ಚುನಾವಣೆಗೂ ಮುನ್ನ ಬಿಜೆಪಿಗೆ ಭಾರೀ ಹಿನ್ನಡೆ:ಉತ್ತರಪ್ರದೇಶ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ

Update: 2022-01-11 09:32 GMT
ಸ್ವಾಮಿ ಪ್ರಸಾದ್ ಮೌರ್ಯ (Photo: Twitter/@SwamiPMaurya)

ಲಕ್ನೊ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಭಾರೀ ಹಿನ್ನಡೆಯಾಗಿದ್ದು, ರಾಜ್ಯ ಸಂಪುಟ ಸಚಿವ ಹಾಗೂ ಪಕ್ಷದ ಹಿರಿಯ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಮಂಗಳವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ

ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಮೌರ್ಯ ಅವರು ಸೇರ್ಪಡೆಯಾಗಿದ್ದಾರೆ.

"ದಲಿತರು, ಹಿಂದುಳಿದವರು, ರೈತರು, ನಿರುದ್ಯೋಗಿ ಯುವಕರು , ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಬಗ್ಗೆ ತೀವ್ರ ನಿರ್ಲಕ್ಷ್ಯ ಧೋರಣೆಯಿಂದಾಗಿ ನಾನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸಂಪುಟಕ್ಕೆ ರಾಜೀನಾಮೆ ನೀಡುತ್ತೇನೆ" ಎಂದು ಪಕ್ಷದ ಹಿರಿಯ ನಾಯಕ ಮೌರ್ಯ ತಮ್ಮ ರಾಜೀನಾಮೆ ಪತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ.

ಮೌರ್ಯ ಅವರು ಬಿಜೆಪಿಯ ಹಲವು ನಾಯಕರೊಂದಿಗೆ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಹಿರಿಯ ನಾಯಕರನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, "ಸಾಮಾಜಿಕ ನ್ಯಾಯ ಹಾಗೂ  ಸಮಾನತೆಗಾಗಿ ಹೋರಾಡಿದ ಜನಪ್ರಿಯ ನಾಯಕ ಸ್ವಾಮಿ ಪ್ರಸಾದ್ ಮೌರ್ಯಜಿ ಮತ್ತು  ಅವರೊಂದಿಗೆ ಸಮಾಜವಾದಿ ಪಕ್ಷಕ್ಕೆ ಬಂದ ಎಲ್ಲಾ ನಾಯಕರು, ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಆತ್ಮೀಯ ಸ್ವಾಗತ ಮತ್ತು ನಮಸ್ಕಾರಗಳು! 2022ರಲ್ಲಿ ಸಾಮಾಜಿಕ ನ್ಯಾಯದ ಕ್ರಾಂತಿಯಾಗಲಿದೆ~ ಬದಲಾವಣೆಯಾಗಲಿದೆ’’ ಎಂದು  ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಪ್ರಬಲ ಒಬಿಸಿ (ಇತರ ಹಿಂದುಳಿದ ವರ್ಗ) ನಾಯಕ ಹಾಗೂ ಹಲವು ಬಾರಿ  ಶಾಸಕರಾಗಿ ಆಯ್ಕೆಯಾಗಿರುವ ಮೌರ್ಯ ಅವರು ಮಾಯಾವತಿಯವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ತೊರೆದ ನಂತರ 2016 ರಲ್ಲಿ ಬಿಜೆಪಿ ಸೇರಿದ್ದರು.

ಮೌರ್ಯ ಅವರು ಪೂರ್ವ ಉತ್ತರ ಪ್ರದೇಶದ ಪದ್ರೌನಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ಪುತ್ರಿ ಸಂಘಮಿತ್ರಾ ಉತ್ತರಪ್ರದೇಶದ ಬಿಜೆಪಿ ಸಂಸದೆ ಯಾಗಿದ್ದಾರೆ.

ದೇಶದಲ್ಲಿ ರಾಜಕೀಯವಾಗಿ ಅತ್ಯಂತ ಪ್ರಮುಖ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಏಳು ಸುತ್ತುಗಳಲ್ಲಿ ಮತದಾನವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News