ಹಾಸನ ಜಿಲ್ಲೆಯ ಗ್ರಾಮಗಳಿಗೆ ರಸ್ತೆ ನಿರ್ಮಾಣಕ್ಕೆ ಸರ್ವೇ ನಡೆಸಲು ಹೈಕೋರ್ಟ್ ನಿರ್ದೇಶನ

Update: 2022-01-11 13:35 GMT

ಬೆಂಗಳೂರು, ಜ.11: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾನಬಾಳು, ಅವರೇಕಾಡು ಮತ್ತು ಡೋನಹಳ್ಳಿ ಗ್ರಾಮಗಳಿಗೆ ರಸ್ತೆ ನಿರ್ಮಾಣದ ಅಗತ್ಯಕ್ಕೆ ಸಂಬಂಧಿಸಿದಂತೆ ಸರ್ವೇ ಕಾರ್ಯ ನಡೆಸಿ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಹಲವು ದಶಕಗಳಿಂದಲೂ ಸಕಲೇಶಪುರ ತಾಲೂಕಿನ ಈ ಮೂರು ಗ್ರಾಮಗಳಿಗೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಿಲ್ಲ ಎಂದು ಆರೋಪಿಸಿ ಎ.ಸಿ.ಅಜಯ್ ಸೇರಿ 12 ಗ್ರಾಮಸ್ಥರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್‍ನಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಸಕಲೇಶಪುರ ತಾಲೂಕಿನ ಈ ಗ್ರಾಮಗಳಿಗೆ ರಸ್ತೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಗರ್ಭಿಣಿಯರು, ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರೈತರು ತಮ್ಮ ಉತ್ಪನ್ನಗಳನ್ನು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರಕ್ಕೆ ಕೊಂಡೊಯ್ಯಲು ಕಷ್ಟವಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಸ್ತೆ ಒದಗಿಸುವುದು ಸರಕಾರದ ಜವಾಬ್ದಾರಿ. ಸಂಬಂಧಪಟ್ಟ ಪ್ರಾಧಿಕಾರವು ಅರ್ಜಿದಾರರ ಗ್ರಾಮಗಳಿಗೆ ರಸ್ತೆ ಅಗತ್ಯವಿರುವ ಬಗ್ಗೆ ತಿಳಿಯಲು ಸರ್ವೇ ನಡೆಸಬೇಕು. ಒಂದೊಮ್ಮೆ, ರಸ್ತೆ ನಿರ್ಮಾಣ ಅಗತ್ಯವಿದೆ ಎಂದು ಕಂಡುಬಂದರೆ, ತಕ್ಷಣವೇ ಕಾಮಗಾರಿ ಆರಂಭಿಸಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News