ನ್ಯಾಯಾಂಗ ನಿಂದನೆ ಕಾನೂನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

Update: 2022-01-11 17:20 GMT

ಬೆಂಗಳೂರು, ಜ.11:  ನ್ಯಾಯಾಂಗ ನಿಂದನೆ ಕಾಯ್ದೆ–1971ರ ಸೆಕ್ಷನ್ 2(ಸಿ)(ಐ)ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹಿರಿಯ ಪತ್ರಕರ್ತರಾದ ಎನ್. ರಾಮ್, ಕೃಷ್ಣಪ್ರಸಾದ್, ಕೇಂದ್ರದ ಮಾಜಿ ಸಚಿವ ಅರುಣ್ ಶೌರಿ ಮತ್ತು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿಕೆ ಮಾಡಿದೆ. 

ಈ ಸಂಬಂಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ಮಂಗಳವಾರ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು. 

ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 2(ಸಿ) (ಐ) ಸಂವಿಧಾನದ 14 ಮತ್ತು 19ನೆ ವಿಧಿಗಳಿಗೆ ವಿರುದ್ಧವಾಗಿದೆ. ಸಂವಿಧಾನದ 19ನೇ ವಿಧಿಯ (1)(ಎ) ಉಪ ವಿಧಿಯ ಅಡಿಯಲ್ಲಿ ದತ್ತವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 2(ಸಿ)(ಐ) ಉಲ್ಲಂಘಿಸುತ್ತದೆ. ಸಂವಿಧಾನದ ವಿಧಿ 19(2)ರ ವ್ಯಾಪ್ತಿಗೂ ಸೇರುವುದಿಲ್ಲ. ನ್ಯಾಯಾಂಗವನ್ನು ನಿಂದಿಸಿದ ಆರೋಪವು ವಸಾಹತುಶಾಹಿ ಕಲ್ಪನೆಯಾಗಿದೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 2(ಸಿ)(ಐ)ಗೆ ಸಮಗ್ರವಾಗಿ ನಿಯಮಗಳನ್ನು ರಚಿಸಬೇಕು. ಸಹಜ ನ್ಯಾಯ ತತ್ವಗಳ ಉಲ್ಲಂಘನೆ ಆಗದಂತೆ ಹಾಗೂ ಯಾವುದೇ ನ್ಯಾಯಾಧೀಶರು ಸ್ವೇಚ್ಛಾಚಾರದಿಂದ ಈ ಅಧಿಕಾರವನ್ನು ಬಳಸಲು ಅವಕಾಶವಾಗದಂತೆ ನಿಯಮಗಳನ್ನು ರೂಪಸಿಬೇಕಿದೆ. ಈ ಸೆಕ್ಷನ್ ಅನ್ನು ಸಂವಿಧಾನಕ್ಕೆ ವಿರುದ್ಧವಾದುದು ಎಂದು ಘೋಷಿಸಬೇಕು. ಉನ್ನತ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ನಡೆಸುವಾಗ ಸಹಜ ನ್ಯಾಯ ತತ್ವಗಳ ಪಾಲನೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲೂ ನಿಯಮಗಳನ್ನು ರಚಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News