ಕೇರಳದ ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣ: ಆರೋಪಿ ಬಿಷಪ್ ಫ್ರಾಂಕೊ ಖುಲಾಸೆ

Update: 2022-01-14 06:15 GMT

ತಿರುವನಂತಪುರ: ಕೇರಳದಲ್ಲಿ ಕ್ರೈಸ್ತ ಸನ್ಯಾಸಿನಿಯ ಮೇಲೆ  ಅತ್ಯಾಚಾರದ ಆರೋಪಿ ಬಿಷಪ್ ಫ್ರಾಂಕೊ ಮುಳಕ್ಕಲ್ ಅವರನ್ನು ಕೇರಳದ ನ್ಯಾಯಾಲಯವು ಪ್ರಕರಣದಿಂದ ಖುಲಾಸೆಗೊಳಿಸಿದೆ ಎಂದು NDTV ವರದಿ ಮಾಡಿದೆ.

ಬಿಷಪ್ ವಿರುದ್ಧ ಅತ್ಯಾಚಾರ ಪ್ರಕರಣವನ್ನು 2018 ರಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಪೊಲೀಸರು ದಾಖಲಿಸಿದ್ದರು.

57 ವರ್ಷದ ಫ್ರಾಂಕೊ ಮುಳಕ್ಕಲ್ ಅವರು ಕ್ರೈಸ್ತ ಸನ್ಯಾಸಿನಿಯ ಮೇಲೆ ಲೈಂಗಿಕ ದೌರ್ಜನ್ಯ  ನಡೆಸಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಭಾರತದ ಮೊದಲ ಕೆಥೋಲಿಕ್ ಬಿಷಪ್ ಆಗಿದ್ದರು.

ಕೊಟ್ಟಾಯಂನ ನ್ಯಾಯಾಲಯವು 100 ದಿನಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ನಂತರ ಫ್ರಾಂಕೊ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು. ಸಾಕ್ಷ್ಯಾಧಾರಗಳ ಕೊರತೆಯನ್ನು ನ್ಯಾಯಾಲಯ ಉಲ್ಲೇಖಿಸಿತು.

ನವೆಂಬರ್ 2019 ರಲ್ಲಿ ವಿಚಾರಣೆ ಆರಂಭವಾಯಿತು. ನ್ಯಾಯಾಲಯವು ತನ್ನ ಅನುಮತಿಯಿಲ್ಲದೆ ವಿಚಾರಣೆಗೆ ಸಂಬಂಧಿಸಿದ ಯಾವುದನ್ನೂ ಪ್ರಕಟಿಸದಂತೆ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿತ್ತು.

ರೋಮನ್ ಕೆಥೋಲಿಕ್ ಚರ್ಚ್‌ನ ಜಲಂಧರ್ ಡಯೋಸಿಸ್ ನ   ಆಗಿನ ಬಿಷಪ್ ಫ್ರಾಂಕೊ 2014 ಮತ್ತು 2016 ರ ನಡುವೆ ನನಗೆ  ಲೈಂಗಿಕ ಕಿರುಕುಳ ನೀಡಿದ್ದರು ಎಂದು ಕ್ರೈಸ್ತ ಸನ್ಯಾಸಿನಿ ಜೂನ್ 2018 ರಲ್ಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News