ಉ.ಪ್ರದೇಶದಲ್ಲಿ ಬಿಜೆಪಿಗೆ ಆಘಾತದ ಮೇಲೆ ಆಘಾತ: ಸಚಿವ ಹುದ್ದೆ ತೊರೆದ ಇನ್ನೋರ್ವ ಒಬಿಸಿ ನಾಯಕ ದಾರಾಸಿಂಗ್ ಚೌಹಾಣ್

Update: 2022-01-12 18:28 GMT

ಲಕ್ನೋ,ಜ.12: ವಿಧಾನಸಭಾ ಚುನಾವಣೆಗಳು ಸನ್ನಿಹಿತವಾಗಿರುವ ರಾಜಕೀಯವಾಗಿ ನಿರ್ಣಾಯಕ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೇರಲು ಹವಣಿಸುತ್ತಿರುವ ಬಿಜೆಪಿಗೆ ಆಘಾತಗಳ ಮೇಲೆ ಆಘಾತಗಳು ಎದುರಾಗುತ್ತಿವೆ. ಸೋಮವಾರ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಚಿವರಾಗಿದ್ದ ಸ್ವಾಮಿ ಪ್ರಸಾದ ಮೌರ್ಯ ಮತ್ತು ಇತರ ನಾಲ್ವರು ಶಾಸಕರಿಂದ ಆರಂಭಗೊಂಡಿದ್ದ ಸರಣಿ ರಾಜೀನಾಮೆ ಪರ್ವ ಮಂಗಳವಾರವೂ ಮುಂದುವರಿದಿದ್ದು,ಇನ್ನೋರ್ವ ಸಚಿವ ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಪ್ರಭಾವಿ ನಾಯಕ ದಾರಾಸಿಂಗ್ ಚೌಹಾಣ ಅವರು ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ರಾಜೀನಾಮೆ ನೀಡಿರುವ ಎಲ್ಲ ಆರೂ ನಾಯಕರು ಅಖಿಲೇಸ ಯಾದವ್ ಅವರ ಸಮಾಜವಾದಿ ಪಕ್ಷವನ್ನು ಸೇರಲು ಸಜ್ಜಾಗಿದ್ದಾರೆ ಎಒದು ವರದಿಯಾಗಿದೆ.

‘ನಾನು ಬದ್ಧತೆಯಿಂದ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ಆದರೆ ಹಿಂದುಳಿದವರು,ಶೋಷಿತ ವರ್ಗಗಳು,ದಲಿತರು,ರೈತರು ಮತ್ತು ನಿರುದ್ಯೋಗಿ ಯುವಕರತ್ತ ಈ ಸರಕಾರದ ದಮನಕಾರಿ ನಿಲುವು ಹಾಗೂ ಹಿಂದುಳಿದವರು ಮತ್ತು ದಲಿತರಿಗೆ ಮೀಸಲಾತಿಯ ನಿರ್ಲಕ್ಷ ನನಗೆ ನೋವನ್ನುಂಟು ಮಾಡಿದೆ ’ ಎಂದು ಚೌಹಾಣ ತನ್ನ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. ಸ್ವಾಮಿ ಪ್ರಸಾದ ಮೌರ್ಯ ಅವರೂ ತನ್ನ ರಾಜೀನಾಮೆ ಪತ್ರದಲ್ಲಿ ಹೆಚ್ಚುಕಡಿಮೆ ಇವೇ ಪದಗಳನ್ನು ಬಳಸಿದ್ದರು.

ತನ್ನ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ಚೌಹಾಣ್‌ರನ್ನು ಟ್ವೀಟ್‌ನಲ್ಲಿ ಆಗ್ರಹಿಸಿರುವ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು,‘ಕುಟುಂಬದ ಯಾವುದೇ ಸದಸ್ಯ ದಾರಿ ತಪ್ಪಿದರೆ ಅದು ಅತ್ಯಂತ ದುಃಖಕರವಾಗುತ್ತದೆ. ದಯವಿಟ್ಟು ಮುಳುಗುತ್ತಿರುವ ನೌಕೆಯನ್ನು ಹತ್ತಬೇಡಿ,ಇಲ್ಲದಿದ್ದರೆ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದಷ್ಟೇ ನಾನು ನಿರ್ಗಮಿಸುತ್ತಿರುವ ನಾಯಕರನ್ನು ಕೋರಿಕೊಳ್ಳಲು ಸಾಧ್ಯ. ಸೋದರ ದಾರಾಸಿಂಗ್,ದಯವಿಟ್ಟು ನಿಮ್ಮ ನಿರ್ಧಾರವನ್ನು ಪುನರ್‌ಪರಿಶೀಲಿಸಿ ’ಎಂದು ಬರೆದಿದ್ದಾರೆ. ಅವರು ಸ್ವಾಮಿ ಪ್ರಸಾದ್ ಮೌರ್ಯರಿಗೂ ಇದೇ ರೀತಿ ಮನವಿಯನ್ನು ಮಾಡಿಕೊಂಡಿದ್ದರು.

ಅಖಿಲೇಶ್ ಯಾದವ್ ಅವರು ಪಕ್ಷಕ್ಕೆ ಮುಖ್ಯ ಸವಾಲಿಗನಾಗಿರುವ ಮತ್ತು ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕವಾಗಿರುವ ಚುನಾವಣೆಗೆ ಮುನ್ನ ಈ ಸರಣಿ ನಿರ್ಗಮನಗಳು ಬಿಜೆಪಿಯ ಒಬಿಸಿ ನಾಯಕತ್ವಕ್ಕೆ ರಂಧ್ರ ಕೊರೆಯುತ್ತಿವೆ.

ಪೂರ್ವ ಉ.ಪ್ರದೇಶದ ಪ್ರಭಾವಿ ನಾಯಕರಾಗಿರುವ ಚೌಹಾಣ್ 2015ರಲ್ಲಿ ಮಾಯಾವತಿಯವರ ಬಿಎಸ್‌ಪಿಯನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅವರು 2009ರಿಂದ 2014ರವರೆಗೆ ಬಿಎಸ್‌ಪಿ ಸಂಸದರಾಗಿದ್ದರು. ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಅವರನ್ನು ಪಕ್ಷದ ಒಬಿಸಿ ಘಟಕದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿತ್ತು.

ಸೋಮವಾರ ಸ್ವಾಮಿ ಪ್ರಸಾದ ಮೌರ್ಯ ಅವರ ರಾಜೀನಾಮೆ ಬಿಜೆಪಿಗೆ ಮೊದಲ ಆಘಾತವನ್ನು ನೀಡಿದ್ದು,ಅವರ ಹಿಂದೆಯೇ ಬಿಜೆಪಿ ಶಾಸಕರಾದ ರೋಶನಲಾಲ ವರ್ಮಾ,ಬೃಜೇಶ ಪ್ರಜಾಪತಿ,ಭಗವತಿ ಸಾಗರ ಮತ್ತು ವಿನಯ ಶಾಕ್ಯ ಅವರು ಪಕ್ಷವನ್ನು ತೊರೆದಿದ್ದರು.

ವ್ಯೊಹಾತ್ಮಕವಾಗಿ ಮುಖ್ಯರಾಗಿರುವ ಒಬಿಸಿ ನಾಯಕರ ನಿರ್ಗಮನಗಳಿಂದ ದಿಗ್ಭ್ರಾಂತಗೊಂಡಿರುವ ಬಿಜೆಪಿ ನಾಯಕತ್ವವು ತಮ್ಮ ನಿರ್ಧಾರವನ್ನು ಬದಲಿಸುವಂತೆ ಅವರನ್ನು ಓಲೈಸುವ ಹೊಣೆಯನ್ನು ಕೇಶವ್ ಪ್ರಸಾದ್ ಮೌರ್ಯ ಅವರ ಮೇಲೆ ಹೊರಿಸಿದೆ.

ಬಿಜೆಪಿಯಿಂದ ನಿರ್ಗಮಿಸಿರುವ ಈ ನಾಯಕರು ಕಳೆದ ವರ್ಷ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಬಂಡೆದ್ದು,ಅವರ ಕಾರ್ಯವೈಖರಿ ಮತ್ತು ಅವರ ದುರಹಂಕಾರದ ವಿರುದ್ಧ ನಾಯಕತ್ವಕ್ಕೆ ದೂರು ಸಲ್ಲಿಸಿದ್ದ ಗುಂಪಿನ ಭಾಗವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News