ರಾಜ್ಯಾದ್ಯಂತ ಕೋವಿಡ್ ಎಸ್‍ಒಪಿ ಕಟ್ಟುನಿಟ್ಟಿನ ಪಾಲನೆಗೆ ಹೈಕೋರ್ಟ್ ನಿರ್ದೇಶನ

Update: 2022-01-14 14:50 GMT

ಬೆಂಗಳೂರು, ಜ.14: ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಆಗ್ರಹಿಸಿ ‘ನಮ್ಮ ನೀರು ನಮ್ಮ ಹಕ್ಕು’ ಘೋಷಣೆಯೊಂದಿಗೆ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ತಡೆಹಿಡಿಯಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿರುವ ಹೈಕೋರ್ಟ್, ರಾಜ್ಯಾದ್ಯಂತ ಕೋವಿಡ್ ಎಸ್‍ಒಪಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. 

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ತಡೆಗೆ ಕೋರಿ ನಗರದ ತಿಂಡ್ಲು ನಿವಾಸಿ ಎ.ವಿ.ನಾಗೇಂದ್ರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರುತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ. 

ಕೆಪಿಸಿಸಿ ಪರ ವಾದಿಸಿದ ಹಿರಿಯ ವಕೀಲ ಉದಯ ಹೊಳ್ಳ ಅವರು, ಹೈಕೋರ್ಟ್ ಎಚ್ಚರಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಪಾದಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಸರಕಾರದ ಪರ ವಾದಿಸಿದ ವಕೀಲರು, ಪಾದಯಾತ್ರೆ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ರಾಮನಗರ ಜಿಲ್ಲೆಯೂ ಸೇರಿ ಅಂತರಜಿಲ್ಲಾ ಪಾದಯಾತ್ರೆ ಅಥವಾ ಮೆರವಣಿಗೆಗಳಿಗೆ ಅವಕಾಶ ಕಲ್ಪಿಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ಜ.4ರಂದು ಹೊರಡಿಸಲಾಗಿರುವ ಎಸ್‍ಒಪಿಯನ್ನು ರಾಜ್ಯಾದ್ಯಂತ ಕಠಿಣವಾಗಿ ಜಾರಿಗೆ ತನ್ನಿ ಎಂದು ಸರಕಾರಕ್ಕೆ ನಿರ್ದೇಶಿಸಿ ಅರ್ಜಿ ವಿಲೇವಾರಿ ಮಾಡಿತು. 

ಏನಿದು ಪ್ರಕರಣ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಹಮ್ಮಿಕೊಂಡಿರುವ ಪಾದಯಾತ್ರೆ ಮುಂದುವರಿಸದಂತೆ ಕೆಪಿಸಿಸಿಯನ್ನು ನಿಬರ್ಂಧಿಸಬೇಕು. ಯಾವುದೇ ರಾಜಕೀಯ ಪಕ್ಷಗಳಿಗೆ ಮೆರವಣಿಗೆ, ಧರಣಿ ಹಾಗೂ ಪ್ರತಿಭಟನೆ ನಡೆಸಲು ಅನುಮತಿ ನೀಡಬಾರದು. ಈ ನಿಟ್ಟಿನಲ್ಲಿ ಸರಕಾರ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿಯಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಮತ್ತು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ರಾಮನಗರ ಜಿಲ್ಲಾಧಿಕಾರಿ, ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಪ್ರತಿವಾದಿಯನ್ನಾಗಿ ಕಾಣಿಸಲಾಗಿತ್ತು.
ಕಾಂಗ್ರೆಸ್ ಪಾದಯಾತ್ರೆಯಿಂದ ಕೋವಿಡ್ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇದೆ. ಕೆಪಿಸಿಸಿ ಸರಕಾರದ ಎಲ್ಲ ನಿಯಮಗಳನ್ನೂ ಉಲ್ಲಂಘಿಸಿ ಪಾದಯಾತ್ರೆ ನಡೆಸುತ್ತಿದೆ. ತಪ್ಪಿತಸ್ಥರ ವಿರುದ್ಧ ಸರಕಾರ ಈತನಕ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು.

ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ವಿಧಿಸಿರುವ ನಿರ್ಬಂಧಗಳ ನಡುವೆಯೂ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೆಪಿಸಿಸಿ ಜ.9ರ ರವಿವಾರದಿಂದ 10 ದಿನಗಳ ಪಾದಯಾತ್ರೆ ಆರಂಭಿಸಿತ್ತು. ಈ ಪಾದಯಾತ್ರೆಯಲ್ಲಿ ಕಾರ್ಯಕರ್ತರು, ಮುಖಂಡರು, ಸಾಂಸ್ಕøತಿಕ ತಂಡಗಳು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಎರಡು ದಿನಗಳ ಹಿಂದೆ ನಡೆದ ವಿಚಾರಣೆ ವೇಳೆ ನ್ಯಾಯಪೀಠ ಪಾದಯಾತ್ರೆ ಬಗ್ಗೆ ಸರಕಾರ ಮತ್ತು ಕೆಪಿಸಿಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ರ್‍ಯಾಲಿ, ಪಾದಯಾತ್ರೆಗೆ ಅವಕಾಶ ನೀಡಬೇಡಿ

‘ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ರ್‍ಯಾಲಿ, ಪ್ರದರ್ಶನ, ಮೆರವಣಿಗೆ, ಪಾದಯಾತ್ರೆಗಳಿಗೆ ಅವಕಾಶ ನೀಡಬಾರದು.’

-ರುತುರಾಜ್ ಅವಸ್ಥಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News