'ಮೇಕೆದಾಟನ್ನು ಮಸಣʼ ಮಾಡುವುದು ಬೇಡ ಎಂದ ಕುಮಾರಸ್ವಾಮಿ

Update: 2022-01-12 16:22 GMT
ಕುಮಾರಸ್ವಾಮಿ 

ಬೆಂಗಳೂರು: ಮೇಕೆದಾಟು ಪಾದಯಾತ್ರೆಯನ್ನು ʼಓಮೈಕ್ರಾನ್ ಜಾತ್ರೆʼಯನ್ನಾಗಿ ಪರಿವರ್ತಿಸಿದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಹೈಕೋರ್ಟ್ ಛೀಮಾರಿ ಹಾಕಿದೆ. ಸೋಂಕನ್ನು ನಿರ್ಲಕ್ಷಿಸಿದ ಸರಕಾರಕ್ಕೂ ಚಾಟಿ ಬೀಸಿದೆ. ಕೂಡಲೇ ಈ ಬಗ್ಗೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ನೀರಿನ ನೆಪದ ಈ ದೊಂಬರಾಟಕ್ಕೆ ಕೊನೆ ಹಾಡಬೇಕು.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ,  ''ಕೋವಿಡ್ ರಕ್ಕಸ ರೂಪ ಪಡೆದು ವೇಗವಾಗಿ ಹರಡುತ್ತಿದೆ. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಅನೇಕ ನಾಯಕರೇ  ಪಾಸಿಟವ್ ಆಗಿ ಆಸ್ಪತ್ರೆ ಸೇರಿಕೊಂಡಿದ್ದಾರೆ. ಸರಿಯಾಗಿ ಪರೀಕ್ಷೆ ನಡೆಸಿದರೆ ದೊಡ್ಡ ಸಂಖ್ಯೆಯ ಜನರು ಸೋಂಕಿತರಾಗಿರುವುದು ಬಯಲಾಗುತ್ತದೆ'' ಎಂದು ಆತಂಕ ವ್ಯಕ್ತಪಡಿಸಿದರು.

''ನ್ಯಾಯಾಲಯದಿಂದ ಮತ್ತೆ ಛೀಮಾರಿ ಹಾಕಿಸಿಕೊಳ್ಳುವುದು ಬೇಡ. ಪರಿಸ್ಥಿತಿ ಕೈಮೀರಿದೆ. ಎಚ್ಚರ ತಪ್ಪಿದರೆ ಇರುವ ಆಸ್ಪತ್ರೆಗಳು, ವೈದ್ಯ ವ್ಯವಸ್ಥೆ ಸಾಲುವುದಿಲ್ಲ. ಮತ್ತೊಮ್ಮೆ ಸರಕಾರ ಮುಜುಗರಕ್ಕೆ ಒಳಗಾಗುವುದು ಸರಿಯಲ್ಲ'' ಎಂದರು.

''ಕಳೆದ 4  ದಿನಗಳಿಂದ ಜಿಲ್ಲೆಗಳಿಂದ ಬಸ್ಸುಗಳಲ್ಲಿ ಜನರಿಗೆ ಹಣ ಕೊಟ್ಟು ಕರೆಸಿಕೊಂಡು ನಡೆಸುತ್ತಿರುವ ಈ ಜಾತ್ರೆಯಿಂದ ಮೇಕೆದಾಟು ಸಾಕಾರ ಅಸಾಧ್ಯ. ಇದು ʼಸೋಂಕಿನ ಸಮಾರಾಧನೆʼಯಷ್ಟೇ ಹೊರತು ಹೋರಾಟವಲ್ಲ. ಸರಕಾರ ಜಿಲ್ಲೆಗಳಿಂದ ಬರುವ ಜನರನ್ನು ಅಲ್ಲಲ್ಲಿಯೇ ತಡೆಯುವ ಕೆಲಸ ಮಾಡಬೇಕು'' ಎಂದು ತಿಳಿಸಿದರು.

''ಮೇಕೆದಾಟು ಬಗ್ಗೆ ಏನೇನು ಮಾಡಲಾಗಿದೆ ಎಂದು ಸರಕಾರ ಜಾಹೀರಾತು ನೀಡಿದೆ. ಬಿಜೆಪಿ-ಕಾಂಗ್ರೆಸ್ ಪಕ್ಷಗಳೂ ಜಾಹೀರಾತು ಕೊಟ್ಟುಕೊಂಡು ಸಮಜಾಯಿಷಿ ನೀಡಿವೆ. ಯಾವುದು ಸತ್ಯ? ಯಾವುದು ಸುಳ್ಳು? ಎನ್ನುವ ಲೆಕ್ಕವನ್ನು ನಾನು ಜನರ ಮುಂದೆ ಇಡುತ್ತೇನೆ. 1924ರಿಂದ ಕಾವೇರಿ ವಿಷಯದಲ್ಲಿ ಏನೆಲ್ಲಾ ನಡೆಯಿತು? ರಾಜ್ಯಕ್ಕೆಷ್ಟು ಅನ್ಯಾಯ ಆಯಿತು ಎಂಬುದನ್ನು ಮುಂದೆ ನಾನು ವಿವರವಾಗಿ ಚರ್ಚೆ ಮಾಡುತ್ತೇನೆ'' ಎಂದು ತಿಳಿಸಿದರು.

''ಕಾಂಗ್ರೆಸ್ ಪಾದಯಾತ್ರೆಯಿಂದ ನಮ್ಮ ಪಕ್ಷಕ್ಕೇನು ಆತಂಕವಿಲ್ಲ. ಆದರೆ ಜನ  ಆರೋಗ್ಯದ ಆತಂಕದಲ್ಲಿದ್ದಾರೆ. ಹಾಗಂತ, ಇವರ ಯಾತ್ರೆ ಬಗ್ಗೆ ಅಥವಾ ನಾಡಿನ ಪರ ದನಿಯೆತ್ತುವ ಬಗ್ಗೆ ನನ್ನ ತಕರಾರಿಲ್ಲ. ಆದರೆ, ಕೋವಿಡ್ ಅಟ್ಟಹಾಸದ ಹೊತ್ತಿನಲ್ಲಿ ಇದು ಖಂಡಿತಾ ಬೇಕಿರಲಿಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

''ಗಾಂಧೀಜಿ ಅವರ ಪಾದಯಾತ್ರೆ ಬಗ್ಗೆ ಓದಿದ್ದೇನೆ. ವಿನೋಬಾ ಭಾವೆ ಅವರ ಪಾದಯಾತ್ರೆ ಬಗ್ಗೆ ಅರಿತಿದ್ದೇನೆ. ದೇವೇಗೌಡರ ಪಾದಪಾತ್ರೆಯನ್ನು ಕಣ್ಣಾರೆ ಕಂಡಿದ್ದೇನೆ. ಆದರೆ, ಇಂಥ ʼಹೈಟೆಕ್ ಪಾದಯಾತ್ರೆʼಯನ್ನು ನೋಡಿರಲಿಲ್ಲ. ಇಂಥ ದೊಂಬರಾಟದಿಂದ ಕಾನೂನಿನ ವ್ಯಾಪ್ತಿಯಲ್ಲಿರುವ ಮೇಕೆದಾಟು ಯೋಜನೆ ಜಾರಿ ಸಾಧ್ಯವಿಲ್ಲ'' ಎಂದರು.

''ಚುನಾವಣೆ ಹತ್ತಿರದಲ್ಲಿದೆ. ಕಾಂಗ್ರೆಸ್ ಸಂಘಟನೆ ಮಾಡಿಕೊಳ್ಳಲಿ. ಕೋವಿಡ್ ಇಳಿಮುಖವಾದ ನಂತರ ಅದನ್ನು ಮಾಡಲಿ. ಅದನ್ನು ಬಿಟ್ಟು ಜನರ ಜೀವದ ಜತೆ ಚೆಲ್ಲಾಟ ಆಡುವುದು ಸರಿಯಲ್ಲ. ಕಾಂಗ್ರೆಸ್ ಒಂದು ಜವಾಬ್ದಾರಿ ಪಕ್ಷವಾಗಿದ್ದರೆ ತಕ್ಷಣ ಪಾದಯಾತ್ರೆ ನಿಲ್ಲಿಸಲಿ. ಗಂಡಸ್ತನ ತೋರಿಸುವುದಕ್ಕೆ ಹೋಗಿ ʼಮೇಕೆದಾಟನ್ನು ಮಸಣʼ ಮಾಡುವುದು ಬೇಡ'' ಎಂದು ಕಿಡಿಗಾರಿದರು.

ಕಳೆದ 4 ದಿನಗಳಿಂದ ಸರಕಾರ ತೋರಿದ ಉದಾರತೆ ಸಾಕು. ಇನ್ನೂ ಔದಾರ್ಯ ತೋರಿದರೆ ರಾಜ್ಯದ ಅವನತಿಗೆ ದಾರಿಯಾದೀತು. ಕೋವಿಡ್ ನಿಯಮ ಪಾಲಿಸುವಂತೆ ಜನರಿಗೆ ಹಿಂಸೆ ಕೊಟ್ಟು, ರಾಜಕಾರಣಿಗಳಿಗೆ ವಿನಾಯಿತಿ ಕೊಡುವುದು ಉತ್ತಮ ಆಡಳಿತದ ಲಕ್ಷಣವಲ್ಲ. ಸರಕಾರ ಕೆಚ್ಚೆದೆಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News