74 ವರ್ಷಗಳ ಬಳಿಕ ಭೇಟಿಯಾದ ಸಹೋದರರ ವೀಡಿಯೊ ಬಳಸಿ ಕೋಮು ಧ್ರುವೀಕರಣ ಆಯಾಮ ನೀಡಿದ ಬಲಪಂಥೀಯರು

Update: 2022-01-17 09:20 GMT

ಹೊಸದಿಲ್ಲಿ: ದೇಶ ವಿಭಜನೆಯ ಸಂದರ್ಭ ಬೇರ್ಪಟ್ಟಿದ್ದ ಭಾರತದ ಪಂಜಾಬ್‍ನ ಮತ್ತು ಪಾಕಿಸ್ತಾನದ ಪಂಜಾಬ್‍ನ ಇಬ್ಬರು ಸೋದರರು 74 ವರ್ಷಗಳ ನಂತರ ಪಾಕಿಸ್ತಾನದ ಕರ್ತಾರ್ಪುರ್‍ನಲ್ಲಿ ಇತ್ತೀಚೆಗೆ ಭೇಟಿಯಾದ ವಿಷಯ ಇತ್ತೀಚೆಗೆ ಸಾಕಷ್ಟು ಕುತೂಹಲ ಕೆರಳಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಇಬ್ಬರು ಸೋದರರು ಒಂದಾದ ಕುರಿತ ವೀಡಿಯೊಗಳು ಹರಿದಾಡಿವೆ. 

ಆದರೆ ಇತ್ತೀಚೆಗೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು, ಪಾಕಿಸ್ತಾನದಲ್ಲಿದ್ದ ಸೋದರರ ಪೈಕಿ ಒಬ್ಬ ಇಸ್ಲಾಂಗೆ ಮತಾಂತರಗೊಂಡಿದ್ದರೆ  ಭಾರತದಲ್ಲಿರುವವರು ಇನ್ನೂ ಸಿಖ್ ಧರ್ಮವನ್ನೇ ಅನುಸರಿಸುತ್ತಿದ್ದಾರೆ ಎಂಬರ್ಥದ ಪೋಸ್ಟ್ ಅನ್ನು ಪತ್ರಕರ್ತರೆನ್ನಲಾದ ರಾಕೇಶ್ ಕೃಷ್ಣನ್ ಸಿಂಹ ಎಂಬವರು ಪೋಸ್ಟ್ ಮಾಡಿ ಭಾರತೀಯ ಸಿಖ್ ಹೆಮ್ಮೆಯಿಂದ `ವಾಹ್ ಗುರು ದಾ ಖಲ್ಸಾ, ವಾಹ್ ಗುರು ಜಿ ದೀ ಫತಾಹ್'' ಹೇಳಬಹುದಾದರೆ ಪಾಕ್ ಸಹೋದರ ``ಅಲ್ಲಾ ಹು ಅಕ್ಬರ್'' ಹೇಳಬೇಕಿದೆ ಎಂದು ಬರೆದಿದ್ದಾರೆ. ಇವರಲ್ಲದೇ ಹಲವು ಬಲಪಂಥೀಯರು ಇದೇರೀತಿಯ ವಿಚಾರಗಳನ್ನು ಶೇರ್‌ ಮಾಡಿದ್ದಾರೆ. ಆದರೆ ಜನರನ್ನು ದಾರಿತಪ್ಪಿಸುವ ಸಲುವಾಗಿ ಪ್ರಕರಣಕ್ಕೆ ಕೋಮುಬಣ್ಣ ನೀಡಿರುವುದನ್ನು Altnews.in ಬಯಲಿಗೆಳೆದಿದೆ.

ಇಂತಹುದೇ ಅರ್ಥದ ಟ್ವೀಟ್‍ಗಳನ್ನು ಇನ್ನೂ ಹಲವರು ಶೇರ್ ಮಾಡಿದ್ದಾರೆ. ಆದರೆ ಸಹೋದರರ ಅಪೂರ್ವ ಪುರ್ನಮಿಲನದ ವೀಡಿಯೋವನ್ನು ಆಲ್ಟ್ ನ್ಯೂಸ್ ಪರಾಮರ್ಶಿಸಿದಾಗ ವೀಡಿಯೋದ 0.36 ಸೆಕೆಂಡ್ ಅವಧಿಯಲ್ಲಿ ಇಬ್ಬರು ಸೋದರರೂ ``ಸತ್ ಶ್ರೀ ಅಕಾಲ್ ಜೀ'' ಎಂದು ಪರಸ್ಪರ ಶುಭಾಶಯ ಸಲ್ಲಿಸುತ್ತಿರುವುದು ಕೇಳಿಸುತ್ತದೆ. ಡೇಲಿ ಮೇಲ್ ಯು ಕೆ ಮತ್ತು ಇಂಡಿಯಾ ಟುಡೇ ವರದಿಗಳಲ್ಲಿ ಈ ಇಬ್ಬರು ಸಹೋದರರ ಹೆಸರುಗಳನ್ನು ಮೊಹಮ್ಮದ್ ಸಿದ್ದೀಖ್ ಮತ್ತು ಹಬೀಬ್ ಆಲಿಯಾಸ್ ಶೆಲಾ ಎಂದು ನೀಡಲಾಗಿದೆ.

ಸೋದರರ ವೀಡಿಯೋ ತೆಗೆದಿದ್ದ ಪಂಜಾಬಿ ಲೆಹೆರ್ ಯುಟ್ಯೂಬ್ ಚಾನೆಲ್‍ನ ಸಹ ಸ್ಥಾಪಕರಾದ ನಾಸಿರ್ ಧಿಲ್ಲಾನ್ ಅವರನ್ನು ಸಂಪರ್ಕಿಸಿದಾಗ, ಹಬೀಬ್ ಅವರಿಗೆ ವಿಭಜನೆ ಸಂದರ್ಭ ಆರು ತಿಂಗಳು ಹಾಗೂ  ಅವರು ತಮ್ಮ ತಾಯಿಯೊಂದಿಗೆ ತಮ್ಮ ಅಜ್ಜನ ಮನೆಯಿರುವ ಫುಲೆಯಲ್ಲಿದ್ದರು. ಈ ಸಂದರ್ಭ ನಡೆದ ಹಿಂಸಾಚಾರ ವೇಳೆ ಅವರ ತಂದೆ ತೀರಿಹೋದ ನಂತರ ಅವರ ಜತೆಗಿದ್ದ ಸಿದ್ದೀಖ್ ಮತ್ತು ಇನ್ನೊಬ್ಬ ಸೋದರಿ ಅನಾಥರಾಗಿದ್ದರು. ಈ ನಡುವೆ ಹಬೀಬ್ ತಾಯಿಯು ಮಾನಸಿಕವಾಗಿ ಜರ್ಝರಿತರಾಗಿ ನಾಲ್ಕು ವರ್ಷಗಳ ನಂತರ ಆತ್ಮಹತ್ಯೆಗೈದಿದ್ದರು.

ನಾಸಿರ್ ಹೇಳುವಂತೆ ಇಬ್ಬರು ಸೋದರರೂ ಮುಸ್ಲಿಮರಾಗಿದ್ದು, ಭಾರತದಲ್ಲಿ ಉಳಿದಿದ್ದ ಹಬೀಬ್ ಅವರನ್ನು ಸ್ಥಳೀಯ ಕುಟುಂಬ ದತ್ತು ಪಡೆದ ನಂತರ ಅಲ್ಲಿ ಅವರು ಕೆಲಸ ಮಾಡುತ್ತಿದ್ದರು. ಇಬ್ಬರು ಸೋದರರ ಗುರುತು ಕಾರ್ಡುಗಳನ್ನೂ ನಾಸಿರ್ ತೋರಿಸಿದ್ದಾರೆ. ಹಬೀಬ್ ತಮ್ಮ ಗ್ರಾಮದಲ್ಲಿ ಸಿಕಾ ಖಾನ್ ಎಂದು ಕರೆಯಲ್ಪಡುತ್ತಾರೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿರುವ ಸೋದರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಹಾಗೂ ಭಾರತದಲ್ಲಿರುವಾಗ ಸಿಖ್ ಆಗಿಯೇ ಉಳಿದಿದ್ದಾರೆಂಬ ಹೇಳಿಕೆಗಳು ಸುಳ್ಳೆಂದು ತಿಳಿದು ಬರುತ್ತವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News