ರಾಜ್ಯದಲ್ಲಿ ತಿಂಗಳ ಅಂತ್ಯದ ವರೆಗೆ ಕೋವಿಡ್ ಮಾರ್ಗಸೂಚಿ ವಿಸ್ತರಣೆಗೆ ನಿರ್ಧಾರ

Update: 2022-01-11 18:09 GMT

ಬೆಂಗಳೂರು, ಜ.11: ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಿಸುವ ಸಂಬಂಧ ಈಗಾಗಲೆ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಜನವರಿ ತಿಂಗಳ ಅಂತ್ಯದವರೆಗೆ ವಿಸ್ತರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕೋವಿಡ್ ಸೋಂಕಿತರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ನಿವಾಸದಿಂದ ಕೋವಿಡ್ ಸ್ಥಿತಿಗತಿಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ಮತ್ತು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರ ಜೊತೆ ವರ್ಚುಯಲ್ ಸಭೆ ನಡೆಸಿದರು.

ಅದರಂತೆ, ಕೊವಿಡ್ ಮಾರ್ಗಸೂಚಿ ವಿಸ್ತರಣೆ ಮಾಡಲಾಗಿದೆ. ಈಗ ಜಾರಿಯಲ್ಲಿ ಇರುವ ಕೊರೊನಾ ಮಾರ್ಗಸೂಚಿ ಜನವರಿ ತಿಂಗಳ ಅಂತ್ಯದವರೆಗೆ ಮುಂದುವರಿಯಲಿದೆ. ವೀಕೆಂಡ್ ಕರ್ಫ್ಯೂ ಬಗ್ಗೆ ಗುರುವಾರದ ಬಳಿಕ ನಿರ್ಧಾರ ಮಾಡಲಾಗುವುದು. ಪ್ರಧಾನಿ ಮೋದಿ ಸಭೆ ಬಳಿಕ ಮತ್ತೆ ಸಿಎಂ ಪ್ರತ್ಯೇಕ ಸಭೆ ನಡೆಸಿ, ಸಭೆಯಲ್ಲಿ ಚರ್ಚಿಸಿ ವೀಕೆಂಡ್ ಕರ್ಫ್ಯೂ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ನಾಳೆಯಿಂದಲೇ ಹೊಸ ನಿಯಮ ಜಾರಿ

ಶಾಲೆ ಮುಚ್ಚುವ ಅಧಿಕಾರ ಜಿಲ್ಲಾಧಿಕಾರಿಗೆ: ಶಾಲಾ ಮಕ್ಕಳಲ್ಲಿ ಕೋವಿಡ್ ಹೆಚ್ಚುತ್ತಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪ್ರಕರಣಗಳನ್ನು ಆಧರಿಸಿ ಬಿಇಓ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ವರದಿಯನ್ನು ಆಧರಿಸಿ, ಶಾಲೆಗಳನ್ನು ಮುಚ್ಚುವ ಕುರಿತು ತೀರ್ಮಾನ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಗೃಹ ಸಚಿವ ಆರಗ ಜ್ಞಾನೇಂದ್ರ, ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್ ಮತ್ತು ಇತರ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News