ಹಾಸನ: ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ; ಹಲವರ ವಿರುದ್ಧ ಎಫ್ಐಆರ್

Update: 2022-01-12 17:19 GMT

ಹಾಸನ: ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಮೆರವಣಿಗೆಮಾಡಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೊಕದ್ದಮೆ ದಾಖಲು ಮಾಡಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ ಮಾಹಿತಿ ನೀಡಿದ್ದಾರೆ.

ನಗರದ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆಯ ಬಗ್ಗೆ ಕರೆ ಮೂಲಕ ಮಾಹಿತಿ ದೊರೆತ ತಕ್ಷಣದಲ್ಲಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ವಿಚಾರಿಸಿ ಬಂಧಿಸಿದ್ದಾರೆ.

ವಿಜಯಪುರದ ಮೇಘರಾಜು ಎನ್ನುವ ಯುವಕ ಗಾರೆ ಕೆಲಸ ಮಾಡುವವನೆಂದು ಹೇಳಲಾಗಿದ್ದು, ಪ್ರಕರಣ ಸಂಬಂಧ ವಿಡಿಯೋದಲ್ಲಿ ಕಂಡುಬಂದಿರುವ ಹಲ್ಲೆ ಮಾಡಿದ ಎಲ್ಲ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದರು.

ಘಟನೆ ವಿವರ: ಹಾಸನದ ಮಹಾರಾಜ ಪಾರ್ಕ್ ನಲ್ಲಿ  ಮಂಗಳವಾರ ಸಂಜೆ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯೊಬ್ಬಳು ಕುಳಿತಿದ್ದಾಗ ಬಿಜಾಪುರ ಮೂಲದ ಕೂಲಿ ಕೆಲಸಮಾಡುವ ಯುವಕನೊಬ್ಬ ಯುವತಿಯ ಕೈಯನ್ನು ಎಳೆದು ಅಸಭ್ಯವಾಗಿ ವರ್ತಿಸಿದ ಎಂದು ಆರೋಪಿಸಿ ಸ್ಥಳದಲ್ಲಿದ್ದ ಸಾರ್ವಜನಿಕರು ಯುವಕನನ್ನು ಥಳಿಸಿ ನಂತರ ಬಟ್ಟೆ ಬಿಚ್ಚಿ ಮೆರವಣಿಗೆ ನಡೆಸಿದ್ದರು.

ಪ್ರಕರಣದಲ್ಲಿ ಹಲ್ಲೆಗೊಳಗಾದ ಯುವಕನಿಂದ ಮಾಹಿತಿ ಪಡೆದು ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೆ ಘಟನೆ ಕುರಿತು ಯುವತಿ ದೂರನ್ನು ಇದುವರೆಗೂ ನೀಡಿರುವುದಿಲ್ಲ. ಯಾರಾದರೂ ಕಾನೂನನ್ನು ಕೈಗೆತ್ತಿಕೊಳ್ಳುವ ವ್ಯಕ್ತಿಗಳ ವಿರುದ್ಧ ಕಾನೂನು ರೀತಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಿಸಿ ಟಿವಿಯಲ್ಲಿ ದಾಖಲಾಗಿರುವ ವಿಡಿಯೋ ಮೂಲಕ ಪತ್ತೆ ಹಚ್ಚಿ ಸಾಕ್ಷಿ ಮೂಲಕ ಬಂಧಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News