ತನ್ನ ವೈಫಲ್ಯ ಮುಚ್ಚಿಕೊಳ್ಳಲು ಮೇಕೆದಾಟು ವಿಚಾರದಲ್ಲಿ ಸಚಿವ ಕಾರಜೋಳರಿಂದ ಗೊಂದಲ ಸೃಷ್ಟಿ: ಎಂ.ಬಿ.ಪಾಟೀಲ್ ಆರೋಪ

Update: 2022-01-13 04:00 GMT

ಬೆಂಗಳೂರು, ಜ. 12: `ರಾಜ್ಯದ ಮಹತ್ವಕಾಂಕ್ಷೆಯ `ಮೇಕೆದಾಟು ಯೋಜನೆ'ಯ ಡಿಪಿಆರ್ ಅನ್ನು ಕಾಂಗ್ರೆಸ್ ನೇತೃತ್ವದ ಸರಕಾರದ ಅವಧಿಯಲ್ಲೇ ಸಿದ್ಧ ಮಾಡಲಾಗಿತ್ತು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗ ಕೇಂದ್ರ ಸರಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಯಾವುದೇ ವಿಳಂಬ ಮಾಡದೆ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ' ಎಂದು ಅಂದಿನ ಜಲಸಂಪನ್ಮೂಲ ಸಚಿವರೂ ಆಗಿದ್ದ ಶಾಸಕ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಯೋಜನೆಯ ಡಿಪಿಆರ್ ಸಿದ್ದಪಡಿಸಿದ್ದು ಸೇರಿದಂತೆ ಕಾಂಗ್ರೆಸ್ ಹಾಗೂ ಮೈತ್ರಿ ಸರಕಾರದ ಅವಧಿಯಲ್ಲಿ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಮಾಡಿದ ಎಲ್ಲ ಕಾರ್ಯಗಳ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದರು. `ಆಡಳಿತಾರೂಢ ಬಿಜೆಪಿ ಸರಕಾರ ಮೇಕೆದಾಟು ಯೋಜನೆ `ಡಿಪಿಆರ್' ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. 2019ರ ಜನವರಿ 18 ರಂದು ಕೇಂದ್ರಕ್ಕೆ ಡಿಪಿಆರ್ ಸಲ್ಲಿಸಲಾಗಿತ್ತು' ಎಂದು ತಿಳಿಸಿದರು.

`ಆ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ 9,600 ಕೋಟಿ ರೂ.ಅಂದಾಜು ವೆಚ್ಚದ ಡಿಪಿಆರ್ ಅನ್ನು ಸಲ್ಲಿಸಿದ್ದೆವು. ಎಚ್.ಡಿ.ಕುಮಾರಸ್ವಾಮಿ ಅವರು ಡಿಪಿಆರ್ ಮಾಡಿದ್ದು ನಾವೇ ಎಂದು ಹೇಳುತ್ತಾರೆ. ಆದರೆ, ಪರಿಷ್ಕೃತ ಡಿಪಿಆರ್ ಮಾಡಿದ್ದು ಆಗಿನ ಜನಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್, 18 ದಿನದಲ್ಲಿ ಪರಿಷ್ಕೃತ ಡಿಪಿಆರ್ ಸಲ್ಲಿಕೆಯಾಗಿತ್ತು. ಆ ವೇಳೆಯೂ ಅಂದಿನ ಸರಕಾರ ಈ ವಿಚಾರದಲ್ಲಿ ಯಾವುದೇ ವಿಳಂಬ ಮಾಡಿಲ್ಲ' ಎಂದು ಸ್ಪಷ್ಟನೆ ನೀಡಿದರು.

ಗೊಂದಲ ಸೃಷ್ಟಿ: `ಮೇಕೆದಾಟು ಅಣೆಕಟ್ಟು ಯೋಜನೆ ವಿಚಾರವಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಕೆಲ ಪತ್ರಿಕೆಗಳಿಗೆ ಅನಾಮಧ್ಯೆಯ ಜಾಹೀರಾತು ನೀಡಿ, ಬಳಿಕ ತಾವೇ ಆ ಜಾಹೀರಾತು ನೀಡಿರುವುದಾಗಿ ಮಾಧ್ಯಮಗಳಲ್ಲಿ ಒಪ್ಪಿಕೊಂಡಿದ್ದಾರೆ. ಮೊದಲು ಈ ಬಗ್ಗೆ ಸರಿಯಾಗಿ ತಿಳಿದು ಮಾತನಾಡಬೇಕು' ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

`ಪ್ರಿ ಫೀಸಿಬಿಲಿಟಿ ರಿಪೋರ್ಟ್(ಪಿಎಫ್‍ಆರ್) ಹಾಗೂ ಡಿಪಿಆರ್ ಎರಡೂ ನಾವು ಆಗಲೇ ಸಿದ್ದಪಡಿಸಿ ಇಟ್ಟುಕೊಂಡಿದ್ದೇವು. ಆದರೆ, 2017ರ ಅಕ್ಟೋಬರ್ 9ಕ್ಕೆ `ಪ್ರಿ ಫೀಸಿಬಿಲಿಟಿ ರಿಪೋರ್ಟ್ ಅನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿತ್ತು. ಯೋಜನೆಯಲ್ಲಿ ಇದು ಮಹತ್ವದ ಮೈಲಿಗಲ್ಲು. ಆನಂತರ 2017ರ ಜೂನ್‍ನಲ್ಲಿ ನಮ್ಮ ಡಿಪಿಆರ್ ಅನ್ನು ಕೇಂದ್ರ ಜಲ ಆಯೋಗದ ದಕ್ಷಿಣ ವಿಭಾಗಕ್ಕೆ ಸಲ್ಲಿಸಿದ್ದೇವು. ಮರುದಿನವೇ ಡಿಪಿಆರ್ ಗೈಡ್‍ಲೈನ್ಸ್ ಬದಲಾಗಿದೆ. ಹೊಸ ಗೈಡ್‍ಲೈನ್ಸ್ ಪ್ರಕಾರ ಪ್ರಿ ಫೀಸಿಬಿಲಿಟಿ ರಿಪೋರ್ಟ್ ಕೊಡಿ ಎಂದು ಹೇಳಿದರು. ಹೀಗಾಗಿ ಪಿಎಫ್‍ಆರ್ ಸಲ್ಲಿಸಿದೆವು ಎಂದು ವಿವರಣೆ ನೀಡಿದರು.

ಮೇಕೆದಾಟು ಅಣೆಕಟ್ಟು ಯೋಜನೆ ವಿಚಾರವಾಗಿ 1996-97ರಲ್ಲಿ ನಿರ್ಣಾಯಕ ಹೆಜ್ಜೆ ಇಡಲಾಗಿತ್ತು. ಮೇಕೆದಾಟು ಜಲವಿದ್ಯುತ್ ಯೋಜನೆಗೆ ಕೆಪಿಸಿಎಲ್ ವತಿಯಿಂದ 731.27 ಕೋಟಿ ರೂ.ಪ್ರಸ್ತಾಪ ಮಾಡಲಾಗಿತ್ತು. 53.8 ಟಿಎಂಸಿ ನೀರಿನ ಶೇಖರಣೆ ಮತ್ತು 524 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ. ಬೆಂಗಳೂರು ನಗರಕ್ಕ  16.10 ಟಿಎಂಸಿ ಕುಡಿಯವ ನೀರಿಗೆ ಪ್ರಸ್ತಾಪ ಮಾಡಲಾಗಿತ್ತು. ಆ ವೇಳೆ ಉದ್ದೇಶಿತ ಯೋಜನೆಗೆ 5,428 ಎಕರೆ ಭೂಮಿ ಬೇಕಾಗಿತ್ತು ಎಂದು ಅವರು ವಿವರ ನೀಡಿದರು.

ಮೈತ್ರಿ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್, 2019ರ ಜೂ.17ರಂದು ಅಂದಿನ ಕೇಂದ್ರದ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಯೋಜನೆ ಜಾರಿಗೆ ಒತ್ತಡವನ್ನೂ ಹೇರಿದ್ದರು. ಅಲ್ಲದೆ, ಅವರು ತಮ್ಮ ಅವಧಿಯಲ್ಲಿ ಯೋಜನೆ ಪರಿಷ್ಕೃತ ಡಿಪಿಆರ್ ಸಿದ್ದಪಡಿಸಿ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ. ಆದರೆ, ರಾಜ್ಯದಲ್ಲಿ ಎರಡೂ ವರೆಗೆ ವರ್ಷದಿಂದ ಅಧಿಕಾರದಲ್ಲಿರುವ ಡಬಲ್ ಎಂಜಿನ್ ಸರಕಾರದ ನೀರಾವರಿ ಮಂತ್ರಿ ಗೋವಿಂದ ಕಾರಜೋಳ ಅವರ ಕೊಡುಗೆ ಏನು? ಎಂದು ಎಂ.ಬಿ.ಪಾಟೀಲ್ ಪ್ರಶ್ನಿಸಿದರು.

ಮೇಕೆದಾಟು ಯೋಜನೆಗೆ ಒಂದು ಇಟ್ಟಿಗೆಯನ್ನು ಇಡದೆ ತಮ್ಮ ವೈಫಲ್ಯಗಳನ್ನು ಜನರ ಮುಂದಿಡಲು ನೀರಿಗಾಗಿ ಜನ ಜಾಗೃತಿ ನಡಿಗೆ ಕೈಗೊಂಡ ಕಾರಣ ಭಯಭೀತರಾಗಿರುವ ಜಲಸಂಪನ್ಮೂಲ ಸಚಿವ ಕಾರಜೋಳ ಹಾಗೂ ಬಿಜೆಪಿ ಸರಕಾರ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಮೇಕೆದಾಟು ಯೋಜನೆ ಕಾಂಗ್ರೆಸ್ ಸರಕಾರದ ಕೊಡುಗೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರ ಬಿ.ಎಲ್. ಶಂಕರ್ ಹಾಜರಿದ್ದರು.

`ರಾಜ್ಯದಿಂದ ಆಯ್ಕೆಯಾಗಿರುವ ಇಪ್ಪತ್ತೈದು ಮಂದಿ ಸಂಸದರಿದ್ದು, ರಾಜ್ಯಸಭೆಯಲ್ಲಿಯೂ ಬಿಜೆಪಿಯ ಪ್ರಭಾವಿಗಳಿದ್ದಾರೆ. ಹೀಗಾಗಿ ಪ್ರಧಾನಿ ಮೋದಿಯವರ ಮೇಲೆ ಒತ್ತಡ ಹೇರಿ, ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳ ಸಭೆ ನಡೆಸಿ ಉಭಯ ರಾಜ್ಯಗಳ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು'

-ಬಿ.ಎಲ್.ಶಂಕರ್ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News