ಆಸ್ಪತ್ರೆಯ ಆವರಣದಲ್ಲಿ ಹೂಳಲಾಗಿದ್ದ 11 ತಲೆಬುರುಡೆಗಳು, ಭ್ರೂಣಗಳ ಮೂಳೆಗಳು ಪತ್ತೆ

Update: 2022-01-14 10:43 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಹದಿಮೂರು ವರ್ಷದ ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ನಡೆಸಿದ ಪ್ರಕರಣದ ತನಿಖೆ ನಡೆಸುತ್ತಿರುವ  ಮಹಾರಾಷ್ಟ್ರ ಪೊಲೀಸರು ವಾರ್ಧಾ ಜಿಲ್ಲೆಯ ಕದಮ್ ಆಸ್ಪತ್ರೆಯ ಆವರಣದಲ್ಲಿ 11 ತಲೆಬುರುಡೆಗಳು ಹಾಗೂ ಭ್ರೂಣಗಳ 54 ಮೂಳೆಗಳು ಹೂತಿರುವುದು ಪತ್ತೆಹಚ್ಚಿದ್ದಾರೆ.  ಅಪ್ರಾಪ್ತೆಯ ಗರ್ಭಪಾತ ನಡೆಸಿದ್ದಕ್ಕಾಗಿ ಆಸ್ಪತ್ರೆಯ ಓರ್ವ ವೈದ್ಯರು ಹಾಗೂ ಇಬ್ಬರು ನರ್ಸ್‍ಗಳ ಬಂಧನದ ಬೆನ್ನಲ್ಲಿ ಈ ಬೆಳವಣಿಗೆ ನಡೆದಿದೆ.

ಈ ತಲೆಬುರುಡೆಗಳು ಮತ್ತು ಮೂಳೆಗಳನ್ನು ಪೋಸ್ಟ್ ಮಾರ್ಟಂಗಾಗಿ ಮತ್ತು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಅಕ್ರಮವಾಗಿ ಗರ್ಭಪಾತಗಳನ್ನು ನಡೆಸಲಾಗುತ್ತಿದೆಯೇ  ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಐದು ತಿಂಗಳು ಗರ್ಭಿಣಿಯಾಗಿದ್ದ ಅಪ್ರಾಪ್ತೆ ಅತ್ಯಾಚಾರ ಸಂತ್ರಸ್ತೆಯನ್ನು ಈಗ ಬೇರೊಂದು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಜನವರಿ 7ರಂದು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಎಂಎಸ್ ಪದವಿ ಹೊಂದಿರುವ ಡಾ ರೇಖಾ ಕದಮ್ ನಡೆಸಿದ್ದರು. ಕದಮ್ ಕುಟುಂಬ ಈ ಆಸ್ಪತ್ರೆ ನಡೆಸುತ್ತಿದ್ದು ಗರ್ಭಪಾತಕ್ಕೆ ವೈದ್ಯೆ ರೂ 30,000 ಪಡೆದಿದ್ದರು. ಭ್ರೂಣವನ್ನು ಹೂಳಲು ಸಹಾಯ ಮಾಡಿದ ಪೂಜಾ ಧತ್ ಮತ್ತು ಸಂಗೀತಾ ಕಾಳೆ ಎಂಬ ನರ್ಸ್‍ಗಳನ್ನು ಬಂಧಿಸಲಾಗಿದೆ.

ತನ್ನ  ಪುತ್ರಿಯನ್ನು 17 ವರ್ಷದ ಹುಡುಗನೊಬ್ಬ ಅತ್ಯಾಚಾರಗೈದಿದ್ದಾನೆ, ಈಗ ಆತನ ಕುಟುಂಬ ಬೆದರಿಕೆಯೊಡ್ಡುತ್ತಿದೆ ಎಂದು ಹುಡುಗಿಯ ತಾಯಿ ಜನವರಿ 9ರಂದು ದೂರು ನೀಡಿದ್ದರು. ಹುಡುಗನ ಹೆತ್ತವರನ್ನು ಬೆದರಿಕೆಯೊಡ್ಡಿದ್ದಕ್ಕಾಗಿ ಬಂಧಿಸಲಾಗಿದ್ದು ಆತನನ್ನು ಬಾಲಾಪರಾಧಿಗಳ ಕೇಂದ್ರಕ್ಕೆ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News