ್ತೇವೆ'' ಎಂದರು.

''ನಮ್ಮ ಮೇಲೆ ಸರ್ಕಾರ ಕಾನೂನಿನ ಹಾದಿಯಲ್ಲಿ ಕ್ರಮಕೈಗೊಳ್ಳಲು ಹೊರಟರೆ, ನಾವೂ ಕಾನೂನಿನ ರೀತಿಯಲ್ಲೇ ಉತ್ತರ ಕೊಡುತ್ತೇವೆ. ಏನೇನು ಕೇಸ್ ದಾಖಲಿಸುತ್ತಾರೋ ದಾಖಲಿಸಲಿ, ನಾವೂ ಕಾನೂನು ಹೋರಾಟ ಮಾಡುತ್ತೇವೆ'' ಎಂದು ತಿಳಿಸಿದರು.

''ಕೊರೊನ ಬರೀ ನಮ್ಮ ರಾಜ್ಯದಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲಿ ಹೆಚ್ಚಾಗ್ತಾ ಇದೆ. ನಾವು ಪಾದಯಾತ್ರೆ ಮಾಡುತ್ತಿರೋದು ಕರ್ನಾಟಕದಲ್ಲಿ. ದೆಹಲಿಯಲ್ಲಿ ಕೊರೊನಾ ಕೇಸ್ ಹೆಚ್ಚಳ ಆಗುತ್ತಿದೆ, ಮಹಾರಾಷ್ಟ್ರದಲ್ಲಿ ಏರಿಕೆ ಆಗ್ತಿದೆ. ಹೀಗೆ ಕೊರೊನಾ ಎಲ್ಲಾ ಕಡೆ ಹೆಚ್ಚಾಗ್ತಲೇ ಇದೆ. ಕೊರೊನ ಸೋಂಕು ಹೆಚ್ಚಾಗುವುದಕ್ಕೂ ನಮ್ಮ ಪಾದಯಾತ್ರೆಗೂ ಸಂಬಂಧ ಇಲ್ಲ'' ಎಂದು ಸ್ಪಷ್ಟಪಡಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News