ವಸತಿ ಶಾಲೆಗಳನ್ನು ಬಂದ್ ಮಾಡುವ ನಿರ್ಧಾರ ಜಿಲ್ಲಾಧಿಕಾರಿಗಳ ವಿವೇಚನೆಗೆ: ಆರಗ ಜ್ಞಾನೇಂದ್ರ

Update: 2022-01-11 18:31 GMT
ಫೈಲ್ ಚಿತ್ರ-  ಆರಗ ಜ್ಞಾನೇಂದ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹಾಗೂ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಠಿಣ ನಿಯಮಗಳು ಜಾರಿಗೊಳಿಸಿ ರಾಜ್ಯ ಸರಕಾರ ನಿರ್ಧರಿಸಿದೆ. 

ಮಂಗಳವಾರ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ವರ್ಚುವಲ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಈ ಕುರಿತು ಮಾಹಿತಿ ನೀಡಿದರು. 

ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು ಈ ರೀತಿ ಇದೆ:

► ಕೋವಿಡ್ ಮುಂಜಾಗ್ರತೆ ಕ್ರಮವಾಗಿ ಜಾರಿಗೊಳಿಸುವ ಮಾರ್ಗಸೂಚಿಗಳನ್ನು ಜನವರಿ ಅಂತ್ಯದ ವರೆಗೆ ವಿಸ್ತರಿಸಲು ನಿರ್ಧರಿಸಲಾಯಿತು.

►ಹೋಂ ಐಸೋಲೇಷನ್ ನಲ್ಲಿರುವವರ ಬಗ್ಗೆ ಹೆಚ್ಚಿನ ನಿಗಾವಹಿಸುವುದು. 

► ಮಾಸ್ಕ್ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.

►ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಯತ್ತಿರುವ ಶಾಲೆ, ವಸತಿ ಶಾಲೆಗಳನ್ನು ಬಂದ್ ಮಾಡುವ ಬಗ್ಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ನಿರ್ಧರಿಸುವುದು.

►ಪ್ರತಿದಿನ ಒಂದೂವರೆ ಲಕ್ಷ ಕೋವಿಡ್ ಪರೀಕ್ಷೆ ನಡೆಸುವುದು. 

►ಸಭೆ, ಪ್ರತಿಭಟನೆಗಳು ನಡೆಸುವ ಬಗ್ಗೆ ಪೊಲೀಸರು ನಿಗಾ ವಹಿಸುವುದು, ಮಾರ್ಕೆಟ್ ಗಳಲ್ಲಿ ಹೆಚ್ಚಿನ ಜನ ಸೇರದಂತೆ ಕ್ರಮ ಕೈಗೊಳ್ಳುವುದು. 

►ಆಸ್ಪತ್ರೆಗಳಲ್ಲಿ ಮಕ್ಕಳ ವಾರ್ಡ್, ಬೆಡ್ ಗಳನ್ನು ಕಾಯ್ದಿರಿಸಿ ಕ್ರಮ ಕೈಗೊಳ್ಳುವುದು. 

► ಆಕ್ಸಿಜನ್, ಔಷಧ ಸಂಗ್ರಹಿಸಿಡುವುದು. 

► ಬೂಸ್ಟರ್ ಡೋಸ್ ಮತ್ತಷ್ಟು ಹೆಚ್ಚಿಸುವುದು.

► ವೈಕುಂಠ ಏಕಾದಶಿಯಂದು ದೇಗುಲಗಳಲ್ಲಿ ಜನಸಂದಣಿಗೆ ಅವಕಾಶವಿಲ್ಲ.

ವಾರಾಂತ್ಯ ಕರ್ಫ್ಯೂ ಮುಂದುವರಿಕೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಜ.14ರಂದು ಪ್ರಧಾನಿ ಸಭೆ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುವುದು.

ಗೃಹ ಸಚಿವ ಆರಗ ಜ್ಞಾನೇಂದ್ರ

ಅಕ್ಕ ಪಕ್ಕದ ರಾಜ್ಯಗಳ ಕೊರೋನ, ಒಮೈಕ್ರಾನ್ ಪ್ರಕರಣಗಳ ಸಂಖ್ಯೆ ಹಾಗೂ ಅಲ್ಲಿನ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸಿಎಂ ಬೊಮ್ಮಯಿ ತಜ್ಞರ ಜೊತೆ ಚರ್ಚೆ ನಡೆಸಿದ್ದಾರೆ. 

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಗೃಹ ಸಚಿವ ಆರಗ ಜ್ಞಾನೇಂದ್ರ, ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್ ಮತ್ತು ಇತರ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News