ರಾಜ್ಯದಲ್ಲಿ 2 ವರ್ಷದಲ್ಲಿ 64 ಚದರ ಕಿ.ಮೀ. ಅರಣ್ಯ ನಾಶ: ಐಎಸ್‌ಎಫ್‌ಆರ್ ವರದಿ

Update: 2022-01-14 02:00 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಎರಡು ವರ್ಷದಲ್ಲಿ 64 ಚದರ ಕಿಲೋಮೀಟರ್ ಸಾಧಾರಣ ದಟ್ಟ ಅರಣ್ಯ ನಾಶವಾಗಿದೆ. ಗುರುವಾರ ಬಿಡುಗಡೆಯಾದ 2021 ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ಸ್ (ಐಎಸ್‌ಎಫ್‌ಆರ್) ವರದಿಯ ಪ್ರಕಾರ 2019ರ ವರದಿಗೆ ಹೋಲಿಸಿದರೆ ಕಳೆದ ಎರಡು ವರ್ಷದಲ್ಲಿ ಅರಣ್ಯ ನಷ್ಟವಾಗಿದೆ. ರಾಜ್ಯದಲ್ಲಿ ಶೇಕಡ 54ರಷ್ಟು ಈ ವರ್ಗದ ಅರಣ್ಯ ಇದೆ.

ಬಹುತೇಕ ಮುಕ್ತ ಅರಣ್ಯ ವರ್ಗದಲ್ಲಿ ಸೇರಿ ಒಟ್ಟಾರೆ 155 ಚದರ ಕಿಲೋಮೀಟರ್ ಅರಣ್ಯ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ. ಹಿಂದಿನ ಅವಧಿಯಲ್ಲಿ ಸೇರ್ಪಡೆಯಾದ 1000 ಚದರ ಕಿಲೋಮೀಟರ್‌ಗೆ ಹೋಲಿಸಿದರೆ ಇದು ಅತ್ಯಲ್ಪ. ರಾಜ್ಯದಲ್ಲಿ ಒಟ್ಟು ಭೌಗೋಳಿಕ ಪ್ರದೇಶದ ಪೈಕಿ 20.2% ಮಾತ್ರ ಅರಣ್ಯ ಇದ್ದು, ಇದು ಜಾಗತಿಕ ಮಾನದಂಡವಾದ ಶೇಕಡ 33 ಮತ್ತು ರಾಷ್ಟ್ರೀಯ ಸರಾಸರಿಯಾದ ಶೇಕಡ 21.7ಕ್ಕಿಂತ ಕಡಿಮೆ.

2019ರಲ್ಲಿ ಅತ್ಯಧಿಕ ಅರಣ್ಯ ಬೆಳೆಸಿದ ಹೆಗ್ಗಳಿಕೆ ಕರ್ನಾಟಕದ್ದಾಗಿತ್ತು. ಇದಕ್ಕೆ ಹೋಲಿಸಿದರೆ ಕಳೆದ ಎರಡು ವರ್ಷದಲ್ಲಿ ಅತ್ಯಲ್ಪವಾದರೂ, ಒಟ್ಟಾರೆಯಾಗಿ ಕರ್ನಾಟಕ, ದೇಶದಲ್ಲಿ ಐದನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶ (647 ಚದರ ಕಿಲೋಮೀಟರ್), ತೆಲಂಗಾಣ (632 ಚದರ ಕಿಲೋಮೀಟರ್), ಒಡಿಶಾ (537 ಚದರ ಕಿಲೋಮೀಟರ್) ಜಾರ್ಖಂಡ್ ಹಾಗೂ ಕರ್ನಾಟಕ (110 ಚದರ ಕಿಲೋಮೀಟರ್) ಅತ್ಯಧಿಕ ಅರಣ್ಯ ಬೆಳೆಸಿದ ರಾಜ್ಯಗಳು.

"ಅರಣ್ಯ ಹೆಚ್ಚಳಕ್ಕೆ ಮುಖ್ಯ ಕಾರಣವೆಂದರೆ ಉತ್ತಮ ಸುರಕ್ಷಾ ಕ್ರಮಗಳು, ಸಂರಕ್ಷಣೆ, ಅರಣ್ಯ ಬೆಳೆಸುವ ಚಟುವಟಿಕೆಗಳು, ಗಿಡ ನೆಡುವ ಅಭಿಯಾನಗಳು ಮತ್ತು ಕೃಷಿ ಅರಣ್ಯದ ಅಭಿವೃದ್ಧಿ" ಎಂದು ವರದಿಯಲ್ಲಿ ವಿವರಿಸಲಾಗಿದೆ.

ಉಪಗ್ರಹ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು ಅರಣ್ಯ ಪ್ರಮಾಣ ಹಿಂದಿನ ಸಮೀಕ್ಷೆಯ ಅವಧಿಯಲ್ಲಿ ಇದ್ದ 38575 ಚದರ ಕಿಲೋಮೀಟರ್‌ಗೆ ಹೋಲಿಸಿದರೆ 38730 ಕಿಲೋಮೀಟರ್‌ಗೆ ಹೆಚ್ಚಿದೆ. ಶೇಕಡ 0.4ರಷ್ಟು ಬೆಳವಣಿಗೆ ಆದಂತಾಗಿದೆ. ದೇಶದ ಒಟ್ಟು ಅರಣ್ಯ ಪ್ರಮಾಣ 7.13 ಲಕ್ಷ ಚದರ ಕಿಲೋಮೀಟರ್ ಆಗಿದ್ದು, ಇದು ಹಿಂದಿನ ಅವಧಿಗೆ ಹೋಲಿಸಿದರೆ ಶೇಕಡ 0.2ರಷ್ಟು ಅಧಿಕ. ದೇಶಾದ್ಯಂತ ಒಟ್ಟು 1540 ಚದರ ಕಿಲೋಮೀಟರ್ ಅರಣ್ಯ ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News