ದಿಲ್ಲಿಯ ಸಭೆಯಲ್ಲಿ ಡಿಕೆಶಿ ಜೊತೆ ನಳಿನ್ ಭಾಗವಹಿಸಿದ್ದನ್ನು ಮರೆತುಬಿಟ್ಟಿದ್ದಾರಾ?: ಸಿದ್ದರಾಮಯ್ಯ

Update: 2022-01-12 14:22 GMT

ಬೆಂಗಳೂರು, ಜ. 12: ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಆಗ್ರಹಿಸಿ `ನಮ್ಮ ನೀರು ನಮ್ಮ ಹಕ್ಕು' ಘೋಷಣೆಯೊಂದಿಗೆ ಆರಂಭಗೊಂಡಿರುವ ಕಾಂಗ್ರೆಸ್ ಪಾದಯಾತ್ರೆ ನಾಲ್ಕು ದಿನ ಯಶಸ್ವಿಯಾಗಿ ಪೂರೈಸಿ ಐದನೆ ದಿನಕ್ಕೆ ಕಾಲಿಟ್ಟಿದೆ. ಇಲ್ಲಿನ ಚಿಕ್ಕೇನಹಳ್ಳಿಯಿಂದ ಬೆಳಗ್ಗೆ 8:30ಕ್ಕೆ ಉಪಾಹಾರ ಸೇವಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದರು.

ಕೋವಿಡ್ ಸೋಂಕಿನ ಆತಂಕದ ನಡುವೆಯೂ `ನೀರಿಗಾಗಿ ನಡಿಗೆ'ಗೆ ಜನರು ಸ್ಪಂದಿಸುತ್ತಿದ್ದು, ಹಾಸನ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಪಕ್ಷದ ಕಾರ್ಯಕರ್ತರು ಪಾದಯಾತ್ರೆಗೆ ಇಂದು ಜೊತೆಯಾದರು. ಅಲ್ಲದೆ, ಕನಕಪುರ ಹಾಗೂ ರಾಮನಗರ ಸುತ್ತಮುತ್ತಲ ಗ್ರಾಮಗಳ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಪಾದಯಾತ್ರೆಗೆ ಉತ್ಸಾಹ ತುಂಬಿದರು.

ಯಾತ್ರೆಯ ಮಾರ್ಗದಲ್ಲಿನ ಗ್ರಾಮಗಳ ಮಹಿಳೆಯರು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಮುಖಂಡರಿಗೆ ಪೂರ್ಣಕುಂಭ ಸ್ವಾಗತ, ಪುಷ್ಪಾರ್ಚನೆ ಮಾಡಿ ಸ್ವಾಗತ ಕೋರಿದರು. ಇದೇ ವೇಳೆ ಬಿಸಿಲಬೇಗೆಯಿಂದ ಬಸವಳಿದ ಯಾತ್ರಿಗಳಿಗೆ ಕಬ್ಬಿನ ಹಾಲು, ಎಳ್ಳುನೀರು, ಬೆಲ್ಲದ ಪಾನಕ ಸೇರಿ ಇನ್ನಿತರ ಪಾನೀಯಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಎತ್ತಿನಗಾಡಿ ಸವಾರಿಯನ್ನು ಮಾಡಿದ್ದು ವಿಶೇಷವಾಗಿತ್ತು.

ಈ ವೇಳೆ ರಸ್ತೆಬದಿಯಲ್ಲಿದ್ದ ಹೊಟೇಲ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ದಣಿವಾರಿಸಿಕೊಂಡರು. ಬೆಳಗ್ಗೆಯಿಂದ ಆರಂಭವಾದ ಪಾದಯಾತ್ರೆ ಮಧ್ಯಾಹ್ನದ ವೇಳೆ ಕೃಷ್ಣಾಪುರ ದೊಡ್ಡಿ(ಕೆ.ಪಿ.ದೊಡ್ಡಿ) ತಲುಪಿತು. ವಿಶ್ರಾಂತಿ ಮತ್ತು ಭೋಜನ ಮುಗಿಸಿ ಅಲ್ಲಿಂದ ಒಟ್ಟು 15 ಕಿಲೋಮೀಟರ್ ದೂರವನ್ನು ಕ್ರಮಿಸಿ ರಾತ್ರಿ ವೇಳೆಗೆ ರಾಮನಗರ ಪ್ರವೇಶಿಸಿತು. ರಾಮನಗರದಲ್ಲಿ ಸಭೆ ನಡೆಸಿ ರಾತ್ರಿ ಅಲ್ಲೆ ವಾಸ್ತವ್ಯ ಹೂಡಲಿದೆ.

ಆದೇಶ ಪಾಲಿಸುತ್ತೇವೆ: `ಮೇಕೆದಾಟು ಪಾದಯಾತ್ರೆ ಕುರಿತು ಹೈಕೋರ್ಟ್ ನೀಡುವ ಸೂಚನೆಯನ್ನು ನಾವು ಪಾಲಿಸಲು ಸಿದ್ಧ. ಸದ್ಯಕ್ಕೆ ನಮ್ಮ ಪಾದಯಾತ್ರೆ ಮುಂದುವರಿಯಲಿದೆ. ಹೈಕೋರ್ಟ್ ಯಾವ ನಿರ್ಧಾರ ಕೈಗೊಳ್ಳಲಿದೆಯೋ ಈಗಲೇ ಹೇಳಲು ಸಾಧ್ಯವಿಲ್ಲ. ಕಾನೂನು ಅನ್ವಯ ಹೋರಾಟ ಮುಂದುವರಿಸುತ್ತೇವೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಲ್ಲಿನ ಕೆ.ಪಿ.ದೊಡ್ಡಿಯಲ್ಲಿ ಪ್ರತಿಕ್ರಿಯೆ ನೀಡಿದರು.

ಬೆನ್ನು ನೋವು: ಬೆಳಗ್ಗೆಯಿಂದ ಏಳು ಕಿಲೋಮೀಟರ್ ಪಾದಯಾತ್ರೆ ಮಾಡಿದ ಸಿದ್ದರಾಮಯ್ಯ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಆ ಹಿನ್ನೆಲೆಯಲ್ಲಿ ಮಧ್ಯಾಹ್ನದ ಭೋಜನದ ಬಳಿಕ ಅವರು ರಾಮನಗರದ ಕಾಂಗ್ರೆಸ್ ನಾಯಕರೊಬ್ಬರ ಮನೆಗೆ ವಿಶ್ರಾಂತಿಗೆ ತೆರಳಿದರು. ಅನಂತರ ಅಲ್ಲಿಂದ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ವಾಪಸ್ ಆಗಿದ್ದು ವಿಶ್ರಾಂತಿ ಪಡೆದು ನಾಳೆ(ಜ.13) ಪಾದಯಾತ್ರೆಗೆ ತೆರಳಲಿದ್ದಾರೆ.

ಕೇಸ್ ಹಾಕಿದರೆ ಹೆದರುವುದಿಲ್ಲ: `ಪಾದಯಾತ್ರೆ ತಡೆಯುವ ಉದ್ದೇಶದಿಂದ ರಾಜ್ಯ ಸರಕಾರ ನಮ್ಮ ವಿರುದ್ಧ ಎಷ್ಟೇ ಎಫ್‍ಐಆರ್, ಕೇಸುಗಳನ್ನು ದಾಖಲಿಸಿದರೂ ಅವುಗಳಿಗೆ ನಾವು ಹೆದರುವುದಿಲ್ಲ. ಮೇಕೆದಾಟು ಅಣೆಕಟ್ಟು ಯೋಜನೆ ತ್ವರಿತಗತಿ ಅನುಷ್ಟಾನಕ್ಕೆ ಆಗ್ರಹಿಸಿ ನಮ್ಮ ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದರು.

ಪಾದಯಾತ್ರೆ ಮಾರ್ಗದಲ್ಲಿ `ವಾರ್ತಾಭಾರತಿ' ಯೂಟ್ಯೂಬ್‍ನೊಂದಿಗೆ ಮಾತನಾಡಿದ ಅವರು, `ನೀರಿಗಾಗಿ ನಮ್ಮ ಹೋರಾಟ. ಇದೊಂದು ಐತಿಹಾಸಿಕವಾದ ಜನಪರ ಹೋರಾಟ. ಹೀಗಾಗಿ ರಾಜ್ಯ ಸರಕಾರ ನಮ್ಮ ಹೋರಾಟಕ್ಕೆ ವಿವಿಧ ರೀತಿಯಲ್ಲಿ ಅಡ್ಡಿಪಡಿಸುವ ಕೆಲಸ ಮಾಡುತ್ತಿದೆ. ಅದರ ಭಾಗವಾಗಿಯೇ ನಮ್ಮ ವಿರುದ್ಧ ಹಲವು ಕೇಸುಗಳನ್ನು ದಾಖಲಿಸಿದೆ' ಎಂದು ಸರಕಾರದವಿರುದ್ಧ ವಾಗ್ದಾಳಿ ನಡೆಸಿದರು.

`ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದೆ. ಮೇಕೆದಾಟು ಯೋಜನೆ ಜಾರಿಗೆ ಸಂಬಂಧ ಏನೂ ಕೆಲಸ ಮಾಡದೆ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ನಾಟಕ ಮಾಡುತ್ತಿದೆ. ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಹಿಂದೆ ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದ ಅವಧಿಯಲ್ಲಿ ಯೋಜನೆ ಜಾರಿ ಸಂಬಂಧ ದಿಲ್ಲಿಯಲ್ಲಿ ನಡೆದ ಸಂಸದರ ಸಭೆಯಲ್ಲಿ ಭಾಗವಹಿಸಿದ್ದರು. ಅದನ್ನು ಮರೆತು ಇದೀಗ ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಅವರು ಆ ಸಭೆಯನ್ನು ಒಮ್ಮೆ ನೆನಪು ಮಾಡಿಕೊಳ್ಳಬೇಕು' ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

`ಹಾರಲು ಸಾಧ್ಯವಾಗದಿದ್ದರೆ ಓಡೋಣ, ಓಡಲು ಸಾಧ್ಯವಾಗದಿದ್ದರೆ ನಡೆಯೋಣ, ನಡೆಯಲು ಸಾಧ್ಯವಾಗದಿದ್ದರೆ ತೆವಳೋಣ. ಆದರೆ, ಗುರಿಯತ್ತ ಮುಂದುವರಿಯೋಣ. ಮೇಕೆದಾಟು ಅಣೆಕಟ್ಟು ಯೋಜನೆಗಾಗಿ ನಮ್ಮ ಪಾದಯಾತ್ರೆಯ ನಾಲ್ಕನೇ ವೈಭವದ ದಿನ ಸಾಗುತ್ತಿದೆ. ಅದೇ ಹುರುಪಿನೊಂದಿಗೆ ಬಲವಾದ ಹೆಜ್ಜೆ ಇಡೋಣ'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News