ಪೋಷಕರ ಸಭೆಯಲ್ಲಿ ಸ್ಕಾರ್ಫ್‍ಗೆ ವಿರೋಧ ವ್ಯಕ್ತವಾಗಿಲ್ಲ: ಶಾಸಕ ಟಿ.ಡಿ.ರಾಜೇಗೌಡ

Update: 2022-01-11 12:58 GMT
ಶಾಸಕ ಟಿ.ಡಿ.ರಾಜೇಗೌಡ

ಚಿಕ್ಕಮಗಳೂರು, ಜ.11: ಜಿಲ್ಲೆಯ ಕೊಪ್ಪ ಪಟ್ಟಣದ ಪದವಿ ಕಾಲೇಜಿನಲ್ಲಿ ಸ್ಕಾರ್ಫ್ ಹಾಗೂ ಕೇಸರಿ ಶಾಲು ಸಂಬಂಧದ ವಿವಾದವನ್ನು ಪೋಷಕರ ಸಭೆ ನಡೆಸಿ ಬಗೆಹರಿಸಲಾಗಿದೆ. ಕಾಲೇಜು ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಸರಕಾರದ ಆದೇಶವನ್ನು ಪಾಲಿಸಬೇಕು. ಡ್ರೆಸ್‍ಕೋಡ್ ಉಲ್ಲಂಘಿಸಿದ ವಿದ್ಯಾರ್ಥಿಗಳಿಗೆ ಟಿಸಿ ಕೊಟ್ಟು ಕಳುಹಿಸಲು ಸೂಚಿಸಲಾಗಿದೆ ಎಂದು ಶೃಂಗೇರಿ ವಿಧಾನಸಭೆ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದ್ದಾರೆ.

ಇತ್ತೀಚೆಗೆ ಕೊಪ್ಪ ಪಟ್ಟಣದ ಪದವಿ ಕಾಲೇಜಿನಲ್ಲಿ ಉದ್ಭವಿಸಿದ್ದ ಕೇಸರಿ ಶಾಲು-ಸ್ಕಾರ್ಫ್ ವಿವಾದ ಸಂಬಂಧ ಮಂಗಳವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು,  ಶೃಂಗೇರಿ ಕ್ಷೇತ್ರದಲ್ಲಿ ಎಲ್ಲ ಸಮುದಾಯದ ಜನರು ಪರಸ್ಪರ ಅನ್ಯೋನತೆಯಿಂದ ಬದುಕುತ್ತಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು ಇಲ್ಲಿನ ಸೌಹಾರ್ದವನ್ನು ಹದಗೆಡಿಸುವ ಕೆಲಸಕ್ಕೆ ಪದೇ ಪದೇ ಕೈ ಹಾಕುತ್ತಾ ಅದರಲ್ಲಿ ವಿಫರಾಗುತ್ತಿದ್ದಾರೆ ಎಂದರು.

ಮುಸ್ಲಿಂ ಸಮುದಾಯದ ಕೆಲವೇ ಕೆಲ ವಿದ್ಯಾರ್ಥಿನಿಯರು ಕೊಪ್ಪ ಪಟ್ಟಣದ ಪದವಿ ಕಾಲೇಜಿಗೆ ಸಮವಸ್ತ್ರದೊಂದಿಗೆ ಸ್ಕಾರ್ಫ್ ಧರಿಸಿ ಬರುತ್ತಿದ್ದಾರೆ. ಇದಕ್ಕೆ ಹಿಂದೆಂದೂ ವಿರೋಧ ಇರಲಿಲ್ಲ. ಆದರೆ ಕಳೆದ ವರ್ಷ ಇದೇ ವಿಚಾರಕ್ಕೆ ಕೆಲ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾಗ ಪೋಷಕರ ಸಭೆ ನಡೆಸಿ ಸಮಸ್ಯೆಯನ್ನು ಪರಿಹರಿಸಲಾಗಿತ್ತು.

ಸದ್ಯ ಇದೇ ವಿಚಾರಕ್ಕೆ ಕೆಲ ವಿದ್ಯಾರ್ಥಿಗಳು ತಗಾದೆ ತೆಗೆದು ಕಾಲೇಜಿನಲ್ಲಿ ಗೊಂದಲ ಸೃಷ್ಟಿಸಿದ್ದರು. ಈ ಸಂಬಂಧ ಜ.10ರಂದು ನನ್ನ ಅಧ್ಯಕ್ಷತೆಯಲ್ಲೇ ಪೋಷಕರ ಸಭೆ ನಡೆಸಿದ್ದು, ಸಭೆಯಲ್ಲಿ ಇಬ್ಬರು ಪೋಷಕರನ್ನು ಹೊರತುಪಡಿಸಿ ಬಾಕಿ ಎಲ್ಲರೂ ಸ್ಕಾರ್ಫ್‍ಗೆ ಧರಿಸುವುದರಿಂದ ಯಾವ ಸಮಸ್ಯೆಯೂ ಇಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೇಜಿನ ಡ್ರೆಸ್‍ಕೋಡ್ ಅನ್ನು ಎಲ್ಲ ವಿದ್ಯಾರ್ಥಿಗಳು ಪಾಲಿಸಬೇಕು ಎಂದು ಸೂಚಿಸಿದ್ದು, ಸ್ಕಾರ್ಫ್ ಸಂಬಂಧ ಕಾಲೇಜು ಆವರಣದಲ್ಲಿ ರಾಜಕೀಯ ಮಾಡುವ ವಿದ್ಯಾರ್ಥಿಗಳ ವಿರುದ್ಧ ಕ್ರಮವಹಿಸಲೂ ಸೂಚಿಸಲಾಗಿದೆ. ಅಂತಹ ವಿದ್ಯಾರ್ಥಿಗಳಿಗೆ ಟಿಸಿ ಕೊಟ್ಟು ಕಳುಹಿಸಲಾಗುವುದು ಎಂದರು.

ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಪೈಕಿ ಪ್ರತೀ ಸಮುದಾಯದವರು ತಮ್ಮದೇಯಾದ ಸಂಪ್ರದಾಯ ಹೊಂದಿರುತ್ತಾರೆ. ಹಿಂದುಗಳಾಗಿದ್ದವರು ಹಣೆಗೆ ನಾಮ, ವಿಭೂತಿ, ತಿಲಕವಿಟ್ಟು ಬರುತ್ತಾರೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಬರುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಇದು ಸರಿಯಲ್ಲ ಎನ್ನುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ವಿಷಯವಾಗಿದೆ. ಮುಸ್ಲಿಂ ಸಮುದಾಯದ ಕಾಲೇಜು ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಬರುವುದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ಸಂಪ್ರದಾಯವಾಗಿದ್ದು, ಕಾಲೇಜು ಡ್ರೆಸ್‍ಕೋಡ್ ಆಗಿ ಬೆಳೆದು ಬಂದಿದೆ. ಇದನ್ನು ದಿಢೀರನೆ ಬೇಡ ಎನ್ನುವುದು ಸಮುದಾಯದವರ ಭಾವನೆಗಳಿಗೆ ನೋವುಂಟು ಮಾಡಿದಂತಾಗಲಿದೆ. ಈ ಕಾರಣಕ್ಕೆ ಪೋಷಕರ ಸಭೆಯಲ್ಲಿ ಈ ಸಂಬಂಧ ಒಮ್ಮತದ ತೀರ್ಮಾನ ಕೈಗೊಂಡಿದ್ದು, ಸ್ಕಾರ್ಫ್ ಸಂಬಂಧ ವಿನಾಕಾರಣ ಗೊಂದಲ ಸೃಷ್ಟಿಸಿ ಗೊಂದಲ ಸೃಷ್ಟಿಸುವವರ ವಿರುದ್ಧ ಶಿಸ್ತುಕ್ರಮ ಅನಿವಾರ್ಯವಾಗಲಿದೆ ಎಂದರು.

ಕೆಲ ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸಿ ಬಂದಲ್ಲಿ ನಾವು ಕೇಸರಿ ಶಾಲಿನೊಂದಿಗೆ ಕಾಲೇಜಿಗೆ ಬರುತ್ತೇವೆ ಎಂದು ಕಾಲೇಜು ಆಡಳಿತಕ್ಕೆ ಬೆದರಿಕೆಯೊಡ್ಡಿದ್ದರು. ಕೇಸರಿ ಶಾಲು ಡ್ರೆಸ್‍ಕೋಡ್ ಅಲ್ಲ. ಇದಕ್ಕೆ ಅವಕಾಶ ನೀಡಿದರೇ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಕೆಂಪು ಶಾಲು, ನೀಲಿ ಶಾಲು, ಹಸಿರು ಶಾಲು ಹಾಕಿಕೊಂಡು ಬರುವುದಾಗಿ ಕೇಳುತ್ತಾರೆ. ಆಗ ಕಾಲೇಜು ಶಿಕ್ಷಣ ಸಂಸ್ಥೆಯಾಗಿ ಉಳಿಯಲ್ಲ. ಇದನ್ನು ಎಲ್ಲ ವಿದ್ಯಾರ್ಥಿಗಳು, ಪೋಷಕರು ಅರ್ಥ ಮಾಡಿಕೊಳ್ಳಬೇಕು. ಕಾಲೇಜಿನ ಒಳಗೆ ವಿದ್ಯಾರ್ಥಿಗಳು ಯಾವುದೇ ರಾಜಕೀಯ ನಡೆಸದೇ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು. ಶಿಕ್ಷಣದ ಬಳಿಕ ತಮಗಿಷ್ಟ ಬಂದ ಪಕ್ಷ, ಸಂಘಟನೆ ಸೇರಿಕೊಳ್ಳುವುದು ಅವರ ಹಕ್ಕಾಗಿದೆ ಎಂದ ಅವರು, ಸರಕಾರದ ಡ್ರೆಸ್‍ಕೋಡ್ ಸಂಬಂಧ ಯಾರೂ ತಕರಾರು ಮಾಡುವಂತಿಲ್ಲ ಎಂಬುದನ್ನು ಪೋಷಕರ ಸಭೆಯಲ್ಲಿ ತಿಳಿ ಹೇಳಿದ್ದು, ಇದನ್ನು ಉಲ್ಲಂಘಿಸಿದ ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮಕೈಗೊಳ್ಳುವ ಬಗ್ಗೆಯೂ ಪೋಷಕರ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ ಎಂದರು.

ಪದವಿ ಕಾಲೇಜಿನಂತೆ ಪಿಯುಸಿ ಕಾಲೇಜಿನಲ್ಲೂ ಈ ವಿವಾದ ನಡೆದಿರುವ ಬಗ್ಗೆ ತನಗೆ ಮಾಹಿತಿ ಇಲ್ಲ. ಈ ಸಂಬಂಧ ಮಾಹಿತಿ ಪಡೆದು ಅಗತ್ಯ ಕ್ರಮವಹಿಸಲಾಗುವುದು. ಕಾಲೇಜು ಸಮವಸ್ತ್ರದ ವಿಚಾರ ಸಂಬಂಧ ಕ್ಷೇತ್ರ ವ್ಯಾಪ್ತಿಯಲ್ಲಿನ ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸವನ್ನು ಯಾರೂ ಮಾಡಬಾರದು. ಕಾಲೇಜಿನ ಶಿಸ್ತು ಸಮಿತಿಯವರು ಇಂತಹ ಘಟನೆಗಳನ್ನು ನಿಯಂತ್ರಿಸಬೇಕು ಎಂದು ಇದೇ ವೇಳೆ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಶಿಕ್ಷಣ ಸಂಸ್ಥೆಯೊಳಗೆ ರಾಜಕೀಯ ಸರಿಯಲ್ಲ. ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರ ಇಂತಹ ಘಟನೆಗಳಿಗೆ ಕೆಲವರು ದುರಾಸೆಯಿಂದ ಕುಮ್ಮಕ್ಕು ನೀಡುತ್ತಿದ್ದಾರೆ. ಕಾಲೇಜಿನ ಒಳಗಿನವರೇ ಇಂತಹ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿರುವವರ ಬಗ್ಗೆ ಮಾಹಿತಿ ಇದ್ದು, ಈ ಸಂಬಂಧ ಅಗತ್ಯ ಕ್ರಮವಹಿಸಲಾಗುವುದು. ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯ ಹೊರತುಪಡಿಸಿ ಯಾವುದೇ ಧರ್ಮದ ಧಾರ್ಮಿಕ ಬೋಧನೆಗಳಿಗೂ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದ್ದು, ಇದಕ್ಕೆ ಅವಕಾಶ ನೀಡಿದರೇ ಕ್ರಮಕೈಗೊಳ್ಳುವು ಎಚ್ಚರಿಕೆಯನ್ನೂ ನೀಡಿದ್ದೇನೆ. ಕಾಲೇಜಿನಲ್ಲಿ ವಿವಾದ ಸೃಷ್ಟಿಸಲು ಕೆಲವರು ಪ್ರಚೋಧನೆ ನೀಡುತ್ತಿದ್ದಾರೆ. ಪೊಲೀಸರು ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮವಹಿಸಬೇಕು.

- ಟಿ.ಡಿ.ರಾಜೇಗೌಡ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News